BIGG NEWS : ಮುರುಘಾ ಶ್ರೀ ಸೇರಿ ಮೂವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ : ಜಾರ್ಜ್ ಶೀಟ್ ಸಲ್ಲಿಕೆ
ಎಲ್ಲೆಡೆ ಸಂಚಲನ ಮೂಡಿಸಿದ್ದ ಮುರುಘಾ ಶ್ರೀಗಳ ಬಂಧನದ ಕುರಿತಾಗಿ ಹೊಸ ವಿಚಾರ ಹೊರ ಬಿದ್ದಿದೆ. ಪೋಕ್ಸೋ ಕೇಸ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಶ್ರೀಗಳು ಸೇರಿದಂತೆ ಮೂವರು ಆರೋಪಿಗಳ ವಿರುದ್ಧದ ಆರೋಪ ಧೃಡವಾಗಿದೆ ಎನ್ನಲಾಗುತ್ತಿದ್ದು, ಈ ಕುರಿತಾಗಿ ಚಿತ್ರದುರ್ಗ ಪೊಲೀಸ್ ವರಿಷ್ಟಾಧಿಕಾರಿ ಪರಶುರಾಮ್ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮುರುಘಾ ಶ್ರೀ ವಿರುದ್ಧ ಇಬ್ಬರು ಬಾಲಕಿಯರು ದೂರು ನೀಡಿದ್ದರಿಂದ ತನಿಖೆ ಭಾಗಶಃ ಪೂರ್ಣಗೊಂಡಿದ್ದು ಚಾರ್ಜ್ ಶೀಟ್ ಸಲ್ಲಿಸಲಾಗಿರುವ ಕುರಿತು ಚಿತ್ರದುರ್ಗದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಮಾಹಿತಿ ನೀಡಿದ್ದಾರೆ. ಈ ಪ್ರಕರಣದ ಕುರಿತಾಗಿ, ಅಕ್ಟೋಬರ್ 27ರಂದೇ ತನಿಖಾಧಿಕಾರಿ ಅನಿಲ್ ಚಾರ್ಜ್ ಶೀಟ್ ಸಲ್ಲಿಸಿದ್ದು, 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಲಾಗಿದೆ.
ಚಾರ್ಜ್ ಶೀಟ್ ಸಿಸಿ ನಂಬರ್ ಬರುವುದು ಬಾಕಿಯಿದ್ದು, ಇದರ ನಡುವೆ ಪ್ರಕರಣದ ಎ1 ಡಾ. ಶಿವಮೂರ್ತಿ ಮುರುಘಾ ಶರಣರು, ಎ2 ವಾರ್ಡನ್ ರಶ್ಮಿ ಮತ್ತು ಎ4 ಪರಮಶಿವಯ್ಯ ವಿರುದ್ಧ ಆರೋಪಗಳು ದೃಢಪಟ್ಟಿವೆ ಎಂದು ಚಿತ್ರದುರ್ಗ ಎಸ್ಪಿ ಹೇಳಿದ್ದಾರೆ. ಆದರೆ, ಎ3 ಮಠದ ಉತ್ತರಾಧಿಕಾರಿ ಮತ್ತು ಎ5 ಗಂಗಾಧರಯ್ಯ ಇವರಿಬ್ಬರ ವಿರುದ್ಧ ಆರೋಪಗಳಿಗೆ ಈವರೆಗೆ ಸಾಕ್ಷ್ಯಾಧಾರ ಲಭ್ಯವಾಗದೆ ಇರುವುದರಿಂದ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
ಈ ನಡುವೆ ಮುರುಘಾ ಶ್ರೀಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮುರುಘಾ ಶರಣರ ವಿರುದ್ಧ ಕೊಲೆ ಆರೋಪ, ಮಾದಕವಸ್ತು ಬಳಕೆ ಆರೋಪ ಕೂಡ ಕೇಳಿ ಬರುತ್ತಿದೆ . ಈ ಬಗ್ಗೆ ಅವರ ಒಡನಾಡಿ ಸಂಸ್ಥಾಪಕ ಸ್ಟ್ಯಾನ್ಲಿ ಮಾಹಿತಿ ನೀಡಿದ್ದು, ಮಕ್ಕಳನ್ನು ಅಕ್ರಮವಾಗಿ ದತ್ತು ನೀಡುವ, ಮಾನವ ಸಾಗಣೆ, ಅತ್ಯಾಚಾರ ಕೊಲೆ ಆರೋಪವನ್ನು ಕೂಡ ಮಾಡಿದ್ದಾರೆ. ಹೀಗಾಗಿ, ಮುರುಘಾ ಶರಣರು ಡ್ರಗ್ಸ್ ತೆಗೆದುಕೊಂಡಿರುವ ಅನುಮಾನ ಕೂಡ ಈ ನಡುವೆ ದಟ್ಟವಾಗಿ ಕಾಡುತ್ತಿದೆ.
ಮಠದಲ್ಲಿದ್ದ ಮಗುವಿನ ಮೇಲೆ ಅತ್ಯಾಚಾರ ನಡೆದು ನಂತರ ಮಗುವನ್ನು ಕೊಲೆ ಮಾಡಲಾಗಿದೆ ಎಂಬ ಆರೋಪವು ಕೇಳಿ ಬಂದಿದ್ದು, ಮಠದ ಆವರಣದಲ್ಲಿ ಕಾಂಡೋಮ್ ಹಾಗೂ ಸಿರಂಜ್ ಕೂಡ ಸಿಕ್ಕಿದೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಲಾಗಿ ವಿಚಾರಣೆ ನಡೆಯುತ್ತಿದೆ.
ಇನ್ನು, ಮುರುಘಾ ಶರಣರ ವಿರುದ್ಧ ತನಿಖೆ ನಡೆಸಿರುವ ಡಿವೈಎಸ್ಪಿ ಅನಿಲ್ ನೇತೃತ್ವದ ತಂಡ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ.