ಕಂಕುಳಲ್ಲಿ ದುರ್ವಾಸನೆಯೇ ? ಈ ಟಿಪ್ಸ್ ಫಾಲೋ ಮಾಡಿ, ವಾಸನೆ ಮಾರುದೂರ ಹೋಗೋ ಹಾಗೇ ಮಾಡಿ!
ಕಂಕುಳಿನಿಂದ ಬರುವ ದುರ್ವಾಸನೆಗಿಂತ ದೊಡ್ಡದಾದ ಮುಜುಗರ ಮತ್ತೊಂದು ಇರಲಿಕ್ಕಿಲ್ಲ. ಕೆಲವರಿಗಂತೂ ಸ್ಪ್ರೇ ಮಾಡಿಕೊಂಡಿರುವ ಡಿಯೋಡ್ರೆಂಟ್ ಬೆವರಿನ ಜೊತೆ ಸೇರಿ ಇನ್ನಷ್ಟು ದುರ್ವಾಸನೆಗೆ ಕಾರಣವಾಗಬಹುದು. ಈ ದುರ್ವಾಸನೆಗೆ ಹಲವಾರು ಕಾರಣಗಳಿರಬಹುದು. ಇದರಲ್ಲಿ ಮುಖ್ಯವಾಗಿ ಅನಾರೋಗ್ಯಕರ ಜೀವನಶೈಲಿ, ಕಂಕುಳನ್ನು ಸರಿಯಾಗಿ ಸ್ವಚ್ಛಗೊಳಿಸದೆ ಇರುವುದು, ಫಂಗಲ್ ಬೆಳವಣಿಗೆ, ಹವಾಮಾನ ಇತ್ಯಾದಿ. ಕಾರಣ.
ಕಂಕುಳಿನ ದುರ್ವಾಸನೆಯಿಂದ ನಾಲ್ಕು ಜನರ ಮುಂದೆ ಓಡಾಡಲು ಮುಜುಗರವಾಗುತ್ತದೆ. ಆದರೆ ನೀವು ಇದರಿಂದ ಮುಕ್ತಿ ಪಡೆಯಬಹುದು. ನಾವು ಹೇಳುವ ಈ ಸಿಂಪಲ್ ಮನೆಮದ್ದನ್ನೊಮ್ಮೆ ಟ್ರೈ ಮಾಡಿ ನೋಡಿ. ಕಂಕುಳಿನಿಂದ ಬರುವ ದುರ್ವಾಸನೆಯನ್ನು ಆರಾಮದಲ್ಲಿ ಹೋಗಲಾಡಿಸಬಹುದು.
ಕೊಬ್ಬರಿ ಎಣ್ಣೆ:- ಕಂಕುಳಿನ ಬೆವರಿನ ವಾಸನೆಯನ್ನು ಹೋಗಲಾಡಿಸಲು ಕೊಬ್ಬರಿ ಎಣ್ಣೆಯೊಂದಿಗೆ ಮರಗೆಣಸಿನ ಪುಡಿ, ಅಡುಗೆ ಸೋಡಾ ಹಾಗೂ ಗಂಧದ ಎಣ್ಣೆಯನ್ನು ಮಿಕ್ಸ್ ಮಾಡಿ, ಪೇಸ್ಟ್ ತಯಾರಿಸಿ ಹಚ್ಚಬಹುದು.
ಮಾಡುವ ವಿಧಾನ: 1/3 ಚಮಚ ಕೊಬ್ಬರಿ ಎಣ್ಣೆ, 1/4 ರಷ್ಟು ಅಡುಗೆ ಸೋಡಾ, 1/4ರಷ್ಟು ಮರಗೆಣಸಿನ ಪುಡಿ ಹಾಗೂ 5 ರಿಂದ 6 ಹನಿ ಗಂಧದ ಎಣ್ಣೆಯನ್ನು ಹಾಕಿ ಚೆನ್ನಾಗಿ ಪೇಸ್ಟ್ ತಯಾರಿಸಿ, ನಂತರ ಅದನ್ನು ದುರ್ವಾಸನೆ ಬೀರುತ್ತಿರುವ ಕಂಕುಳಿಗೆ ಹಚ್ಚಿ. ಅದು ಒಣಗಿದ ಮೇಲೆ ಸ್ವಚ್ಛಗೊಳಿಸಿ. ವಾರದಲ್ಲಿ ಎರಡು ಬಾರಿಯಾದರೂ ಇದನ್ನು ಮಾಡಿ.
ಅಲ್ಲದೇ ಹೀಗೂ ಮಾಡಬಹುದು. ಕೊಬ್ಬರಿ ಎಣ್ಣೆಯ ಜೊತೆಗೆ ಅಡುಗೆ ಸೋಡ, 4 ರಿಂದ 5 ಹನಿ ಬೇವಿನ ಎಣ್ಣೆ ಹಾಗೂ ಆರೋರೂಟ್ ಪುಡಿಯನ್ನು ಕಾಲು ಚಮಚ ಸೇರಿಸಿ ಮಿಕ್ಸ್ ಮಾಡಿ ಪೇಸ್ಟ್‌ನ್ನು ಕಂಕುಳಿಗೆ ಹಚ್ಚಿ. ಇದರಿಂದ ಕಂಕುಳಿನ ತುರಿಕೆ ಮತ್ತು ಚರ್ಮ ಕೆಂಪಗಾಗಿರುವ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಬಾದಾಮಿ ಎಣ್ಣೆ:- ಬಾದಾಮಿ ಎಣ್ಣೆಯೊಂದಿಗೆ ಅಡುಗೆ ಸೋಡ ಹಾಗೂ ಇನ್ನಿತರ ಪದಾರ್ಥಗಳನ್ನು ಸೇರಿಸಿ ಪೇಸ್ಟ್ ತಯಾರಿಸಿ ಕೂಡ ಹಚ್ಚುವ ಮೂಲಕ ಕಂಕುಳಿನ ವಾಸನೆಯನ್ನು ಹೋಗಲಾಡಿಸಬಹುದು.
ಮಾಡುವ ವಿಧಾನ: 1/3ರಷ್ಟು ಬಾದಾಮಿ ಎಣ್ಣೆ, ಅಡುಗೆ ಸೋಡ ಕಾಲು ಚಮಚ, 1/4 ಚಮಚದಷ್ಟು ಜೋಳದ ಪಿಷ್ಟ ಹಾಗೂ 4 ರಿಂದ5 ಹನಿ ಗಂಧದ ಎಣ್ಣೆಯನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ನಂತರ ಅದನ್ನು ಕಂಕುಳಿಗೆ ಹಚ್ಚಿಕೊಂಡು ಒಣಗಲು ಬಿಡಿ. ನಂತರ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ. ಹೀಗೆ ಒಮ್ಮೆ ತಯಾರಿಸಿ ಇದನ್ನು ನೀವು ಸರಿಯಾಗಿ ಸ್ಟೋರ್ ಮಾಡಿಟ್ಟುಕೊಂಡರೆ ಹಲವು ದಿನಗಳವರೆಗೆ ಬಳಸಬಹುದಾಗಿದೆ.
ಪ್ರತಿದಿನ ಸ್ನಾನದ ಬಳಿಕ 1 ಚಿಕ್ಕ ಚಮಚದಷ್ಟು ಅಡುಗೆ ಸೋಡಾವನ್ನು ನೀರು ಅಥವಾ ರೋಸ್ ವಾಟರ್‌ನಲ್ಲಿ ಸೇರಿಸಿ ಕಂಕುಳಿಗೆ ಹಚ್ಚಿಕೊಳ್ಳಿ. ಇದರಿಂದ ದುರ್ವಾಸನೆ ಬೀರುವುದು ತಪ್ಪುತ್ತದೆ. ಬದಲಾಗಿ ಕಂಕುಳಿನ ಕಿರಿಕಿರಿಯೂ ಇರದೇ ಆರಾಮದಲ್ಲಿ ಇಡೀ ದಿನವನ್ನು ಕಳೆಯಬಹುದಾಗಿದೆ
ನೆನಪಿನಲ್ಲಿಡಿ: ಕ್ಲೀನ್ ಆಗಿ ಕೂದಲನ್ನು ತೆಗೆದ ಬಳಿಕವಷ್ಟೇ ಪೇಸ್ಟ್‌ಗಳನ್ನು ಹಚ್ಚಬೇಕು. ಅಲ್ಲದೆ ಕಂಕುಳಿನ ಕೂದಲನ್ನು ತೆಗೆದ ತಕ್ಷಣ ಅಡುಗೆ ಸೋಡವನ್ನು ಹಚ್ಚುವುದರಿಂದ ಉರಿಯಾಗಬಹುದು ಎಚ್ಚರ. ಸೂಕ್ಷ್ಮ ಚರ್ಮ ಇರುವವರು ಬಾದಾಮಿ ಎಣ್ಣೆಯ ಪೇಸ್ಟ್‌ನ್ನು ಬಳಸುವುದು ಉತ್ತಮ.