ವಿಶಿಷ್ಟ ಆಚರಣೆ : ನಂಬಲಸಾಧ್ಯ | ಬುಲೆಟ್ ಬೈಕ್ ದೇವಸ್ಥಾನ, ಇಲ್ಲಿಗೆ ಸಾಗರೋಪಾದಿಯಲ್ಲಿ ಸೇರುತ್ತಾರೆ ಭಕ್ತರು!
ದೇವಸ್ಥಾನಗಳಲ್ಲಿ ಶಿವ, ವಿಷ್ಣು, ಪಾರ್ವತಿ, ಲಕ್ಷ್ಮಿ, ಶಾರದ ಹೀಗೆ ಅನೇಕ ದೇವಿ- ದೇವತೆಯರನ್ನು ಪೂಜಿಸುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ದೇವಸ್ಥಾನದಲ್ಲಿ ಬುಲೆಟ್ ಬೈಕ್ ಅನ್ನು ದೇವರೆಂದು ಪೂಜಿಸಿ, ಆರಾಧಿಸುತ್ತಿದ್ದಾರೆ!
ಹೌದು, ವಿಚಿತ್ರ ಎನಿಸಿದರೂ ಇದು ಸತ್ಯ. ರಾಜಸ್ಥಾನದ ಜೋಧುರ ಬಳಿಯ ಪಾಲಿ ಜಿಲ್ಲೆಯಲ್ಲಿ ಓಂ ಬನ್ನಾ ದೇವಸ್ಥಾನವಿದೆ. ಇಲ್ಲಿ ಜನರು ಬುಲೆಟ್ ಬೈಕನ್ನೇ ದೇವರೆಂದು ಪೂಜಿಸುತ್ತಾರೆ. ಓಂ ಸಿಂಗ್ ರಾಥೋಡ್, ಬನ್ನಾ ಮತ್ತು ಬುಲೆಟ್ ಬಾಬಾ ಎಂಬ ಹೆಸರಿನಿಂದಲೂ ಇದನ್ನು ಕರೆಯಲಾಗುತ್ತದೆ. ಈ ದೇವಸ್ಥಾನ ಸ್ಥಾಪನೆಯಗಲು ಕಾರಣವೇನು ಗೊತ್ತಾ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
1988ರ ಮೇ 5.ರಂದು ಓಂ ಸಿಂಗ್ ರಾಥೋಡ್ ಎಂಬ ಯುವಕ ಪಾಲಿಯ ಸಂದೇರಾವ್ ಬಳಿಯ ಬಂಗ್ಲಿ ಪಟ್ಟಣದಿಂದ ಚೋಟಿಲಾಗೆ ಇದೇ ಬುಲೆಟ್ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಬೆಳಗ್ಗಿನ ಸಮಯವಾಗಿದ್ದರಿಂದ ಮಂಜು ಕವಿದಿತ್ತು. ಹೀಗಾಗಿ, ಸಾಗುವ ದಾರಿಯಲ್ಲಿ ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಇವರು ಅಲ್ಲೇ ಅಸುನೀಗಿದರು.
ಇದಾದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಬೈಕನ್ನು ಠಾಣೆಯಲ್ಲಿ ಇರಿಸಿದ್ದರು. ಆದರೆ, ಇದಾದ ಮರುದಿನ ಇದ್ದಕ್ಕಿದ್ದಂತೆಯೇ ಬೈಕ್ ಕಾಣೆಯಾಗಿ ಅಪಘಾತ ನಡೆದ ಸ್ಥಳದಲ್ಲೇ ಸಿಕ್ಕಿತು. ಮತ್ತೆ ಅಲ್ಲಿಂದ ಠಾಣೆಗೆ ಬೈಕನ್ನು ಪೊಲೀಸರು ತಂದು ಇಂಧನದ ಟ್ಯಾಂಕ್ ಖಾಲಿ ಮಾಡಿದರು. ಹೀಗೆ ಮಾಡಿದರೂ ಮರುದಿನ ಬೈಕ್ ಮತ್ತೆ ಠಾಣೆಯಿಂದ ಕಾಣೆಯಾಗಿ ಅಪಘಾತದ ಸ್ಥಳದಲ್ಲೇ ಕಂಡು ಬಂದಿತ್ತಂತೆ. ಹೀಗೆ ಒಂದಷ್ಟು ಸಲ ನಡೆದಿತ್ತಂತೆ.
ಇದು ಬಳಿಕ ಸ್ಥಳೀಯರಿಗೆ ಗೊತ್ತಾಗಿ ಜನರು ಇದನ್ನು ಪವಾಡ ಎಂದೇ ನಂಬಿದ್ದರು. ಹೀಗಾಗಿ, ಸ್ಥಳೀಯರು ಬೈಕ್‌ಗೆ ಪೂಜಿಸಲು ಆರಂಭಿಸಿದರು. ಕ್ರಮೇಣ ಈ ವಿಷಯ ಸುತ್ತಲಿನ ಊರಿನ ಜನರಿಗೂ ಗೊತ್ತಾಗಿ ಎಲ್ಲರೂ ಬೈಕಿಗೊಂದು ಗುಡಿ ಕಟ್ಟಿದರು. ಬುಲೆಟ್ ಬೈಕ್‌ನ ದೇವಸ್ಥಾನಕ್ಕೆ ಈಗಲೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ.