Accident Insurance : KSRTC ಸಿಬ್ಬಂದಿಗಳಿಗೆ ಭರ್ಜರಿ ಸಿಹಿ ಸುದ್ದಿ !

ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಕೆಎಸ್ ಆರ್ ಟಿಸಿ ಸಿಬ್ಬಂದಿಗೆ 1 ಕೋಟಿ ರೂ. ಮೌಲ್ಯದ ವಿಮೆ ಸೌಲಭ್ಯ ಜಾರಿಗೊಳಿಸಲಾಗಿದೆ. ಬೆಂಗಳೂರಿನ ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎಂ.ಚಂದ್ರಪ್ಪ ಅವರ ಸಮ್ಮುಖದಲ್ಲಿ ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಮತ್ತು ಯುನೈಟೆಡ್ ಇಂಡಿಯಾ ವಿಮಾ ಕಂಪೆನಿಯ ಪ್ರಧಾನ ವ್ಯವಸ್ಥಾಪಕ ಅಂಗ್ರೂಪ್ ಸೋನಂ ಒಡಂಬಡಿಕೆಗೆ ಸಹಿ ಹಾಕಿದ್ದಾರೆ.

 

ಈಗಾಗಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಕಾರದಲ್ಲಿ 50 ಲಕ್ಷ ರೂ. ವಿಮೆ ಇದ್ದೂ, ಇದೀಗ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಸಹಕಾರದಲ್ಲಿ 50 ಲಕ್ಷ ರೂ. ವಿಮೆ ಸೌಲಭ್ಯ ಒದಗಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಮೂಲಕ ನಿಗಮದ ಸಿಬ್ಬಂದಿಗೆ ಅಪಘಾತ ವಿಮೆಯಾಗಿ ಒಟ್ಟು 1 ಕೋಟಿ ರೂ. ಸೌಲಭ್ಯ ಸಿಕ್ಕಂತಾಗುತ್ತದೆ.

ಒಪ್ಪಂದದ ಪ್ರಕಾರ, ನಿಗಮದ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗಲೂ ಅಥವಾ ಇಲ್ಲದಿದ್ದಾಗಲೂ ಅಪಘಾತದಲ್ಲಿ ಮೃತಪಟ್ಟರೆ 50 ಲಕ್ಷ ರೂ. ವಿಮಾ ಅನ್ವಯವಾಗುತ್ತದೆ. ಅಪಘಾತದಲ್ಲಿ ಸಿಬ್ಬಂದಿ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದರೂ 50 ಲಕ್ಷ ರೂ.ಗಳ ವಿಮಾ ಪರಿಹಾರ ಸಿಗಲಿದೆ. ಒಂದು ವೇಳೆ ಸಿಬ್ಬಂದಿಗೆ ತಾತ್ಕಾಲಿಕ ಅಂಗವೈಕಲ್ಯ ಉಂಟಾಗಿ, ತನ್ನ ಮೂಲ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಅಸಮರ್ಥನಾದರೆ ಆತ ಚೇತರಿಸಿಕೊಳ್ಳುವವರೆಗೆ 50 ಲಕ್ಷ ರೂ. ಮೊತ್ತದ ಶೇ.1ರಷ್ಟು ಮೊತ್ತ (5 ಸಾವಿರ ರೂ.) ಪ್ರತಿ ವಾರ ಹೆಚ್ಚಾದಂತೆ ಅಥವಾ ಅವರ ಮಾಸಿಕ ಸಂಬಳದ ಶೇ.25ರಷ್ಟನ್ನು ಸಿಬ್ಬಂದಿಗೆ ವಿಮಾ ಸಂಸ್ಥೆಯು ನೀಡಲಿದೆ.

ಪಾಲಿಸಿದಾರರು ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಕುಟುಂಬದವರಿಗೆ 50ಲಕ್ಷ ರೂ. ವಿಮಾ ಯೋಜನೆಯಿಂದ ಪರಿಹಾರದ ಹಣ ತಕ್ಷಣವೇ ದೊರೆಯಲಿದೆ. ಈಗಾಗಲೇ ಇದು ಭಾರತೀಯ ಸ್ಟೇಟ್ ಬ್ಯಾಂಕ್ ಸಹಭಾಗಿತ್ವದಲ್ಲಿ ಜಾರಿಯಲ್ಲಿದೆ.

ಒಪ್ಪಂದದ ಬಳಿಕ ಮಾತನಾಡಿದ ಕೆಎಸ್ ಆರ್ ಟಿಸಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಂ.ಚಂದ್ರಪ್ಪ ಅವರು, ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪೆನಿ ಜೊತೆಗೆ 50 ಲಕ್ಷ ರೂ.ವರೆಗೆ ಅಪಘಾತ ಪರಿಹಾರ ವಿಮಾ ಯೋಜನೆಗೆ ಸಿಬ್ಬಂದಿಗೆ ಒದಗಿಸುವ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದ್ದೂ, ಈ ವಿಮಾ ಯೋಜನೆಗೆ ಸಿಬ್ಬಂದಿ ಮಾಸಿಕ 62.50 ರೂ. ಅದಕ್ಕೆ ಜಿಎಸ್ ಟಿ ಸೇರಿದಂತೆ ವಾರ್ಷಿಕ ರೂ.885 ಪಾವತಿಸಬೇಕಾಗುತ್ತದೆ. ಈ ವಿಮಾ ಯೋಜನೆಯನ್ನು ಕೆಎಸ್ ಆರ್ ಟಿಸಿ ನಿಗಮವು ಕಾರ್ಮಿಕರ ಹಾಗೂ ಅವರ ಕುಟುಂಬದ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಜಾರಿಗೊಳಿಸುತ್ತಿರುವ ಅತ್ಯುತ್ತಮ ಯೋಜನೆ ಆಗಿದೆ ಎಂದು ತಿಳಿಸಿದರು.

Leave A Reply

Your email address will not be published.