ಭ್ರಷ್ಟರಿಗೆ, ಹಿಂದೂ ಹೇಳಿಕೆ ವಿರೋಧಿಗಳಿಗೆ ಪಾಠ ಕಲಿಸಿ- ಹರೀಶ್ ಪೂಂಜಾ

ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಹಿಂದೂ ಎನ್ನುವುದು ಭಾರತೀಯ ಪದವಲ್ಲ, ಅದು ಪರ್ಷಿಯನ್ ಪದವಾಗಿದೆ ಎಂದು ಹೇಳಿದ್ದಲ್ಲದೇ ಅದೊಂದು ಅಶ್ಲೀಲ ಪದ, ಅದರ ಅರ್ಥ ತುಂಬಾ ಕೆಟ್ಟದಾಗಿದೆ ಎಂದು ಕಟುವಾಗಿ ಹೇಳಿದ್ದರು.

 

ಅಷ್ಟೇ ಅಲ್ಲದೆ ಹಿಂದೂ ಗ್ರಂಥಗಳ ಬಗ್ಗೆ ಮಾತನಾಡಿದ ಅವರು, ಸಮಯ ಕಳೆಯಲು ಬರೆದ ಪುಸ್ತಕಗಳೆಲ್ಲ ಮಹಾನ್ ಗ್ರಂಥಗಳಾಗಿವೆ. ಅವುಗಳನ್ನು ಮುಂದೆ ಇಟ್ಟುಕೊಂಡು ಕೆಲವರು ಜಾತಿ, ಧರ್ಮ ಎನ್ನುತ್ತ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದರು. ಸತೀಶ ಜಾರಕಿಹೊಳಿಯ ಈ ಎಲ್ಲಾ ಹೇಳಿಕೆಗೆ ತೀವ್ರ ವಿರೋಧಿ ವ್ಯಕ್ತವಾಗಿದ್ದು, ‘ಹಿಂದೂ’ ಪದದ ಮೂಲದ ಬಗ್ಗೆ ಮಾತನಾಡಿದ ಅವರು ಇದೀಗ ತಾವಾಡಿದ ಮಾತಿನ ಮೂಲವನ್ನೇ ಬದಲಾಯಿಸಲು ಯೋಚಿಸುತ್ತಿದ್ದಾರೆ.

ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿರುವ ಸತೀಶ ಜಾರಕಿಹೊಳಿ, ನಾನು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ. ಈ ಪರ್ಷಿಯನ್ ಪದ (ಹಿಂದೂ) ಹೇಗೆ ಬಂದಿತು ಎಂಬುದರ ಬಗ್ಗೆ ನೂರಾರು ದಾಖಲೆಗಳಿವೆ. ಹಾಗೂ ವೆಬ್‌ ಸೈಟ್‌ ಗಳಲ್ಲಿ ಅನೇಕ ಲೇಖನಗಳು ಲಭ್ಯವಿದೆ. ನೀವು ಅದನ್ನು ಓದಬೇಕು ಎಂದು ವೀಡಿಯೋ ಮೂಲಕ ಹೇಳಿ ತಮ್ಮ ಮೊದಲಿನ ಹೇಳಿಕೆಯ ದಿಕ್ಕನ್ನು ಬದಲಾಯಿಸಿದ್ದಾರೆ.

ಸತೀಶ್ ಜಾರಕಿಹೊಳಿ ಹೇಳಿಕೆಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಕೂಡಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿದ ಅವರು, “ಸತೀಶ್ ಜಾರಕಿಹೊಳಿ ಅವರ ಹೇಳಿಕೆಯು ಅತ್ಯಂತ ದುರದೃಷ್ಟಕರ. ನಾವು ಇದನ್ನು ಖಂಡಿಸುತ್ತೇವೆ” ಎಂದು ಹೇಳಿದ್ದಾರೆ.

ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಹರೀಶ್ ಪೂಂಜಾ ಅವರು, “ಹಿಂದೂ” ಎನ್ನುವ ಪದವೇ ಅಶ್ಲೀಲ ಎಂದು ಹೇಳುವ ಮೂಲಕ ಕೋಟ್ಯಂತರ ಹಿಂದೂಗಳ ಭಾವನೆಗೆ ಘಾಸಿಯನ್ನುಂಟು ಮಾಡಿ, ಹಿಂದೂ ವಿರೋಧಿ ಮನಸ್ಥಿತಿಯನ್ನು ಪ್ರದರ್ಶನಕಿಟ್ಟ ಕಾಂಗ್ರೆಸ್ ನ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯ ಅಪ್ರಭುದ್ಧ, ಹಿಂದೂ ವಿರೋಧಿ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಮತ್ತು ನಾವೆಲ್ಲಾ ಹಿಂದೂಗಳು ರಾಗ, ದ್ವೇಷ, ಪಕ್ಷ, ಬೇಧ ಮರೆತು ಇಂತಹ ನೀಚ ಧರ್ಮ ಭ್ರಷ್ಟರಿಗೆ ಸರಿಯಾದ ಪಾಠ ಕಲಿಸುವ ಅಗತ್ಯವಿದೆ ಎಂದು ಖಾರವಾಗಿ ಹೇಳಿದ್ದಾರೆ.

ಅಷ್ಟೇ ಅಲ್ಲದೆ, ಹಿಂದೂ ಶಬ್ದದ ಅರ್ಥ ಅಶ್ಲೀಲವಾಗಿದೆ ಎಂದು ಸತೀಶ್ ಜಾರಕಿಹೊಳಿ ನೀಡಿದ ಹೇಳಿಕೆಗೆ, ಕೇಸರಿಪಡೆ ಕೆರಳಿ ನಿಂತಿದ್ದು, ” ಸ್ವಾಭಿಮಾನಿ ಹಿಂದೂ ” ಎಂಬ ಘೋಷವಾಕ್ಯದೊಂದಿಗೆ ಇಂಧನ ಹಾಗೂ ಕನ್ನಡ- ಸಂಸ್ಕ್ರತಿ ಸಚಿವ ವಿ ಸುನಿಲ್ ಕುಮಾರ್ ಕಾಂಗ್ರೆಸ್ ವಿರುದ್ಧ ಅಭಿಯಾನ ಪ್ರಾರಂಭಿಸಿದ್ದಾರೆ. ಹಾಗೇ ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಕಾಂಗ್ರೆಸ್ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೂ ಹಿಂದುತ್ವ ಎಂಬ ಜೀವನ ಪದ್ಧತಿಯನ್ನೇ ಟೀಕಿಸಿದ ಸತೀಶ್ ಜಾರಕಿಹೊಳಿ ಪರವಾಗಿ ಕಾಂಗ್ರೆಸ್ ಇಡಿ ರಾಷ್ಟ್ರದ ಕ್ಷಮೆ ಯಾಚಿಸಬೇಕು ಎಂದು ಹೇಳಿದ್ದಾರೆ.

Leave A Reply

Your email address will not be published.