ಕಾರ್ಕಳ : ಸ್ಯಾನಿಟೈಸರ್ ಬಾಟಲ್ ಸ್ಫೋಟಗೊಂಡು 4 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು !

ಹೆಬ್ರಿ ತಾಲೂಕಿನಲ್ಲಿ ಬೆಂಕಿ ಹಚ್ಚುವ ಸಂದರ್ಭ ಸ್ಯಾನಿಟೈಸರ್‌ ಬಾಟಲಿಗೆ ಬೆಂಕಿ ತಗುಲಿದ ಪರಿಣಾಮ ಅದು ಸ್ಫೋಟಗೊಂಡು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಾರ್ಕಳ ಹೆಬ್ರಿಯ ಆಶ್ರಮ ಹಾಸ್ಟೆಲ್‌ನ ಹಿಂಭಾಗದಲ್ಲಿ ತ್ಯಾಜ್ಯ ರಾಶಿಗೆ ಬೆಂಕಿ ಹಚ್ಚುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಹೊರ ಜಿಲ್ಲೆಯಿಂದ ಹೆಬ್ರಿಗೆ ವ್ಯಾಸಂಗಕ್ಕಾಗಿ ಬಂದ ನಾಲ್ಕನೇ ತರಗತಿಯ ವಿದ್ಯಾರ್ಥಿಗಳಾದ ಶ್ರೀನಿವಾಸ್‌, ಅಮರೀಶ್‌ ಹಾಗೂ ಐದನೆ ತರಗತಿಯ ವಿನೋದ್‌ ಮತ್ತು ಮನೋಜ್‌ ಬೆಂಕಿ ತಗುಲಿ ಗಾಯಗೊಂಡಿರುವ ಘಟನೆ ನಡೆದಿದೆ.

ಹೆಬ್ರಿಯ ಆಶ್ರಮ ಹಾಸ್ಟೆಲ್ನಲ್ಲಿ ಒಟ್ಟು 50 ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿದ್ದು, ಆದರೆ ಘಟನೆಯ ಸಂದರ್ಭದಲ್ಲಿ ಹಾಸ್ಟೆಲ್‌ನಲ್ಲಿ ಅಡುಗೆ ಸಹಾಯಕಿ ಒಬ್ಬರೆ ಇದ್ದರು ಎನ್ನಲಾಗಿದೆ. ಈ ಘಟನೆಯ ವಿವರವನ್ನು ವಾರ್ಡನ್‌ ಗೆ ತಿಳಿಸಿದ ಬಳಿಕ ವಾರ್ಡನ್‌ ಅವರ ಪರಿಚಯಸ್ಥರ ವಾಹನದಲ್ಲಿ ನಾಲ್ವರನ್ನು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಅದರಲ್ಲಿ ಓರ್ವ ವಿದ್ಯಾರ್ಥಿಗೆ ಗಂಭೀರ ಸ್ವರೂಪದ ಗಾಯವಾಗಿದ್ದ ಕಾರಣ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆ ಬಗ್ಗೆ ಮರುದಿನ ಮಧ್ಯಾಹ್ನ ತನಕ ಸ್ಥಳೀಯ ಪಂಚಾಯಿತಿ ಸೇರಿದಂತೆ ಯಾರಿಗೂ ಘಟನೆ ಬಗ್ಗೆ ಮಾಹಿತಿ ನೀಡಿಲ್ಲವೆಂದು ಹೆಬ್ರಿ ಗ್ರಾ.ಪಂ. ಅಧ್ಯಕ್ಷೆ ಮಾಲತಿ ಆರೋಪಿಸಿದ್ದಾರೆ.

ಈ ಹಾಸ್ಟೆಲ್ ನಲ್ಲಿ ಬೇರೆ ರಾಜ್ಯದಿಂದ ಬಂದ ಬಡ ವಿದ್ಯಾರ್ಥಿಗಳು ಕೂಡ ಇದ್ದು, ಅವರ ಬಗ್ಗೆ ಇಲಾಖೆ ನಿರ್ಲಕ್ಷ ತೋರುತ್ತಿದೆ ಎನ್ನಲಾಗುತ್ತಿದೆ ಜೊತೆಗೆ ರಾತ್ರಿಹೊತ್ತು ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳನ್ನು ನೊಡಿಕೊಳ್ಳಲು ವಾರ್ಡನ್‌ ಗಳಿರುವುದಿಲ್ಲ ಎಂದು ಗ್ರಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ ದೂರಿದ್ದಾರೆ.

ಗಾಯಗೊಂಡಿದ್ದ ಮಕ್ಕಳು ಈಗ ಆರೊಗ್ಯವಾಗಿರುವ ಕುರಿತು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್‌ ತಿಳಿಸಿದ್ದಾರೆ. ಈ ಘಟನೆಯ ಬಳಿಕ ಗುರುವಾರ ಸಂಜೆ ಹಾಸ್ಟೆಲ್‌ಗೆ ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಉಪಾ​ಧ್ಯಕ್ಷ ಗಣೇಶ್‌ ಕುಮಾರ್‌, ಮಾಜಿ ಅಧ್ಯ​ಕ್ಷ​ರಾದ ಸುಧಾ​ಕರ್‌ ಹೆಗ್ಡೆ, ಎಚ್‌.​ಕೆ.​ಸು​ಧಾ​ಕರ್‌, ಸದಸ್ಯರಾದ ಕೃಷ್ಣ ನಾಯ್ಕ, ತಾರನಾಥ್‌ ಬಂಗೇರ ಭೇಟಿ ನೀಡಿ ಘಟನೆಯ ವಿವರ ಕಲೆ ಹಾಕಿದ್ದಾರೆ.

Leave A Reply

Your email address will not be published.