ಪ್ರವೀಣ್ ನೆಟ್ಟಾರ್ ಹತ್ಯಾ ಶಂಕಿತರು ವಿದೇಶಕ್ಕೆ ಎಸ್ಕೇಪ್ ?! ಪಾಸ್ ಪೋರ್ಟ್ ಸಂಬಂಧಿ ಟೆಕ್ನಿಕಲ್ ದಾಖಲೆಗಾಗಿ ಬೆಳ್ಳಾರೆಯ ಸೈಬರ್ ಸೆಂಟರ್ ಗಳ ಮೇಲೆ ದಾಳಿ !!!
ಬೆಳ್ಳಾರೆಯಲ್ಲಿ ಜು.26 ರಂದು ರಾತ್ರಿ ನಡೆದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರುರವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳ ತಂಡ ಇದೀಗ ಬೆಳ್ಳಾರೆ ಸಹಿತ ವಿವಿದೆಡೆಯ ಸೈಬರ್ ಕೇಂದ್ರಗಳಿಗೆ ನುಗ್ಗಿ ಅಲ್ಲಿ ತನಿಖೆ ನಡೆಸುತ್ತಿದೆ.
4 ಜನ ತಲೆ ಮರೆಸಿಕೊಂಡಿದ್ದಾರೆ. ಅವರಿಗೆ ಲುಕೌಟ್ ನೊಟೀಸ್ ಜಾರಿಯಾಗಿರುವ ಹಿನ್ನೆಲೆ ಶೋಧ ಮುಂದುವರಿಸಿರುವ ಎನ್ಐಎ ಅಧಿಕಾರಿಗಳು ನಾಪತ್ತೆಯಾದವರು ಪಾಸ್ಪೋರ್ಟ್ ಮಾಡಿಸಿರಬಹುದಾದ ಸಂಶಯದಲ್ಲಿ ಸೈಬರ್ ಕೇಂದ್ರಗಳಲ್ಲಿ ವಿಚಾರಣೆ ನಡೆಸುತ್ತಿದ್ದು ಸೈಬರ್ ಕೇಂದ್ರಗಳ ಮಾಲಕರ ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ಗಳ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಒಟ್ಟು ಬಂಧಿತರ ಸಂಖ್ಯೆ
ಹತ್ಯಾ ಘಟನೆಗೆ ಸಂಬಂಧಿಸಿ ದಕ್ಷಿಣ ಕನ್ನಡ, ಹುಬ್ಬಳ್ಳಿ ಮತ್ತು ಮೈಸೂರು ಸೇರಿದಂತೆ ರಾಜ್ಯದ 5 ಸ್ಥಳಗಳಲ್ಲಿ ನ.5ರಂದು ಶೋಧ ನಡೆಸಿದ್ದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪ್ರಮುಖರಾದ ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿ, ಬೆಳ್ಳಾರೆ ಗ್ರಾ.ಪಂ. ಸದಸ್ಯ ಕೆ. ಮಹಮ್ಮದ್ ಇಟ್ಬಾಲ್, ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ಶಾಫಿ ಅಪಾರ್ಟ್ಮೆಂಟ್ ನಿವಾಸಿ, ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಕೆ. ಇಸ್ಮಾಯಿಲ್ ಶಾಫಿ ಮತ್ತು ಸುಳ್ಯ ತಾಲೂಕಿನ ಕಸಬಾ ಗ್ರಾಮದ ನಾವೂರು ಗಾಂಧಿನಗರ ನಿವಾಸಿ ಇಬ್ರಾಹಿಂ ಶಾ ಎಂಬವರನ್ನು ಬಂಧಿಸಿದ್ದರು.
ಅಂದು ಬಂಧಿತರ ಮನೆಯಿಂದ ಡಿಜಿಟಲ್ ಸಾಧನಗಳು ಮತ್ತು ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕೊಲೆ ಕೃತ್ಯಕ್ಕೆ ಸಂಬಂಧಿಸಿ ಈಗಾಗಲೇ ಸುಳ್ಯ ನಿವಾಸಿ ಶಿಹಾಬ್, ಪಾಲ್ತಾಡಿ ಅಂಕತ್ತಡ್ಕದ ರಿಯಾಝ್, ಸುಳ್ಯ ಎಲಿಮಲೆಯ ಬಶೀರ್, ಸವಣೂರಿನ ಝಾಕಿರ್, ಬೆಳ್ಳಾರೆಯ ಶಫೀಕ್, ಪಳ್ಳಿಮಜಲಿನ ಸದ್ದಾಂ, ಹ್ಯಾರೀಸ್, ಬೆಳ್ಳಾರೆ ಗೌರಿಹೊಳೆಯ ನೌಫಲ್, ನಾವೂರಿನ ಆಬಿದ್ ಹಾಗೂ ಜಟ್ಟಿಪಳ್ಳದ ಕಬೀರ್ ಎಂಬವರನ್ನು ಬಂಧಿಸಲಾಗಿದ್ದು ಇದೀಗ ಕೆ. ಮಹಮ್ಮದ್ ಇಟ್ಬಾಲ್, ಕೆ. ಇಸ್ಮಾಯಿಲ್ ಶಾಫಿ ಮತ್ತು ಇಬ್ರಾಹಿಂ ಶಾರವರ ಬಂಧನದೊಂದಿಗೆ ಒಟ್ಟು ಬಂಧಿತರ ಸಂಖ್ಯೆ 13ಕ್ಕೇರಿದೆ.
ತಲೆ ಮರೆಸಿಕೊಂಡ ನಾಲ್ವರ ಕಾರ್ಯಾಚರಣೆ ನಡೆದರೂ ಅದು ಯಶಸ್ವಿಯಾಗಿರಲಿಲ್ಲ. ನಾಲ್ವರ ಪತ್ತೆಗೆ ವಿವಿಧೆಡೆ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಡಿ ಕೇಸು ದಾಖಲಿಸಲಪಟ್ಟ ನಂತರ ತಲೆ ಮರೆಸಿಕೊಂಡಿರುವ ಸುಳ್ಯ ತಾಲೂಕು ಬೆಳ್ಳಾರೆಯ ಬೂಡು ನಿವಾಸಿ ಮಹಮ್ಮದ್ ಮುಸ್ತಫಾ, ಮಡಿಕೇರಿ ನಿವಾಸಿ ತುಫೈಲ್ ಎಂ. ಎಚ್., ಸುಳ್ಯ ತಾಲೂಕು ಕಲ್ಲನೊಟ್ಟು ನಿವಾಸಿ ಉಮ್ಮರ್ ಫಾರೂಕ್ ಹಾಗೂ ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಯಾನೆ ಪೈಂಟರ್ ಸಿದ್ಧಿಕ್ರವರ ಪತ್ತೆಗಾಗಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಲುಕೌಟ್ ನೊಟೀಸ್ ಜಾರಿಗೊಳಿಸಿ ಫೋಟೊ ಸಮೇತ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದರು.
ಈ ನಾಲ್ವರ ಪೈಕಿ ಮಹಮ್ಮದ್ ಮುಸ್ತಫಾ ಹಾಗೂ ತುಫೈಲ್ ಎಂ.ಎಚ್. ಪತ್ತೆಗೆ ತಲಾ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಉಳಿದಿಬ್ಬರ ಪತ್ತೆಗೆ ತಲಾ 2 ಲಕ್ಷ ರೂ. ಬಹುಮಾನ ಪ್ರಕಟಿಸಲಾಗಿತ್ತು. ಲುಕೌಟ್ ನೊಟೀಸ್ ಜಾರಿಯಾಗಿರುವ ಈ ನಾಲ್ವರ ಪತ್ತೆಗಾಗಿ ತಂಡ ರಚಿಸಿ ವಿವಿದೆಡೆ ಶೋಧ ಮುಂದುವರಿಸಿರುವ ಎನ್ಐಎ ಅಧಿಕಾರಿಗಳು ಪುತ್ತೂರು ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಸಹಿತ ಹಲವೆಡೆ ಸಾರ್ವಜನಿಕ ನೊಟೀಸ್ ಅಂಟಿಸಿದ್ದಾರೆ.
ಅಲ್ಲದೆ, ತಲೆ ಮರೆಸಿಕೊಂಡಿರುವ ಬೆಳ್ಳಾರೆ ನಿವಾಸಿಗಳಾದ ಮಹಮ್ಮದ್ ಮುಸ್ತಫಾ, ಸಿದ್ದಿಕ್ ಯಾನೆ ಪೈಂಟರ್ ಸಿದ್ದಿಕ್, ಸುಳ್ಯದ ಉಮ್ಮರ್ ಫಾರೂಕ್ ಮತ್ತು ಮಡಿಕೇರಿಯ ತುಫೈಲ್ ಪತ್ತೆಗಾಗಿ ವಿವಿಧೆಡೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ನಾಲ್ವರು ವಿದೇಶಕ್ಕೆ ಹೋಗಬಹುದಾದ ಅಥವಾ ಹೋಗಿರುವ ಶಂಕೆ ವ್ಯಕ್ತವಾಗುತ್ತಿದೆ.
ಈ ನಾಲ್ವರು ಪಾಸ್ಪೋರ್ಟ್ ಮಾಡಿಕೊಂಡಿರಬಹುದಾದ ಶಂಕೆಯ ಮೇಲೆ ಹಲವು ಸೈಬರ್ ಕೇಂದ್ರಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳ್ಳಾರೆ ಮತ್ತು ಆಸುಪಾಸಿನ ಸೈಬರ್ ಕೇಂದ್ರಗಳ ಮಾಲಕರ ಮೊಬೈಲ್ ಫೋನ್, ಕಂಪ್ಯೂಟರ್ ಸಹಿತ ಇನ್ನಿತರ ದಾಖಲೆ ಪರಿಶೀಲಿಸುತ್ತಿರುವ ಎನ್ಐಎ ತಂಡ ಇತರ ದಾಖಲೆ ಸಂಗ್ರಹದಲ್ಲಿಯೂ ತೊಡಗಿಸಿಕೊಂಡಿದೆ ಎಂಬ ಮಾಹಿತಿ ಬರುತ್ತಿದೆ. ಖುದ್ದು ರಾಷ್ಟ್ರೀಯ ತನಿಕಾದಳ ಎನ್ಐಎ ತನಿಖೆ ಕೈಗೊಂಡಿದ್ದರು ಇಲ್ಲಿಯವರೆಗೆ ಈ ನಾಲ್ವರ ಪತ್ತೆ ಯಶಸ್ಸು ಕಂಡಿಲ್ಲ. ಪ್ರವೀಣ್ ಹತ್ಯೆ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಜೂ.27ರಂದು ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರಣ ಎನ್ಐಎಗೆ ಹಸ್ತಾಂತರಗೊಂಡಿದ್ದು ಆ.4ರಂದು ಎನ್ಐಎ ಅಧಿಕಾರಿಗಳು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಬೆಂಗಳೂರು ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ತನಿಖೆ ಚುರುಕುಗೊಳಿಸಿ ರಾಜ್ಯದಾದ್ಯಂತ ದಾಳಿ ನಡೆಯುತ್ತಿದೆ. ಇದೀಗ ಸಂಗೀತರು ವಿದೇಶಕ್ಕೆ ಹೋಗಿರಬಹುದು ಅಥವಾ ಹೋಗಬಹುದಾದ ಸಾಧ್ಯತೆಯಿದ್ದು ರಾಷ್ಟ್ರೀಯ ತನಿಕಾ ಸಂಸ್ಥೆ ಈ ಬಗ್ಗೆ ತನಿಖೆ ಶುರು ಮಾಡಿದೆ.