ಜನರಿಗೆ ರಿಲ್ಯಾಕ್ಸ್ | ನಂದಿನಿ ಹಾಲಿನ ಬೆಲೆ ಏರಿಕೆ ಸದ್ಯಕ್ಕಿಲ್ಲ | ನ.20 ರ ನಂತರ ಫೈನಲ್ ನಿರ್ಧಾರ!
ನಂದಿನಿ ಹಾಲು ಹಾಗೂ ಮೊಸರಿನ ಬೆಲೆ 3 ರೂ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೆ, ಇಂದಿನಿಂದ ಹಾಲಿನ ಪರಿಷ್ಕ್ರತ ದರ ಜಾರಿಯಾಗಲಿದೆ ಎಂಬ ವಿಚಾರ ಸಾಮಾನ್ಯ ಜನರನ್ನು ಕಂಗೆಡಿಸಿತ್ತು. ಆದರೀಗ ಜನತೆಗೆ ಸರ್ಕಾರ ಕೊಂಚ ಮಟ್ಟಿಗೆ ನಿರಾಳ ರಾಗುವ ಸೂಚನೆ ನೀಡಿದೆ.
ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆ ಮಾಡುವ ಕೆಎಂಎಫ್ ನಿರ್ಧಾರಕ್ಕೆ ಸರ್ಕಾರ ಬ್ರೇಕ್ ನೀಡಿದ್ದು, ಸದ್ಯಕ್ಕೆ ಬೆಲೆ ಏರಿಕೆ ಮಾಡದಿರಲು ಸರ್ಕಾರ ನಿರ್ಧರಿಸಿದೆ. ಹಲವು ತಿಂಗಳುಗಳ ಹಿಂದೆಯೇ ಈ ನಿಟ್ಟಿನಲ್ಲಿ ಸರ್ಕಾರದ ಮುಂದೆ ಕೆಎಂಎಫ್ ಪ್ರಸ್ತಾವನೆ ಇಟ್ಟಿದ್ದು, ನೆನ್ನೆ ಸೋಮವಾರ ಸರ್ಕಾರ ಕೂಡ ಇದಕ್ಕೆ ಅನುಮೋದನೆ ಕೊಟ್ಟಿದೆ ಎಂಬಂತಹ ಸುದ್ದಿ ದಟ್ಟವಾಗಿ ಕೇಳಿಬಂದು ಸಾಮಾನ್ಯ ಜನತೆಯ ನಿದ್ದೆ ಗೆಡಿಸಿತ್ತು. ಅದರ ಜೊತೆಗೆ ನವೆಂಬರ್ 15, ಮಂಗಳವಾರದಿಂದಲೇ ಹಾಲು ಮತ್ತು ಮೊಸರು ದರವನ್ನು 3 ರೂಗಳಷ್ಟು ಏರಿಕೆ ಮಾಡುವ ನಿರ್ಧಾರ ಕೂಡ ಕೈಗೊಳ್ಳಲಾಗಿ ಕೆಎಂಎಫ್ ಬೆಲೆ ಏರಿಕೆ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಸರ್ಕಾರ ಬೆಲೆ ಏರಿಕೆಯ ನಿರ್ಧಾರವನ್ನು ಹಿಂಪಡೆದು ಜನತೆಗೆ ರಿಲ್ಯಾಕ್ಸ್ ನೀಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆಯಂತೆ ಹಾಲು ಮತ್ತು ಮೊಸರು ದರ ಏರಿಕೆ ಘೋಷಣೆಯನ್ನು ತಡೆಯಲಾಗಿದ್ದು, ನವೆಂಬರ್ 20ರ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂಬ ಕುರಿತಾಗಿ ಸರ್ಕಾರದ ಮೂಲಗಳು ಹೇಳಿವೆ. ನವೆಂಬರ್ 20ರ ನಂತರ ಸರ್ಕಾರ ಸಭೆ ನಡೆಸಿ, ಈ ಕುರಿತು ಚರ್ಚಿಸಿ ಮುಂದಿನ ಹೆಜ್ಜೆ ಇಡುವ ಸಾದ್ಯತೆ ದಟ್ಟವಾಗಿದೆ. ಇದರ ಜೊತೆಗೆ ಮೂಲಗಳ ಪ್ರಕಾರ, ಹಾಲಿನ ಬೆಲೆ ಏರಿಸುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಹಾಲು ಮತ್ತು ಮೊಸರು ಬೆಲೆ ಏರಿಕೆ ಮಾಡುವ ಕೆಎಂಎಫ್ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿರುವುದು ರೈತರಿಗೆ ಸಹಾಯಧನ ಹೆಚ್ಚಿಸುವ ಉದ್ದೇಶ. ಆದರೆ, ಬೆಲೆ ಏರಿಕೆ ಮಾಡಿದರೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಬೇಕಾದ ಉಭಯ ಸಂಕಟ ಸರ್ಕಾರದಾಗಿದ್ದು, ಈಗಾಗಲೇ ಹಲವು ಅಗತ್ಯ ವಸ್ತುಗಳ ಬೆಲೆ ಏರಿರುವ ಅಸಹನೆಯಲ್ಲಿರುವ ಜನರಿಗೆ ಹಾಲು ಮತ್ತು ಮೊಸರಿನ ಬೆಲೆ ಹೆಚ್ಚಳವಾದರೆ ಸಹನೆಯ ಕಟ್ಟೆ ಒಡೆಯಬಹುದು ಎಂಬ ಭೀತಿ ಸರ್ಕಾರಕ್ಕೆ ಇದೆ.
ಹೀಗಾಗಿ, ಸಮಯ ಸಂದರ್ಭ ನೋಡಿಕೊಂಡು ನಿರ್ಧಾರ ಕೈಗೊಳ್ಳುವುದು ಸರ್ಕಾರದ ಉದ್ದೇಶ ಎನ್ನಲಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ಬೆಲೆ ತುಸು ಕಡಿಮೆ ಇದ್ದು, ಜೊತೆಗೆ ಹೈನುಗಾರಿಕೆಯ ವೆಚ್ಚ ಹೆಚ್ಚಾಗಿರುವುದರಿಂದ ರಾಜ್ಯದಲ್ಲೂ ಹಾಲು ದರ ಹೆಚ್ಚಿಸಬೇಕು ಎಂದು ಹಾಲು ಉತ್ಪಾದಕ ರೈತರು ಬಹಳ ದಿನಗಳಿಂದ ಒತ್ತಾಯ ಮಾಡುತ್ತಾ ಬಂದಿದ್ದಾರೆ. ಸದ್ಯಕ್ಕೆ ಸರ್ಕಾರ ಇದಕ್ಕೆ ತಡೆ ನೀಡಿದ್ದು , ಮುಂದಿನ ದಿನಗಳಲ್ಲಿ ಏನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.