ಹೆಣ್ಣು ಮಗು ಹುಟ್ಟಿದ್ದಕ್ಕೆ ಇಲ್ಲೊಬ್ಬ ತಂದೆ ಮಾಡಿದ್ದೇನು ನೋಡಿ!!!
ಹೆಣ್ಣು-ಗಂಡು ಸಮಾನರು ಎಂದು ಎಷ್ಟೇ ಹೇಳಿದರೂ, ಸರ್ಕಾರ ಅಸಮಾನತೆಯನ್ನು ಹೋಗಲಾಡಿಸಲು ನಿಯಮಗಳನ್ನು ಜಾರಿಗೊಳಿಸಿದರೂ, ಜನರಲ್ಲಿ ಹೆಣ್ಣು ಎಂಬ ತಾತ್ಸಾರ ಭಾವ ಹೋಗಿಲ್ಲ. ಹೆಣ್ಣನ್ನು ತಾಯಿಯಾಗಿ, ಮಡದಿಯಾಗಿ ಸ್ವೀಕರಿಸುವ ನಮ್ಮ ಸಮಾಜಕ್ಕೆ ಹೆಣ್ಣನ್ನು ಮಗಳಾಗಿ ಸ್ವೀಕರಿಸುವ ಮನಸ್ಥಿತಿಯಿಲ್ಲ.
ಸಮಾಜದಲ್ಲಿ ಹೆಣ್ಣಿನ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ದೌರ್ಜನ್ಯ ನಡೆಯುತ್ತಿದೆ. ಹಲವಾರು ರೀತಿಯ ದೌರ್ಜನ್ಯದಿಂದ ಮನನೊಂದು ಹೆಣ್ಣು ಮಕ್ಕಳು ಪ್ರಾಣ ಕಳೆದುಕೊಳ್ಳುವುದು ಕೇಳಿದ್ದೇವೆ. ಆದರೆ ಇಲ್ಲಿ ನಡೆದಿರುವ ಘಟನೆ ವಿಚಿತ್ರವಾಗಿದೆ. ಹೆಣ್ಣು ಮಗು ಹುಟ್ಟಿತೆಂದು ತಂದೆ ಮಾಡಿದ ಕಾರ್ಯ ನೋಡಿದರೆ ಆಶ್ಚರ್ಯವೆನಿಸುತ್ತದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ 4 ನೇ ಮಗು ಸಹ ಹೆಣ್ಣು ಎಂದು ತಿಳಿದು ಆತ್ಮಹತ್ಯೆ ಮಾಡಿಕೊಂಡಿರುವಂತಹ ಆಶ್ಚರ್ಯಕರ ಘಟನೆ ನಡೆದಿದೆ. ಈ ಬಾರಿಯೂ ಹೆಣ್ಣು ಮಗು ಎಂದು ಬೇಸತ್ತು 38 ವರ್ಷದ ಲೋಕೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ 3 ದಿನದ ಹಿಂದಷ್ಟೇ ಆತನ ಪತ್ನಿಗೆ ಹೆರಿಗೆಯಾಗಿತ್ತು. ಈಗಾಗಲೇ 3 ಹೆಣ್ಣು ಮಕ್ಕಳಿದ್ದು, ಇದೀಗ 4 ನೇ ಮಗು ಸಹ ಹೆಣ್ಣು ಎಂಬ ಕಾರಣ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾಹಿತಿಯ ಪ್ರಕಾರ 4 ಹೆಣ್ಣು ಮಕ್ಕಳೆಂದು ಕೆಲ ಸ್ನೇಹಿತರು ಚುಡಾಯಿಸಿದ್ದರು ಎಂದು ಲೋಕೇಶ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಇದೀಗ 4 ನೇ ಮಗು ಸಹ ಹೆಣ್ಣಾಗಿದ್ದು, ತನಗೆ ಹೆಣ್ಣುಮಕ್ಕಳನ್ನು ಸಾಕಲು ಸಾಧ್ಯವಿಲ್ಲ ಎಂದು ಭಾವಿಸಿ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಇದಕ್ಕಿಂತ ಮೊದಲು 3 ನೇ ಬಾರಿ ಹೆಣ್ಣು ಮಗುವಾಗಿದ್ದಾಗಲೂ ಲೋಕೇಶ್ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಈ ಬಾರಿ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ಲೋಕೇಶ್, ನಿರೀಕ್ಷೆ ಹುಸಿಯಾದ ಹಿನ್ನಲೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.