ನಾಗರಿಕರ ಹೋರಾಟಕ್ಕೆ ಜಯ : ಸುರತ್ಕಲ್ ಟೋಲ್ ಸಂಗ್ರಹ ರದ್ದು
ಮಂಗಳೂರು:ಇಲ್ಲಿನ ಸುರತ್ಕಲ್ ಸಮೀಪ ಅಕ್ರಮವಾಗಿ ನಿರ್ಮಿಸಲಾಗಿರುವ ಟೋಲ್ ಗೇಟ್ ರದ್ದು ಪಡಿಸಬೇಕು ಎನ್ನುವ ಹಲವು ದಿನಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದ್ದು,ಸುರತ್ಕಲ್ ಟೋಲ್ ಗೇಟ್ ರದ್ದು ಪಡಿಸುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
ಈ ಬಗ್ಗೆ ಕಳೆದ ಕೆಲ ದಿನಗಳ ಹಿಂದೆ ಬೃಹತ್ ಪ್ರತಿಭಟನೆ ನಡೆದಿದ್ದು,ಪ್ರತಿಭಟನಾ ಕಾರರರೇ ಟೋಲ್ ಗೇಟ್ ತೆರವುಗೊಳಿಸುವುದಾಗಿ ಘೋಷಿಸಿದ್ದರಿಂದ ರಾತ್ರೋ ರಾತ್ರಿ ಪ್ರತಿಭಟನೆ ನಡೆಸದಂತೆ ಪೊಲೀಸರು ಪ್ರತಿಭಟನೆಯ ಪ್ರಮುಖರ ಮನೆಗಳಿಗೆ ತೆರಳಿ ನೋಟೀಸ್ ನೀಡಿದ್ದರು.
ಬಳಿಕ ಪ್ರತಿಭಟನೆ ನಡೆದು, ಆ ಬಳಿಕ ಟೋಲ್-ಟ್ರೋಲ್ ವಿರುದ್ಧ ಪ್ರಕರಣ ದಾಖಲಾಗಿ,ಸಚಿವ, ಸಂಸದರ ವಿರುದ್ಧ ಆಕ್ರೋಶ ವ್ಯಕ್ತವಾಗಿ, ಅನಿರ್ದಿಷ್ಟಾವಧಿ ಸತ್ಯಾಗ್ರಹ ಕಳೆದ ಹದಿನೇಳು ದಿನಗಳಿಂದ ಟೋಲ್ ಪಕ್ಕದಲ್ಲೇ ನಡೆಯುತ್ತಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರದ ಗಮನಸೆಳೆದು, ಸದ್ಯ ಟೋಲ್ ರದ್ದು ಮಾಡುವ ತಾಂತ್ರಿಕ ಅಂಶ ದೊರಕಿದಂತಾಗಿದೆ ಎಂದು ನಾಗರಿಕರ ಪರವಾಗಿ ಕೇಂದ್ರ ಸಚಿವರುಗಳು ಹಾಗೂ ಪ್ರಧಾನಿಗೆ ನಾಗರಿಕರ ಪರವಾಗಿ ಟ್ವೀಟ್ ಮಾಡುವ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.