SBI Loan EMI: ಬಡ್ಡಿ ದರ ಹೆಚ್ಚಿಸಿದ ಎಸ್ಬಿಐ; ಹೆಚ್ಚಲಿದೆ ಇಎಂಐ ಮೊತ್ತ !
ಆರ್ಬಿಐ ರೆಪೊ ದರಕ್ಕೆ ಅನುಗುಣವಾಗಿ ಬ್ಯಾಂಕ್ಗಳು ಬಡ್ಡಿ ದರದಲ್ಲಿಯೂ ಪರಿಷ್ಕರಣೆ ಮಾಡುತ್ತವೆ. ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸಲು ಆರ್ಬಿಐ ಮೇ ನಂತರ ಈವರೆಗೆ ರೆಪೊ ದರವನ್ನು 190 ಮೂಲಾಂಶದಷ್ಟು ಹೆಚ್ಚಳ ಮಾಡಿದ್ದು ಶೇಕಡಾ 5.90ಕ್ಕೆ ನಿಗದಿಪಡಿಸಿದೆ. ಇದರ ಬೆನ್ನಲ್ಲೇ ಎಸ್ಬಿಐ ಸೇರಿದಂತೆ ಹೆಚ್ಚಿನ ಬ್ಯಾಂಕ್ಗಳು ಬಡ್ಡಿ ದರ ಹೆಚ್ಚಳ ಮಾಡಿವೆ.
ಹೌದು..ಸಾಲದ ಮೇಲಿನ ಕನಿಷ್ಠ ಬಡ್ಡಿ ದರ ಅಥವಾ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (MCLR) ಅನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶೇಕಡಾ 10ರಿಂದ 15ರಷ್ಟು ಹೆಚ್ಚಿಸಿದೆ. ಎಂಸಿಎಲ್ಆರ್ ಅಥವಾ ಕನಿಷ್ಠ ಬಡ್ಡಿ ದರದಲ್ಲಿ ಬದಲಾವಣೆ ಆದರೆ ಸಾಲದ ಮೇಲೂ ಅದು ಪ್ರಭಾವ ಬೀರಲಿದ್ದು, ಬಡ್ಡಿ ದರ ಹೆಚ್ಚಾದಂತೆ ಸಾಲದ ಇಎಂಐ ಮೊತ್ತವೂ ಹೆಚ್ಚಾಗುತ್ತದೆ.
ಎಂಸಿಎಲ್ಆರ್ ಎಂದರೇನು?ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ ಅಥವಾ ಎಂಸಿಎಲ್ಆರ್ ಎಂದರೆ ಬ್ಯಾಂಕ್ಗಳು ಗ್ರಾಹಕರಿಗೆ ನೀಡುವ ಕನಿಷ್ಠ ಬಡ್ಡಿ ದರದ ಆಫರ್ ಆಗಿದೆ. ವಿವಿಧ ರೀತಿಯ ಸಾಲಗಳ ಮೇಲಿನ ಬಡ್ಡಿದರಗಳನ್ನು ನಿರ್ಧರಿಸಲು 2016ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಇದನ್ನು ಪರಿಚಯಿಸಿದ್ದು, ಸರಳವಾಗಿ ಹೇಳುವುದಾದರೆ, ಬ್ಯಾಂಕ್ಗಳು ಸಾಲ ನೀಡಲು ಅನುಸರಿಸುವ ಬಡ್ಡಿಯ ಮಾನದಂಡ ಎಂಸಿಎಲ್ಆರ್ ಎನ್ನಬಹುದಾಗಿದೆ.
ಈ ವಿಧಾನದಲ್ಲಿ ಸಾಲದ ಮೇಲಿನ ಬಡ್ಡಿಯ ಕನಿಷ್ಠ ದರವೊಂದನ್ನು ನಿಗದಿಪಡಿಸಿರಲಾಗುತ್ತದೆ. ನಿಗದಿ ಪಡಿಸಿದ ಬಡ್ಡಿ ದರಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ಗಳು ಸಾಲ ನೀಡುವುದಿಲ್ಲ.
(ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ )ಎಂಸಿಎಲ್ಆರ್ ಅಥವಾ ಕನಿಷ್ಠ ಬಡ್ಡಿ ದರದಲ್ಲಿ ಬದಲಾವಣೆ ಆದರೆ ಸಾಲದ ಮೇಲೂ ಅದು ಪರಿಣಾಮ ಬೀರುತ್ತದೆ. ಬಡ್ಡಿ ದರ ಹೆಚ್ಚಾದರೆ ಸಾಲದ ಇಎಂಐ ಮೊತ್ತವೂ ಹೆಚ್ಚಾಗಿಯೇ ಆಗುತ್ತದೆ. ಈಗಾಗಲೇ ಕನಿಷ್ಠ ಬಡ್ಡಿ ದರದಲ್ಲಿ ಸಾಲ ಪಡೆದವರಾದರೆ ಮರುಪಾವತಿಯ ದಿನಾಂಕ ಬಂದ ಕೂಡಲೇ ಬಡ್ಡಿದರದ ವ್ಯತ್ಯಾಸ ಗಮನಕ್ಕೆ ಬರಲಿದ್ದು, ಕನಿಷ್ಠ ಬಡ್ಡಿ ದರದಲ್ಲಿ ಹೊಸ ಸಾಲ ಪಡೆಯುವವರಾದರೆ ಆರಂಭದಿಂದಲೇ ಹೆಚ್ಚಿನ ಇಎಂಐ ಪಾವತಿಸಬೇಕಾಗುತ್ತದೆ .
ಪರಿಷ್ಕೃತ ದರ ನವೆಂಬರ್ 15 ಜಾರಿಗೆ ಬರಲಿದ್ದು, ಎಂಸಿಎಲ್ಆರ್ ಜತೆ ಲಿಂಕ್ ಆಗಿರುವ ಸಾಲದ ಇಎಂಐ ಮೊತ್ತ ಹೆಚ್ಚಾಗಲಿದೆ. ಒಂದು ತಿಂಗಳ ಮತ್ತು ಮೂರು ತಿಂಗಳ ಎಂಸಿಎಲ್ಆರ್ ದರವನ್ನು ಶೇಕಡಾ 7.60ರಿಂದ 7.75ಕ್ಕೆ ಹೆಚ್ಚಿಸಲಾಗಿದೆ.
ಆರು ತಿಂಗಳುಗಳಿಂದ 1 ವರ್ಷದ ವರೆಗಿನ ಎಂಸಿಎಲ್ಆರ್ ದರವನ್ನು ಶೇಕಡಾ 7.90ರಿಂದ 8.05ಕ್ಕೆ ಹೆಚ್ಚಳ ಮಾಡಲಾಗಿದ್ದು, ಮೂರು ವರ್ಷಗಳವರೆಗಿನ ಎಂಸಿಎಲ್ಆರ್ ದರವನ್ನು ಶೇಕಡಾ 8.25ರಿಂದ 8.35ಕ್ಕೆ ಏರಿಕೆ ಮಾಡಲಾಗಿದೆ.
ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸಲು ಆರ್ಬಿಐ ಮೇ ನಂತರ ಈವರೆಗೆ ಅನೇಕ ಬಾರಿ ರೆಪೊ ದರವನ್ನು ಹೆಚ್ಚಳ ಮಾಡಿದ್ದು, ಇದರ ಬೆನ್ನಲ್ಲೇ ಎಸ್ಬಿಐ ಸೇರಿದಂತೆ ಹೆಚ್ಚಿನ ಬ್ಯಾಂಕ್ಗಳು ಬಡ್ಡಿ ದರ ಹೆಚ್ಚಳ ಮಾಡಿವೆ. ಇದರಿಂದಾಗಿ, ಸ್ಥಿರ ಠೇವಣಿ, ಆರ್ಡಿ ಸೇರಿದಂತೆ ವಿವಿಧ ಠೇವಣಿಗಳ ಬಡ್ಡಿ ದರ ಹೆಚ್ಚಾಗಿರುವ ಜೊತೆಗೆ ಸಾಲದ ಮೇಲಿನ ಬಡ್ಡಿ ದರವನ್ನೂ ಹೆಚ್ಚಿಸಲಾಗಿದ್ದು, ಇದೀಗ ಎಸ್ಬಿಐ ಸಾಲದ ಮೇಲಿನ ಕನಿಷ್ಠ ಬಡ್ಡಿ ದರವನ್ನೂ ಹೆಚ್ಚಿಸಿದ್ದು ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ.