ಕಾಮುಕ ಶಿಕ್ಷಕನ ಕಾಮಕಾಂಡ | ಬಾಲಕಿಯರನ್ನು ಕಸಗುಡಿಸಲು ಕರೆಸಿ ಲೈಂಗಿಕ ದೌರ್ಜನ್ಯ, ಪಾಪಿ ಶಿಕ್ಷಕ ಅರೆಸ್ಟ್!
ಇದೀಗ ರಾಜ್ಯದಲ್ಲಿ ಶಾಲಾ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚಾಗಿದೆ. ಇದು ನಿಜಕ್ಕೂ ಆತಂಕಕಾರಿ ವಿಷಯವೇ ಸರಿ. ರಾಜ್ಯದಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿದ್ದು, ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರು ಯೋಚಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಪೋಷಕರು ಇನ್ನೂ ಭಯಭೀತರಾಗುವ ಘಟನೆ ಹಾಸನದಲ್ಲಿ ನಡೆದಿದೆ.
ಬೆಂಗಳೂರಿನ ಸರ್ಕಾರಿ ಶಾಲೆಯೊಂದರಲ್ಲಿ ಬಾಲಕಿಯರ ಮೇಲೆ ದೈಹಿಕ ಶಿಕ್ಷಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿತ್ತು. ಈ ಘಟನೆ ನಂತರ ಇದೀಗ ಹಾಸನದಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಖಾಸಗಿ ಶಾಲೆಯ ಶಿಕ್ಷಕನೊಬ್ಬ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಈ ಬಗ್ಗೆ ತಿಳಿದ ಪೋಷಕರು ಸೇರಿದಂತೆ ಸ್ಥಳೀಯರು ಆತನಿಗೆ ಧರ್ಮದೇಟು ನೀಡಿದ್ದಾರೆ.
ಬೇಲೂರು ತಾಲೂಕಿನ ಖಾಸಗಿ ಶಾಲೆಯ ಮುಖ್ಯ ಶಿಕ್ಷಕ ನರೇಂದ್ರ ಎಂಬಾತ ವಿದ್ಯಾರ್ಥಿನಿಯರನ್ನು ತನ್ನ ಆಫೀಸ್ ರೂಂಗೆ ಕರೆಸಿಕೊಂಡು ಕಸ ಗುಡಿಸಲು ಹೇಳಿ ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಈತನ ನೀಚ ಕೃತ್ಯದಿಂದ ಮನನೊಂದ ವಿದ್ಯಾರ್ಥಿನಿಯರು ಈ ಬಗ್ಗೆ ಯಾರಿಗೂ ಹೇಳುತ್ತಿರಲಿಲ್ಲ. ಕೊನೆಗೂ ಮುಖ್ಯ ಶಿಕ್ಷಕನ ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿನಿಯರು ಸಹಪಾಠಿಗಳ ಜೊತೆ ವಿಷಯವನ್ನು ಹೇಳಿಕೊಂಡಿದ್ದಾರೆ.
ನಂತರ ಈತನ ನೀಚ ಕೃತ್ಯದ ವಿಚಾರ ಪೋಷಕರಿಗೆ ತಲುಪಿದೆ. ವಿಷಯ ತಿಳಿದು ಆಕ್ರೋಶಗೊಂಡ ಪೋಷಕರು ಕಾಮುಕ ಶಿಕ್ಷಕನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಬಗ್ಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ.
ಬೆಂಗಳೂರಿನಲ್ಲೂ 13 ಸರ್ಕಾರಿ ಶಾಲಾ ಬಾಲಕಿಯರ ಮೇಲೆ ದೈಹಿಕ ಶಿಕ್ಷಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ದೈಹಿಕ ಶಿಕ್ಷಕ ಆಂಜಿನಪ್ಪ (50)ನನ್ನು ಪೋಕ್ಸೋ ಕಾಯ್ದೆಯಡಿ ಬೆಂಗಳೂರಿನ ಹೆಬ್ಬಾಳ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಾಗೂ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.