Ration Card : ಪಡಿತರ ಚೀಟಿದಾರರಿಗೆ ಕುಚಲಕ್ಕಿ ವಿತರಣೆ | ಭತ್ತಕ್ಕೆ ಪ್ರೋತ್ಸಾಹ ಧನ!

ಸರ್ಕಾರ ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದ್ದು, ಸಾಮಾನ್ಯ ಜನತೆಗೆ ದಿನನಿತ್ಯ ಬಳಸುವ ಅಕ್ಕಿ, ಎಣ್ಣೆ, ಬೇಳೆ ವಿತರಣೆ ಮಾಡಲಾಗುತ್ತದೆ. ಇದೀಗ, ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪಡಿತರ ವ್ಯವಸ್ಥೆಯಡಿ ಕುಚಲಕ್ಕಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.

ಪಡಿತರ ವ್ಯವಸ್ಥೆಯಡಿ ಕುಚಲಕ್ಕಿ ವಿತರಿಸಲು ಖರೀದಿಸುವ ಪ್ರತಿ ಕ್ವಿಂಟಲ್ ಕುಚಲಕ್ಕಿ ಭತ್ತಕ್ಕೆ 500 ರೂ.ಪ್ರೋತ್ಸಾಹ ಧನ ನೀಡಲಾಗುತ್ತದೆ. ಮುಖ್ಯಮಂತ್ರಿಗಳು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯಲ್ಲಿ ಪಡಿತರದಲ್ಲಿ ಕುಚಲಕ್ಕಿ ನೀಡಲು ಘೋಷಣೆ ಮಾಡಿದ್ದು, ಇದಕ್ಕಾಗಿ ಶೀಘ್ರವೇ ಭತ್ತ ಖರೀದಿ ಕೇಂದ್ರ ಆರಂಭಿಸಲಾಗುತ್ತದೆ.

ಒಂದು ವರ್ಷಕ್ಕೆ 12 ಲಕ್ಷ ಟನ್ ಅಕ್ಕಿ ಬೇಕಾಗಿದ್ದು, ಇದಕ್ಕಾಗಿ 18 ಲಕ್ಷ ಟನ್ ಭತ್ತ ಸಂಸ್ಕರಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಹಾಗಾಗಿ, ವಾರದಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಲಾಗುವ ಕುರಿತು ಯೋಜನೆ ರೂಪಿಸಲಾಗಿದೆ. ಪ್ರತಿ ಕ್ವಿಂಟಲ್ ಕುಚಲಕ್ಕಿ ಭತ್ತಕ್ಕೆ 2040 ರೂ. ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಕುಚಲಕ್ಕಿ ಬಳಸುವ ಭತ್ತವನ್ನು ಕೇರಳ ರಾಜ್ಯದ ಪಡಿತರ ವ್ಯವಸ್ಥೆಯಡಿ 2220 ರೂ. ನಂತೆ ಖರೀದಿಸಲಾಗುತ್ತಿದ್ದು, ನಮ್ಮ ರಾಜ್ಯದ ಅನೇಕ ರೈತರು ಕೇರಳಕ್ಕೆ ಭತ್ತ ಮಾರಾಟ ಮಾಡುತ್ತಿದ್ದಾರೆ.

ನಮ್ಮ ರಾಜ್ಯದಲ್ಲಿಯೇ ಕುಚಲಕ್ಕಿ ಭತ್ತಕ್ಕೆ 500 ರೂಪಾಯಿ ಪ್ರೋತ್ಸಾಹ ಧನ ನೀಡಿ ಒಟ್ಟು 2540 ರೂ.ನಂತೆ ಭತ್ತ ಖರೀದಿಸಲಿದೆ . ಹಾಗಾಗಿ, ಶೀಘ್ರವೇ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುತ್ತದೆ ಎಂದು ಕಾರವಾರದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Leave A Reply

Your email address will not be published.