ದೇವಸ್ಥಾನದಲ್ಲಿ ನೀಡೋ ತೀರ್ಥ ಕುಡಿಯಬಾರದು – ಬಿ ಟಿ ಲಲಿತಾ ನಾಯಕ್ | ಭೂತಕೋಲ ಆಯಿತು ಇದೀಗ ದೇವಸ್ಥಾನದ ಸರದಿ!!!
ಮಾಜಿ ಸಚಿವೆ, ಸಾಹಿತಿ, ಸಾಮಾಜಿಕ ಕಾರ್ಯಕರ್ತೆಯಾದ ಬಿ.ಟಿ ಲಲಿತಾ ನಾಯಕ್ ಅವರು ಹಿಂದೂ ಸಂಸ್ಕೃತಿ, ಆಚಾರ-ವಿಚಾರ, ಪದ್ಧತಿಗಳ ಬಗ್ಗೆ ಕಟುವಾಗಿ ಮಾತನಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಿರುವ ಪದ್ಧತಿಗಳು, ಸರ್ಕಾರ ಕೈಗೊಂಡ ಕಾರ್ಯಗಳು ತಪ್ಪು ಎಂದು ಹೇಳಿದ್ದಾರೆ.
ದೇವಸ್ಥಾನಗಳಲ್ಲಿ ನೀಡುವ ತೀರ್ಥವನ್ನು ಕುಡಿಯಬಾರದು. ಅವೆಲ್ಲ ಅವೈಜ್ಞಾನಿಕವಾದದ್ದು , ಅವರು ಶುದ್ಧವಾಗಿ ಕೈತೊಳೆಯುವುದಿಲ್ಲ. ನಮ್ಮ ಮನೆಯಲ್ಲಿ ನೀರು ಇಲ್ವಾ? ಕೃಷ್ಣಯ್ಯ ಶೆಟ್ಟಿ ಗಂಗಾಜಲ ತಂದು ಕೊಟ್ಟರು ಅಲ್ಲಿ ಹೆಣ ತೇಲುತ್ತದೆ. ಅಲ್ಲಿ ಹೆಣ ಸುಟ್ಟು ಅದನ್ನು ಗಂಗಾ ನದಿಗೆ ಎಸೆಯುತ್ತಾರೆ ಎಂದು ಹೇಳಿದರು.
ಅಷ್ಟೇ ಅಲ್ಲದೆ, ಮಂಗಳಮುಖಿಯರಿಗೆ ಹಣವನ್ನು ನೀಡುವುದಲ್ಲ ಅವರಿಗೆ ಕೆಲಸ ನೀಡಿ. ಹಾಗೇ ಮಂಗಳಮುಖಿಯರು ದೇವರು ಎಂಬುದು ತಪ್ಪು. ಯಾರಾದರೂ ಒಂಟಿಯಾಗಿ ಸಿಕ್ಕರೆ ಅವರನ್ನು ಹೊತ್ತುಕೊಂಡು ಹೋಗಿ ಕೊಂದು ಹಾಕುತ್ತಾರೆ. ಅಷ್ಟು ಹಿಂಸೆ ನೀಡುವಂತಹ ಮಂಗಳಮುಖಿಯರಿವರು. ಇದಕ್ಕೆ ಸಾಕಷ್ಟು ಉದಾಹರಣೆ ಕೂಡ ಇದೆ. ಇವರನ್ನು ದುಡಿಸಿಕೊಳ್ಳುವ ಕೆಲಸವಾಗಬೇಕು, ಕೆಲಸ ನೀಡಬೇಕು ಇವರಿಗೆ ಹಣವಲ್ಲ ಎಂದು ಲಲಿತಾ ನಾಯಕ್ ಹೇಳಿದರು.
ಇನ್ನೂ, ದೈವ ನರ್ತಕರ ಮಾಸಾಶನಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ರಾಜ್ಯ ಸರ್ಕಾರ ದೈವ ನರ್ತಕರಿಗೆ ಮಾಸಾಶನ ನೀಡಬಾರದು. 2 ಸಾವಿರ ರೂ. ಮಾಸಾಶನ ನೀಡುವ ಬದಲು ಉದ್ಯೋಗ ನೀಡಬೇಕು. ಮಾನವ ಶ್ರಮವನ್ನು ಸರ್ಕಾರ ಬಳಸಿಕೊಳ್ಳಬೇಕು. ಅದನ್ನು ಬಿಟ್ಟು ನಾನು ದೇವರು ಅಂತಾ ಕುಣಿದಾಗ, ಅದಕ್ಕೆ ಎರಡು ಸಾವಿರ ರೂಪಾಯಿ ಕೊಟ್ಟರೆ ಅದು ಸಾಲುವುದಿಲ್ಲ ಮುಂದೆ ಆತ ಮೌಡ್ಯವನ್ನು ಎಲ್ಲೆಡೆ ಬಿತ್ತರಿಸುತ್ತಾನೆ. ಅರ್ಚಕರು ಹಾಗೂ ಮೌಲ್ವಿಗಳಿಗೂ ಮಾಸಾಶನ ನೀಡಬಾರದು. ದೇವಸ್ಥಾನಗಳಲ್ಲಿ ನಮಗೆ ಜ್ಞಾನ ಸಿಗಲ್ಲ. ಬದಲಾಗಿ ಗ್ರಂಥಾಲಯ, ಶಾಲೆಗಳಲ್ಲಿ ಮಾತ್ರ ನಮಗೆ ಜ್ಞಾನ ಸಿಗುವುದು ಎಂದು ಹೇಳಿದರು.
ಇನ್ನೂ ಕಾಂತಾರ ಸಿನಿಮಾದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಬಗ್ಗೆ ಮಾತನಾಡಿರುವ ಅವರು, ಭೂತಾರಾಧನೆ ಸಮಯದಲ್ಲಿ ದೈವ ನರ್ತಕರ ಓಹೋ ಅಂತ ಚಿರಾಟ, ಕೂಗಾಟ ದೈವ ಮೈಮೇಲೆ ಬರುವುದರಿಂದ ಎನ್ನುವುದು ಸತ್ಯ ಅಲ್ಲ. ಅದಕ್ಕೆ ಬೇರೆಯೇ ಕಾರಣವಿದೆ. ರಿಷಬ್ ವಿಚಾರವನ್ನು ನೇರವಾಗಿ ಹೇಳಿದ್ರೆ ಈ ಮೂರ್ಖ ಜನರು ಆತನನ್ನು ಹಿಡಿದು ಹೊಡೆದು ಕೊಂದು ಹಾಕುತ್ತಾರೆ. ಪರದೆಗೆ ಬೆಂಕಿ ಹಚ್ಚುತ್ತಾರೆ. ಆತ ಇನ್ನೂ ಬದುಕಬೇಕು ಅಂತ ಬಹಳಷ್ಟು ಬುದ್ದಿವಂತಿಕೆಯಿಂದ ಈ ಸಿನಿಮಾ ಮಾಡಿದ್ದಾನೆ. ಕಾಂತಾರ ಕಾಡಿನ ಜನರ ನೋವಿನ ಕಥೆಯಾಗಿದೆ. ಅವರಿಗೆ ಜಮೀನ್ದಾರಿ ಪದ್ಧತಿಯ ಮೂಲಕ ಒಕ್ಕಲೆಬ್ಬಿಸಲು ನೋಡಿ, ಬಹಳಷ್ಟು ಚಿತ್ರಹಿಂಸೆ ನೀಡಿದರು. ಹಾಗಾಗಿ, ಅವರು ತಮ್ಮ ಉಳಿವಿಗಾಗಿ ಪೊಲೀಸರ ಮತ್ತು ಸರ್ಕಾರದ ಮೊರೆ ಹೋದರು. ಅವರಿಂದ ನ್ಯಾಯ ಸಿಗದೆ ಇದ್ದಾಗ ಚಿರಾಡಿ ತಮ್ಮ ನೋವು ಹೊರಹಾಕಿದರು. ಅದನ್ನೇ ದೈವ ಅಂತ ನಂಬಲಾಗುತ್ತಿದೆ ಎಂದು ಲಲಿತಾ ನಾಯಕ್ ಹೇಳಿದ್ದಾರೆ.
ಹಾಗೇ ಅಂಕೋಲಾ-ಹುಬ್ಬಳಿ ರೈಲು ಮಾರ್ಗ ನಿರ್ಮಾಣಕ್ಕೆ ನನ್ನ ವಿರೋಧವಿದೆ. ಅಭಿವೃದ್ಧಿಯ ಹೆಸರಿನಲ್ಲಿ ಕಾಡಿನ ನಾಶ ಮಾಡುವುದು ತಪ್ಪು. ಉದ್ಯೋಗ ಸೃಷ್ಟಿಸಲು, ಅಭಿವೃದ್ಧಿ ಮಾಡಲು ರೈಲು ಮಾರ್ಗ ಒಂದೆ ಪರಿಹಾರವಲ್ಲ ಎಂದು ಅವರು ಹೇಳಿದ್ದಾರೆ.
ಇನ್ನೂ, ದೈವ ನರ್ತಕರಿಗೆ ಮಾಸಾಶನ ನೀಡಬಾರದು ಎಂಬ ಹೇಳಿಕೆಗೆ ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಯು. ಟಿ ಖಾದರ್ ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮಾನ್ಯ ಬಿ.ಟಿ ಲಲಿತಾ ನಾಯಕ್ ಅವರೇ ನಿಮ್ಮ ಬಗ್ಗೆ ನಮಗೆ ಗೌರವವಿದೆ. ಆದರೆ ದೈವ ನರ್ತಕರಿಗೆ ನೀಡಿರುವ ಮಾಶಾಸನ ಸರಿ ಅಲ್ಲ ಎಂಬ ಮಾತನ್ನ ನಾನು ಒಪ್ಪಲು ಸಿದ್ದವಿಲ್ಲ. ನನ್ನ ಕ್ಷೇತ್ರ ಹಾಗೂ ಸಂಪೂರ್ಣ ಕರಾವಳಿ ಜನರ ಪರವಾಗಿ ನಾನು ನಿಮ್ಮ ಮಾತನ್ನು ಖಂಡಿಸುತ್ತೇನೆ. ದೈವ ನರ್ತಕರ ಪವಿತ್ರ ಆಚರಣೆ ಗೌರವಿಸಿ ಹಾಗೂ ಕರಾವಳಿ ಸಂಸ್ಕೃತಿಯನ್ನ ಅರ್ಥೈಸಿಕೊಂಡು ನಿಮ್ಮ ನಿಲುವಿನ ಬಗ್ಗೆ ಮರುಚಿಂತನೆ ಮಾಡುವುದು ಒಳಿತು ಎಂದು ಹೇಳಿದ್ದಾರೆ.
ಈ ಮೊದಲೇ ನಟ ಚೇತನ್ ಕರಾವಳಿ ಭಾಗದ ಭೂತಾರಾಧನೆ ಬಗ್ಗೆ ಹೇಳಿದ್ದಕ್ಕೆ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ, ದೂರು ಕೂಡ ದಾಖಲಾಗಿತ್ತು. ಆದರೆ ಇದೀಗ ಅವರ ಸಾಲಿಗೆ ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್ ಅವರು ಕೂಡ ಸೇರ್ಪಡೆಯಾಗಿದ್ದಾರೆ.