ಕೊಟ್ಟ ಸಾಲ ಕೇಳಿದ್ದಕ್ಕೆ 79 ವರ್ಷದ ವೃದ್ಧನಿಗೆ ಹನಿಟ್ರ್ಯಾಪ್ ಮಾಡಿದ ಮಹಿಳೆ | 15 ಲಕ್ಷಕ್ಕೆ ಬೇಡಿಕೆ ಇಟ್ಟ ಈಕೆ ಈಗ ಪೊಲೀಸರ ಅತಿಥಿ…!
ಮಹಿಳೆಯೊಬ್ಬಳು ತನಗೆ ಕಷ್ಟವಿದೆ ಎಂದು ಹೇಳಿ ವೃದ್ಧನ ಬಳಿ ಸಹಾಯವನ್ನು ಕೇಳಿದ್ದಾಳೆ. ವೃದ್ಧನು ಉದಾರ ಮನಸ್ಸಿನಿಂದ ಆಕೆಗೆ ಸಾಲವನ್ನು ನೀಡಿದ್ದನು. ಕೆಲ ಸಮಯದ ನಂತರ ಆತ ಕೊಟ್ಟ ಸಾಲವನ್ನು ಹಿಂದಿರುಗಿಸುವಂತೆ ಕೇಳಿದ್ದಾನೆ. ಈ ವೇಳೆ ಆತನಿಗೆ ಮತ್ತು ಬರಿಸಿ, ನಗ್ನ ಮಾಡಿ, ತನ್ನ ಜೊತೆ ಮಲಗಿದ ರೀತಿ ಫೋಟೋ ತೆಗೆಸಿಕೊಂಡು ಹನಿಟ್ರ್ಯಾಪ್‍ಗೆ ಯತ್ನಿಸಿ, 15 ಲಕ್ಷಕ್ಕೆ ಮಹಿಳೆ ಬೇಡಿಕೆ ಇಟ್ಟಿದ್ದಾಳೆ. ಇದೀಗ ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ನಗರದ ಶಿವಕುಮಾರ ಸ್ವಾಮಿ ಬಡಾವಣೆ ನಿವಾಸಿ 74 ವರ್ಷದ ಚಿದಾನಂದಪ್ಪ ಹನಿಟ್ರ್ಯಾಪ್‍ಗೆ ಒಳಗಾದ ವೃದ್ಧ ಎಂಬುದು ತಿಳಿದು ಬಂದಿದೆ. ಶಿವಕುಮಾರ ಸ್ವಾಮಿ ಬಡಾವಣೆಗೆ ಹೊಂದಿಕೊಂಡ ಸರಸ್ವತಿ ನಗರದ ನಿವಾಸಿ 32 ವರ್ಷದ ಯಶೋಧ ಎಂಬ ಮಹಿಳೆಯ ಜೊತೆಗೆ ವೃದ್ಧ ಚಿದಾನಂದಪ್ಪರ ಪರಿಚಯವಾಗಿತ್ತು. ಹೀಗೆ ಪರಿಚಯವಾಗಿ ಅಲ್ಪಸ್ವಲ್ಪ ಮಾತುಕತೆಯ ನಂತರ ಇಬ್ಬರ ನಡುವೆ ಸ್ನೇಹವಾಗಿದೆ. ಅಷ್ಟೇ ಅಲ್ಲದೆ ಯಶೋಧ, ಚಿದಾನಂದಪ್ಪನನ್ನು ಆಗಾಗ ಮನೆಗೆ ಆಹ್ವಾನಿಸಿ ಟೀ, ಕಾಫಿ , ಜ್ಯೂಸ್ ನೀಡುತ್ತಿದ್ದಳು.
ಹೀಗೇ ಸಮಯ ಕಳೆದಂತೆ ಯಶೋಧ ಚಿದಾನಂದಪ್ಪನ ಬಳಿ ಆಗಾಗ ಸಣ್ಣ ಪ್ರಮಾಣದ ಹಣವನ್ನು ಕೇಳುತ್ತಿದ್ದಳು. ನಂತರ ಒಂದು ದಿನ ಬರೋಬ್ಬರಿ 86 ಸಾವಿರ ರೂಪಾಯಿ ಸಾಲವನ್ನು ಕೇಳಿದ್ದಾಳೆ. ಸ್ನೇಹಿತೆಯಾಗಿರುವುದರಿಂದ ಹಿಂದು-ಮುಂದು ನೋಡದೆ ವೃದ್ಧ ಸಾಲವನ್ನು ನೀಡಿದ್ದಾನೆ. ಕೆಲಸದಿಂದ ನಿವೃತ್ತರಾಗಿದ್ದ ವೃದ್ಧ ಬಳಿಕ ತಾನು ನೀಡಿರುವ ಹಣವನ್ನು ಹಿಂತಿರುಗಿಸುವಂತೆ ಕೇಳಿದ್ದಾರೆ. ಆದರೆ ನಾಳೆ,ನಾಡಿದ್ದೂ ಅಂತಾ ಹೇಳಿ ಮಹಿಳೆ ಹಣ ವಾಪಸ್ಸು ಕೊಟ್ಟಿಲ್ಲ.
ಹೀಗೆ ವೃದ್ಧ ಒಂದು ದಿನ ವಾಕಿಂಗ್ ಮುಗಿಸಿ ಯಶೋಧ ಮನೆಯ ಮುಂದೆ ಸಾಗುವಾಗ ಆಕೆ ಚಿದಾನಂದಪ್ಪನನ್ನು ಅಕ್ಕರೆಯಿಂದ ಮನೆಗೆ ಕರೆದು ಜ್ಯೂಸ್ ನೀಡಿದ್ದಾಳೆ. ಅದನ್ನು ಕುಡಿದ ಕೆಲ ಹೊತ್ತಿನಲ್ಲಿಯೇ ವೃದ್ಧ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾನೆ. ಆತನಿಗೆ ಎಚ್ಚರವಾದಾಗ ಮೈ ಮೇಲೆ ಬಟ್ಟೆಯೇ ಇರಲಿಲ್ಲ. ಇದರಿಂದ ಭಯಗೊಂಡ ಚಿದಾನಂದಪ್ಪ ಬಟ್ಟೆ ಹಾಕಿಕೊಂಡು ಮನೆಗೆ ಬಂದಿದ್ದಾರೆ. ಈ ಘಟನೆ ನಡೆದ ಎರಡು ದಿನಗಳ ನಂತರ ಹಣಕ್ಕಾಗಿ ಮತ್ತೆ ಚಿದಾನಂದಪ್ಪ ಆಕೆಗೆ ಫೋನ್ ಮಾಡಿದ್ದಾರೆ. ಆಗ ನೀನು ನನ್ನ ಜೊತೆ ಮಲಗಿರುವೆ. ನನ್ನ ಬಳಿ ವೀಡಿಯೋ ಇದೆ, 15 ಲಕ್ಷ ಕೊಡು. ಇಲ್ಲ ನಿನ್ನ ಹೆಂಡತಿ ಮಕ್ಕಳಿಗೆ ತೋರಿಸುತ್ತೇನೆ ಎಂದಿದ್ದಾಳೆ. ಆಕೆಯ ಬೆದರಿಕೆಗೆ ಹೆದರಿ ಈ ವಿಚಾರ ಪರಿಚಯದವರ ಬಳಿ ಚಿದಾನಂದಪ್ಪ ಹೇಳಿಕೊಂಡಿದ್ದಾರೆ.
ನಂತರ ಚಿದಾನಂದಪ್ಪ 7 ರಿಂದ 8 ಲಕ್ಷಕ್ಕೆ ಮಾತನಾಡಿ ಡೀಲ್ ಮುಗಿಸಲು ಮುಂದಾಗಿದ್ದಾರೆ. ಆದರೆ ಯಶೋಧ ಮಾತ್ರ 15 ಲಕ್ಷ ಕೊಡದೇ ಎಂದು ಪಟ್ಟು ಹಿಡಿದಿದ್ದಾಳೆ. ಇದೇ ವೇಳೆ ಚಿದಾನಂದಪ್ಪನ ವಾಟ್ಸಪ್‍ಗೆ ಒಂದು ನಗ್ನವಾದ ಫೋಟೋ ಅವಳ ಮುಖ ಕಾಣದ ಹಾಗೆ ಮಾಡಿ ಕಳುಹಿಸಿದ್ದಾಳೆ. ಇದರಿಂದ ಭಯಗೊಂಡು, ಈ ವಿಚಾರವನ್ನು ಚಿದಾನಂದಪ್ಪ ತನ್ನ ಪುತ್ರನಿಗೆ ಹೇಳಿದ್ದಾರೆ.
ನಂತರ ಪೋಲಿಸರಿಗೆ ದೂರು ನೀಡಿ, ಕೆಟಿಜೆನಗರ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು ಯಶೋಧಳನ್ನು ಬಂಧಿಸಿದ್ದಾರೆ. ವೃದ್ಧನಿಗೆ ಹನಿಟ್ರ್ಯಾಪ್ ಮಾಡಿ 15 ಲಕ್ಷ ವಸೂಲಿಗೆ ಮುಂದಾದ ಯಶೋಧ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಮಹಿಳೆ ವೃದ್ಧನ ಉದಾರತೆಯನ್ನು ದುರುಪಯೋಗ ಪಡಿಸಿಕೊಂಡಳು. ಈ ರೀತಿಯ ಘಟನೆಗಳು ಸಂಭವಿಸಬಾರದೆಂದರೆ ಸಾಲ ನೀಡುವ ಮೊದಲು ಸಾವಿರಾರು ಬಾರಿ ಯೋಚಿಸಬೇಕಾಗುತ್ತದೆ.