ಲಕ್ಷ ದೀಪೋತ್ಸವ ಸಂಭ್ರಮದಲ್ಲಿ ಧರ್ಮಸ್ಥಳ |ಸರ್ವಧರ್ಮ ಆಮಂತ್ರಣ
ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಧಾನ ಧರ್ಮದಿಂದ ಪ್ರಖ್ಯಾತ ಪಡೆದಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ನಮಗೆ ಗೊತ್ತೇ ಇದೆ. ಹಾಗೆಯೇ ಧರ್ಮಸ್ಥಳ ದಲ್ಲಿ ಪ್ರತಿವರ್ಷದಂತೆ ಕಾರ್ತಿಕ ಮಾಸದ ಮಂಗಳಪರ್ವದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಕಾರ್ಯಕ್ರಮ ನ.19 ರಿಂದ 23ರ ವರೆಗೆ ನಡೆಯಲಿವೆ. ಈ ಕುರಿತು ಸಮ್ಮೇಳನಗಳಲ್ಲಿ ಪಾಲ್ಗೊಳ್ಳಬೇಕೆಂದು ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳ ಸ್ವಾಗತ ಸಮಿತಿ ಅಧ್ಯಕ್ಷ, ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಆಮಂತ್ರಿಸಿದ್ದಾರೆ.
ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಕಾರ್ಯಕ್ರಮವು ನ.22ರಂಂದು ಸರ್ವಧರ್ಮ ಮತ್ತು 23ರಂದು ಸಾಹಿತ್ಯ ಸಮ್ಮೇಳನಗಳ 90ನೇ ಅಧಿವೇಶನ ನಾಡಿನ ಗಣ್ಯರು, ವಿದ್ವಾಂಸರು ಹಾಗೂ ಕಲಾವಿದರ ಸಹಭಾಗಿತ್ವದಲ್ಲಿ ನೆರವೇರಲಿದೆ.
ನವೆಂಬರ್ 19 ರಂದು ಕಾರ್ಯಕ್ರಮಗಳು :
ಬೆಳಗ್ಗೆ 10.30ಕ್ಕೆ ಕ್ಷೇತ್ರದ ಸನಿಹದ ಶ್ರೀ ಮಂಜುನಾಥ ಪ್ರೌಢ ಶಾಲಾ ವಠಾರದಲ್ಲಿ ಏರ್ಪಡಿಸಲಾಗಿರುವ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ. ಅದೇ ದಿನ ಸಂಜೆ 3 ಗಂಟೆಯಿಂದ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಾಲಯದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ವರೆಗೆ ಪಂಚಾಕ್ಷರಿ ಜಪದೊಂದಿಗೆ ಸುಮಾರು 25,000 ಭಕ್ತರಿಂದ 10 ನೇ ವರ್ಷದ ಪಾದಯಾತ್ರೆ ನಡೆಯಲಿದೆ. ಶ್ರೀ ಮಂಜುನಾಥ ಸ್ವಾಮಿಯ ಹೊಸಕಟ್ಟೆಉತ್ಸವ ಸಹ ನಡೆಯಲಿದೆ. ಹಾಗೂ ವಸ್ತುಪ್ರದರ್ಶನ ಮಂಟಪದಲ್ಲಿ ಸಂಜೆ 6.30ರಿಂದ ಧರ್ಮಸ್ಥಳದ ಸುಪ್ರೀತಾ ಇವರಿಂದ ಸಂಗೀತ, ಬಳಿಕ ಬೆಂಗಳೂರಿನ ಹರ್ಷಿತಾ ಸುದೇಶ್ ಮತ್ತು ತಂಡದವರಿಂದ ನೃತ್ಯರೂಪಕ ನಂತರ ಗೋಣಿಕೊಪ್ಪ ಶ್ರೀ ದುರ್ಗಾ ಮ್ಯೂಸಿಕಲ್ ನೈಟ್ಸ್‌ನ ಅಶ್ವಿತ್‌ಕುಮಾರ್ ಅವರಿಂದ ರಸಮಂಜರಿ ನಡೆಯಲಿದೆ.
ನವೆಂಬರ್ 20ರಂದು ಕಾರ್ಯಕ್ರಮಗಳು:
ಶ್ರೀ ಮಂಜುನಾಥ ಸ್ವಾಮಿಯ ಕೆರೆಕಟ್ಟೆಉತ್ಸವ ಅದ್ದೂರಿಯಾಗಿ ನಡೆಯಲಿದೆ. ಹಾಗೂ ವಸ್ತುಪ್ರದರ್ಶನ ಮಂಟಪದಲ್ಲಿ ಸಂಜೆ 6.30ರಿಂದ ಕಾಸರಗೋಡು ಸಂಗೀತ ಕಲಾ ಸಂಗಮದ ವಿದುಷಿ ಅನುರಾಧಾ ಅಡ್ಕಸ್ಥಳ ಅವರಿಂದ ಶಾಸ್ತ್ರೀಯ ಸಂಗೀತ ಬಳಿಕ ಮೈಸೂರು ಸಿರಿ ಮತ್ತು ಶ್ರೀವತ್ಸ ಶರ್ಮ ಅವರಿಂದ ಸಿರಿ ವಾನಳ್ಳಿ ಅಭಿನಯದ ಆನಂದ ಭಾಮಿನಿ ಎಂಬ ಏಕವ್ಯಕ್ತಿ ನಾಟಕ, ನಂತರ ಶ್ರವಣಬೆಳಗೊಳದ ಸರ್ವೇಶ್ ಜೈನ್ ಮತ್ತು ತಂಡದವರಿಂದ ಜಿನಗಾನ ಬೀಟ್ಸ್ ಆರ್ಕೆಸ್ಟ್ರಾ ನಡೆಯಲಿದೆ.
ನವೆಂಬರ್ 21 ರಂದು ಕಾರ್ಯಕ್ರಮಗಳು :
ಲಲಿತೋದ್ಯಾನ ಉತ್ಸವ ಹಾಗೂ ವಸ್ತುಪ್ರದರ್ಶನ ಮಂಟಪದಲ್ಲಿ ಸಂಜೆ 6ರಿಂದ ಬೆಂಗಳೂರಿನ ಚೈತ್ರಾ ಎಚ್.ಜಿ. ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ಬಳಿಕ ಬೆಂಗಳೂರಿನ ಐಶ್ವರ್ಯ ಆರ್. ಇವರಿಂದ ಭರತ ನೃತ್ಯ, ನಂತರ ಮಣಿಪಾಲದ ವಿಪಂಚಿ ಬಳಗ ನಿರ್ದೇಶನದ ಪವನ ಬಿ. ಆಚಾರ್ ಅವರಿಂದ ಪಂಚವೀಣಾ ವಾದನ ಕೊನೆಯಲ್ಲಿ ಬೆಂಗಳೂರಿನ ತನುಜಾ ಜೈನ್ ಮತ್ತು ತಂಡದವರಿಂದ ಭರತ ನೃತ್ಯ ಪ್ರದರ್ಶನಗೊಳ್ಳಲಿದೆ.
ಅಮೃತವರ್ಷಿಣಿ ಸಭಾಭವನದಲ್ಲಿ ಸಂಜೆ 5.30ರಿಂದ ನಾಗಸ್ವರ ವಾದನ, ರಾತ್ರಿ 7.00 ರಿಂದ ಉಡುಪಿಯ ಭಾರ್ಗವಿ ಆಟ್ಸ್‌ರ್ ಮತ್ತು ಡ್ಯಾನ್ಸ್ ಅಕಾಡೆಮಿ ಇವರಿಂದ ಭಾವ-ಯೋಗ-ಗಾನ-ನೃತ್ಯ, 8.30ರಿಂದ ಹಾಸನದ ನಾಟ್ಯಕಲಾನಿವಾಸ್ ಇದರ ವಿದ್ವಾನ್ ಉನ್ನತ್ ಎಚ್.ಆರ್. ಮತ್ತು ತಂಡದವರಿಂದ ತಿರುನಾಳರ ಭಾವಯಾಮಿ ರಘುರಾಮಮ್ ಎಂಬ ರಾಮಾಯಣ ಪ್ರಸ್ತುತಿ ನಡೆಯಲಿದೆ.
ನವೆಂಬರ್ 22ರಂದು ಸರ್ವಧರ್ಮ ಸಮ್ಮೇಳನ:
ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಅವರು ನವೆಂಬರ್ 22ರಂದು ಅಮೃತ ವರ್ಷಿಣಿ ಸಭಾಭವನದಲ್ಲಿ ಸಂಜೆ 5 ಗಂಟೆಯಿಂದ ನಡೆಯುವ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಹಾಗೂ ಅಧ್ಯಕ್ಷತೆಯನ್ನು ಎಂ.ಆರ್.ಸತ್ಯನಾರಾಯಣ ಶಿವಮೊಗ್ಗದ ಬಹುಶ್ರುತ ವಿದ್ವಾಂಸ ಮತ್ತು ನ್ಯಾಯವಾದಿ ಅವರು ವಹಿಸಲಿದ್ದಾರೆ. ಅಲ್ಲದೆ ಉಪನ್ಯಾಸಕರಾಗಿ ಬಸ್ರಿಕಟ್ಟೆ ಧರ್ಮಗುರು ಫಾ. ಮಾರ್ಸೆಲ್ ಪಿಂಟೋ, ಮತ್ತು ವಿಜಯಪುರ ಕ.ಸಾ.ಪ. ಜಿಲ್ಲಾಧ್ಯಕ್ಷ ಹಾಸಿಂಪೀರ ಇ ವಾಲೀಕಾರ, ಮೂಡಬಿದಿರೆ ವಿಶ್ರಾಂತ ಮುಖ್ಯೋಪಾಧ್ಯಾಯ, ವಾಗ್ಮಿ ಮುನಿರಾಜ ರೆಂಜಾಳ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ. ಮತ್ತು ಕಂಚಿಮಾರು ಕಟ್ಟೆಉತ್ಸವ ನಡೆಯಲಿದೆ.
ವಸ್ತುಪ್ರದರ್ಶನ ಮಂಟಪದಲ್ಲಿ ಸಂಜೆ 5.30ರಿಂದ ಉಜಿರೆಯ ಸರ್ವೇಶ್ ದೇವಸ್ಥಳಿಯವರಿಂದ ಶಾಸ್ತ್ರೀಯ ಸಂಗೀತ/ ಭಕ್ತಿ ಸಂಗೀತ, ಬಳಿಕ ಉಳ್ಳಾದ ಯಶಸ್ವಿನಿ ಅವರಿಂದ ಸಂಗೀತ, ನಂತರ ಮಂಗಳೂರಿನ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಮತ್ತು ವಾಣಿಶ್ರೀ ವಿ. ಅವರಿಂದ ಯುಗಳ ನೃತ್ಯ. ಕೊನೆಯಲ್ಲಿ ಶಿವಮೊಗ್ಗದ ಜಾದೂಗಾರ್ ಪ್ರಶಾಂತ ಎಸ್.ಹೆಗ್ಡೆ ಇವರಿಂದ ಮ್ಯಾಜಿಕ್ ವಿಸ್ಮಯ ಪ್ರದರ್ಶನಗೊಳ್ಳಲಿದೆ.
ಅಮೃತವರ್ಷಿಣಿ ಸಭಾಭವನದಲ್ಲಿ ರಾತ್ರಿ ಗಂಟೆ 8.30ರಿಂದ ವಯಲಿನ್‌ನಲ್ಲಿ ಆರ್. ಕುಮರೇಶ್, ವೀಣಾದಲ್ಲಿ ವಿದುಷಿ ಡಾ. ಜಯಂತಿ ಕುಮರೇಶ್, ಮೃದಂಗಂನಲ್ಲಿ ವಿದ್ವಾನ್ ಜಯಚಂದ್ರ ರಾವ್, ತಬಲಾ ಮತ್ತು ಮೋರ್ಚಿಂಗ್‌ನಲ್ಲಿ ವಿದ್ವಾನ್ ಪ್ರಮಥ್ ಕಿರಣ್ ಜುಗಲ್‌ಬಂದಿ ನಡೆಸಿಕೊಡಲಿದ್ದಾರೆ.
ನವೆಂಬರ್ 23ರಂದು ಸಾಹಿತ್ಯ ಸಮ್ಮೇಳನ:
ರಾಷ್ಟ್ರಪ್ರಶಸ್ತಿ ವಿಜೇತ, ಚಲನಚಿತ್ರ ನಿರ್ದೆಶಕ ಪಿ. ಶೇಷಾದ್ರಿ ಅವರು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿದ್ವಾಂಸ ಮತ್ತು ಸಂದರ್ಶಕ ಪ್ರಾಧ್ಯಾಪಕರಾದ ವಿದ್ವಾನ್ ಡಾ.ಎಚ್.ವಿ.ನಾಗರಾಜ ರಾವ್ ವಹಿಸಿದ್ದಾರೆ. ಉಪನ್ಯಾಸಕರಾಗಿ ಸಾಹಿತ್ಯ ಪರಿಚಾರಕ ಮತ್ತು ಸುಶಿಕ್ಷಣ ಸೇವಾಪರ ಸಂಸ್ಥೆ ಸ್ಥಾಪಕ ಸತ್ಯೇಶ್ ಎನ್. ಬೆಳ್ಳೂರು, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಐನಕೈ, ಕನ್ನಡ ಸಹಾಯಕ ಪ್ರಾಧ್ಯಾಪಕ ಮತ್ತು ಲೇಖಕಿ ಡಾ.ಗೀತಾ ವಸಂತ ಅವರು ಭಾಗವಹಿಸಲಿದ್ದಾರೆ.
ಜೊತೆಗೆ ವಸ್ತುಪ್ರದರ್ಶನ ಮಂಟಪದಲ್ಲಿ ಸಂಜೆ 5.30ರಿಂದ ಮಡಿಕೇರಿಯ ಮೇಘಾ ಭಟ್ ಅವರಿಂದ ಶಾಸ್ತ್ರೀಯ ಸಂಗೀತ ಬಳಿಕ ಬೆಂಗಳೂರಿನ ಅಪೂರ್ವ ಅನಿರುದ್ಧ ಇವರಿಂದ ವೀಣಾ ವಾದನ, ನಂತರ ರಾಣೆಬೆನ್ನೂರಿನ ವಿ. ರಜನಿ ಎಲ್. ಕರಿಗಾರ ಅವರಿಂದ ಹಿಂದೂಸ್ಥಾನಿ ಸಂಗೀತ, ಕೊನೆಯಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾಕೇಂದ್ರದ ವಿದುಷಿ ಶಾಲಿನಿ ಆತ್ಮಭೂಷಣ್ ಅವರಿಂದ ಸಮೂಹ ನೃತ್ಯ ಮತ್ತು ಕೊನೆಯಲ್ಲಿ ಭದ್ರಾವತಿಯ ಪ್ರೀತಂ ಮೆಲೋಡಿ ಆರ್ಕೆಸ್ಟ್ರಾದ ಶಂಕರ್ ಬಾಬು ಅರ್ಪಿಸುವ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಅಮೃತವರ್ಷಿಣಿ ಸಭಾಭವನದಲ್ಲಿ ರಾತ್ರಿ 8.30ರಿಂದ ಬಹು ಗ್ರ್ಯಾಮಿ ಪ್ರಶಸ್ತಿ ವಿಜೇತ, ಸಂಗೀತ ಸಂಯೋಜಕ ಮತ್ತು ಅಥ್‌ರ್ ಡೇ ನೆಟ್‌ವರ್ಕ್ನ ರಾಯಭಾರಿ, ಹೆಸರಾಂತ ಕಲಾವಿದ ರಿಕಿ ಕೇಜ್ ಅವರು ಸಂಗೀತ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ನವೆಂಬರ್ 24ರಂದು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜಾ ಕಾರ್ಯಕ್ರಮ:
ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜಾ ಕಾರ್ಯಕ್ರಮ ಮತ್ತು ಬಾಹುಬಲಿ ಸೇವಾ ಸಮಿತಿ ಶ್ರಾವಕರಿಂದ ಸಂಜೆ 6.30ರಿಂದ ಕ್ಷೇತ್ರದ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ನಡೆಯಲಿದೆ.
ಈ ಸಂದರ್ಭ ಶ್ರೀಮತ್ ಪುಷ್ಪದಂತ ಭೂತಬಲಿ ವಿರಚಿತ ಷಟ್ಖಂಡಾಗಮಾಧಾರಿತ ಸಿದ್ಧಾಂತ ಚಿಂತಾಮಣಿ-3 ಎಂಬ ಗ್ರಂಥದ ಬಿಡುಗಡೆ, ಮೂಡುಬಿದರೆಯ ಜೈನಸಾಹಿತ್ಯ ವಿಶಾರದೆ ವೀಣಾ ರಘುಚಂದ್ರ ಶೆಟ್ಟಿಬೆಟ್ಕೇರಿ ಇವರಿಗೆ ಸನ್ಮಾನ ನಡೆಯಲಿದೆ. ಬಳಿಕ ಶ್ರಾವಕ ಶ್ರಾವಿಕೆಯರಿಂದ ಜಿನಭಜನಾ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ಈ ಮೇಲಿನ ಕಾರ್ಯಕ್ರಮಗಳು ಧರ್ಮಸ್ಥಳ ದಲ್ಲಿ ಪ್ರತಿವರ್ಷದಂತೆ ಕಾರ್ತಿಕ ಮಾಸದ ಮಂಗಳಪರ್ವದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಕಾರ್ಯಕ್ರಮ ನಡೆಯಲಿವೆ.