ಸಿಗರೇಟು ಹೊಗೆಯಿಂದ ದೂರವಿರಿ, ಇಲ್ಲವಾದಲ್ಲಿ ಕಾಣಿಸಿಕೊಳ್ಳುತ್ತದೆ ಈ ಮಾರಕ ರೋಗ!
“ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ”. ಹಾಗಾಗಿ, ನೀವೂ ಹೇಗೆ ನಿಮ್ಮ ಬಗ್ಗೆ ಕಾಳಜಿ ವಹಿಸುತ್ತೀರಿ ಎಂಬುದರ ಮೇಲೆ ನಿಮ್ಮ ಆರೋಗ್ಯ ನಿಂತಿರುತ್ತದೆ. ಒಬ್ಬ ವ್ಯಕ್ತಿಯು ಜೀವಿತಾವಧಿಯಲ್ಲಿ ಗಳಿಸಬಹುದಾದ ಅತ್ಯಮೂಲ್ಯ ಆದಾಯವೆಂದರೆ ಉತ್ತಮ ಆರೋಗ್ಯ. ಒಬ್ಬನು ತನ್ನ ಆರೋಗ್ಯವನ್ನು ಕಳೆದುಕೊಂಡರೆ, ಅವನು ಜೀವನದ ಎಲ್ಲಾ ಆಕರ್ಷಣೆಯನ್ನು ಕಳೆದುಕೊಳ್ಳುತ್ತಾನೆ. ಉತ್ತಮ ಆರೋಗ್ಯವನ್ನು ಬಳಸಿಕೊಂಡು ಉತ್ತಮ ಸಂಪತ್ತನ್ನು ಯಾವಾಗ ಬೇಕಾದರೂ ಗಳಿಸಬಹುದು, ಆದರೆ ಒಮ್ಮೆ ಉತ್ತಮ ಆರೋಗ್ಯವನ್ನು ಕಳೆದುಕೊಂಡರೆ ಅದನ್ನು ಯಾವುದೇ ವೆಚ್ಚದಲ್ಲಿ ಮರಳಿ ಪಡೆಯಲಾಗುವುದಿಲ್ಲ.
“ಆರೋಗ್ಯವೇ ಸಂಪತ್ತು” ಎಂಬುದು ಸಂಪೂರ್ಣವಾಗಿ ನಿಜ. ಏಕೆಂದರೆ, ನಮ್ಮ ದೇಹವು ನಮ್ಮ ಎಲ್ಲಾ ಒಳ್ಳೆಯ ಮತ್ತು ಕೆಟ್ಟ ಸಂದರ್ಭಗಳಲ್ಲಿ ನಮ್ಮೊಂದಿಗೆ ಇರುತ್ತದೆ. ನಮ್ಮ ಕೆಟ್ಟ ಸಮಯದಲ್ಲಿ ಈ ಜಗತ್ತಿನಲ್ಲಿ ಯಾರೂ ನಮಗೆ ಸಹಾಯ ಮಾಡಲು ಸಾಧ್ಯವಿಲ್ಲ, ಆದ್ದರಿಂದ, ನಾವು ಉತ್ತಮ ಆರೋಗ್ಯವನ್ನು ಹೊಂದಿದ್ದರೆ, ನಮ್ಮ ಜೀವನದಲ್ಲಿ ಯಾವುದೇ ಕೆಟ್ಟ ಪರಿಸ್ಥಿತಿಯನ್ನು ನಾವು ಎದುರಿಸಬಹುದು. ಇಂತಹ ಆರೋಗ್ಯಕ್ಕೆ ಮುಖ್ಯವಾದ ಅಂಶವೆಂದರೆ, ಧೂಮಪಾನದಿಂದ ದೂರ ಇರುವುದು.
ಹೌದು. ಧೂಮಪಾನ ಆರೋಗ್ಯಕ್ಕೆ ಹಾನಿಕಾರ. ಧೂಮಪಾನದ ಚಟವನ್ನು ಹೊಂದಿಲ್ಲದಿದ್ದರೂ ಸಹ, ಸಾರ್ವಜನಿಕ ಸ್ಥಳಗಳಲ್ಲಿ ಈ ಕೆಟ್ಟ ಹೊಗೆಯಿಂದ ದೂರವಿರುವುದು ಅಗತ್ಯ. ಯಾಕಂದ್ರೆ, ಇದು ಚರ್ಮ ಸಂಬಂಧಿ ಕಾಯಿಲೆಗೆ ಕಾರಣವಾಗುತ್ತದೆ ಎಂದು ಅಧ್ಯಯನದ ಮೂಲಕ ತಿಳಿದು ಬಂದಿದೆ. ಸಾಮಾನ್ಯವಾಗಿ ನಾವೆಲ್ಲ ಸಿಗರೇಟ್ ಸೇದುವವರನ್ನು ನೋಡಿದ್ದೇವೆ. ಆದ್ರೆ, ಅವರಿಗೆ ಮಾತ್ರ ಅಪಾಯ ಎಂದು ಅಂದುಕೊಂಡಿರುತ್ತೇವೆ. ಆದ್ರೆ, ಧೂಮಪಾನ ಸೇದುವವರಿಗಿಂತ ಹೆಚ್ಚಾಗಿ ಅವರು ಸೇದಿ ಬಿಟ್ಟ ಹೊಗೆಯನ್ನು ಪಡೆದುಕೊಂಡವರಲ್ಲಿ ಹೆಚ್ಚಾಗಿ ಮಾರಕ ರೋಗಗಳು ಹುಟ್ಟಿಕೊಳ್ಳುತ್ತದೆ ಎಂದು ಅಧ್ಯಯನದ ಮೂಲಕ ಧೃಡಪಟ್ಟಿದೆ.
ಸಿಗರೇಟ್, ಬೀಡಿ ಮತ್ತು ಸಿಗರೇಟ್ಗಳ ವಿಷಕಾರಿ ಹೊಗೆಯು ಮಾನವನ ಬಟ್ಟೆ, ಕೂದಲು, ಚರ್ಮ ಮತ್ತು ವಸ್ತುಗಳ ಮೇಲೆ ಅಂಟಿಕೊಳ್ಳುತ್ತದೆ. ಸಿಗರೇಟ್ ಹೊಗೆಯಿಂದ ಬಿಡುಗಡೆಯಾಗುವ ಈ ವಿಷಕಾರಿ ವಸ್ತುಗಳು ರಾಸಾಯನಿಕ ಕ್ರಿಯೆಯಿಂದ ಕಾಲಕ್ರಮೇಣ ಹೆಚ್ಚು ಅಪಾಯಕಾರಿಯಾಗುತ್ತವೆ. ಸಿಗರೇಟ್ ಹೊಗೆಯ ಹೊರತಾಗಿ, ಥರ್ಡ್ ಹ್ಯಾಂಡ್ ಹೊಗೆಯು ಕ್ಯಾನ್ಸರ್ ಸೇರಿದಂತೆ ಇತರ ಕಾಯಿಲೆಗಳನ್ನು ಉಂಟು ಮಾಡುವ ಅಪಾಯವನ್ನು ಹೊಂದಿದೆ.
ಯಾವುದೋ ಮೂರನೇ ವ್ಯಕ್ತಿ ಸೇದಿ ಬಿಟ್ಟ ಹೊಗೆಯು ನಿಮ್ಮ ದೇಹದ ಚರ್ಮವನ್ನು ಸ್ಪರ್ಶಿಸಿ ಇದು ಚರ್ಮದ ಕ್ಯಾನ್ಸರ್, ಮುಂತಾದ ಚರ್ಮಕ್ಕೆ ಸಂಬಂಧಪಟ್ಟ ತೀವ್ರವಾದ ಕಾಯಿಲೆಗೆ ಕಾರಣವಾಗುತ್ತದೆ. ಆದ್ದರಿಂದ ಸಾಕಷ್ಟು ಜನದಟ್ಟನೆ ಇರುವಂತಹ ಪ್ರದೇಶಗಳಲ್ಲಿ ನಿಮ್ಮನ್ನು ನೀವು ಇಂತಹ ಕಾಯಿಲೆಯಿಂದ ರಕ್ಷಿಸುವುದು ಅಗತ್ಯವಾಗಿದೆ.
ಧೂಮಪಾನದ ಹೊಗೆಗೆ ತೀವ್ರವಾಗಿ ಒಡ್ಡಿಕೊಳ್ಳುವುದರಿಂದ ಕಾಂಟ್ಯಾಕ್ಟ್ ಡರ್ಮಟೈಟಿಸ್ ಮತ್ತು ಸೋರಿಯಾಸಿಸ್‌ನಂತಹ ಚರ್ಮ ರೋಗಗಳ ಅಪಾಯವನ್ನು ಹೆಚ್ಚಿಸಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ಸಿಗರೇಟ್ ನ ಹೊಗೆಯು ಇದು ಕ್ಯಾನ್ಸರ್, ಹೃದ್ರೋಗ ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗಬಹುದು” ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸಂಶೋಧಕರಾದ ಶೇನ್ ಸಕಾಮಕಿ-ಚಿಂಗ್ ಹೇಳಿದ್ದಾರೆ.