ಬೀದಿಯಲ್ಲಿ ಮಹಿಳೆಯರಿಗೆ ಹಿಗ್ಗಾಮುಗ್ಗ ಥಳಿಸಿದ ಪೊಲೀಸ್ | ವೀಡಿಯೋ ವೈರಲ್
ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಜಲಾಲ್‌ಪುರದಲ್ಲಿ ಬಿ.ಆರ್ ಅಂಬೇಡ್ಕರ್ ಪ್ರತಿಮೆ ಧ್ವಂಸವಾಗಿತ್ತು. ಈ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರಿಗೆ ಪೋಲಿಸರು ಹಿಗ್ಗಾಮುಗ್ಗ ಥಳಿಸಿದ್ದಾರೆ.
ಜಲಾಲ್‌ಪುರದಲ್ಲಿ ಇತ್ತೀಚೆಗೆ ಬಿ.ಆರ್ ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರಿಗೆ ಪೋಲಿಸರು ಲಾಠಿ ರುಚಿ ತೋರಿಸಿದ್ದಾರೆ. ಈ ಪ್ರತಿಮೆ ಇರುವ ಭೂಮಿಯ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಯುತ್ತಿದೆ. ಭಾನುವಾರ ಆ ಸ್ಥಳದಲ್ಲಿ ಮಹಿಳೆಯರ ಗುಂಪೊಂದು ಪ್ರತಿಭಟನೆ ನಡೆಸುತ್ತಿದ್ದರು. ಆ ಸಮಯದಲ್ಲಿ ಪೊಲೀಸರು ಬಂದು ಅವರನ್ನು ಅಲ್ಲಿಂದ ಚದುರಿಸಲು ಪ್ರಯತ್ನ ಪಟ್ಟರು. ಆದರೆ ಕೆಲವು ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ಕಲ್ಲು ಎಸೆಯಲು ಪ್ರಾರಂಭಿಸಿದ್ದಾರೆ.
ಮಹಿಳೆಯರು ನಮ್ಮ ವಾಹನಗಳ ಮೇಲೆ ಕಲ್ಲು ಎಸೆಯಲು ಪ್ರಾರಂಭಿಸಿದರು. ಇದಾದ ನಂತರ ನಾವು ಮಹಿಳೆಯರ ಮೇಲೆ ಲಾಠಿ ಪ್ರಹಾರ ಮಾಡಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಕೆಲವು ಮಹಿಳೆಯರು ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕೂದಲನ್ನು ಎಳೆದಾಡಿದ್ದಾರೆ. ಈ ಹೊತ್ತಲ್ಲೇ ಕೆಲವು ಪ್ರತಿಭಟನಾಕಾರರು ಪೊಲೀಸ್ ಕಾರಿನ ಮೇಲೆ ದಾಳಿ ಮಾಡಿ ಕಾರು ಧ್ವಂಸಗೊಳಿಸಿದರು ಎಂದು ಅಂಬೇಡ್ಕರ್ ನಗರ ಹಿರಿಯ ಪೊಲೀಸ್ ಅಧಿಕಾರಿ ಅಜಿತ್ ಕುಮಾರ್ ಸಿನ್ಹಾ ಹೇಳಿದ್ದಾರೆ. ಹಾಗಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಸಣ್ಣ ಬಲ ಪ್ರಯೋಗಿಸಬೇಕಾಯಿತು ಎಂದು ಅವರು ಹೇಳಿದರು. ಇನ್ನೂ ಈ ಘಟನೆಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.