ರೈತರಿಗೆ ಸಿಹಿ ಸುದ್ದಿ | ರೈತರ ಖಾತೆಗೇ ಡೀಸೆಲ್ ಸಬ್ಸಿಡಿ ಪಾವತಿ – ಕೃಷಿ ಸಚಿವ ಬಿ.ಸಿ. ಪಾಟೀಲ್ ಪ್ರಕಟಣೆ
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳ-2022ರ 3ನೇ ದಿನದ ಕಾರ್ಯಕ್ರಮದಲ್ಲಿ ಶನಿವಾರ ನಾನಾ ಜಿಲ್ಲೆಗಳ ಸಾಧಕ ರೈತರಿಗೆ ಪ್ರಶಸ್ತಿಗೆ ಪ್ರದಾನ ಮಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ರೈತರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ.
ಹೌದು, ರೈತರ ಬ್ಯಾಂಕ್ ಖಾತೆಗೆ ಡೀಸೆಲ್ ಸಬ್ಸಿಡಿಯನ್ನು ರಾಜ್ಯ ಸರಕಾರ ಶೀಘ್ರದಲ್ಲಿಯೇ ಜಮಾ ಮಾಡಲಿದೆ. ಇದನ್ನು ಪಡೆಯಲು ರೈತರು ಅರ್ಜಿ ಸಲ್ಲಿಸಬೇಕಿಲ್ಲ, ಕೃಷಿ ಇಲಾಖೆ ಕಚೇರಿಗೆ ಹೋಗಬೇಕಿಲ್ಲ, ತನ್ನ ಬಳಿ ಲಭ್ಯವಿರುವ ಕಿಸಾನ್ ಸಮ್ಮಾನ್ ನಿಧಿ ದತ್ತಾಂಶ ಆಧರಿಸಿ ಸರಕಾರವೇ ನೇರವಾಗಿ ರೈತರ ಖಾತೆಗೆ ಅನುದಾನ ಜಮಾ ಮಾಡಲಿದೆ ಎಂದಯ ಸಚಿವರು ತಿಳಿಸಿದ್ದಾರೆ.
‘ಡೀಸೆಲ್ ದರ ದುಬಾರಿಯಾಗಿರುವುದರಿಂದ ಸಣ್ಣ
ರೈತರು ಉಳುಮೆ ಮಾಡುವುದು ಕಷ್ಟವಾಗಿದೆ. ಸಾಕಷ್ಟು ಮಂದಿ ಉಳುಮೆ ಮಾಡುವುದನ್ನೇ ನಿಲ್ಲಿಸಿದ್ದಾರೆ. ಹೀಗಾಗಿ ಮತ್ತೆ ಉಳುಮೆ ಮಾಡಿ, ಕೃಷಿ ಬೆಳೆಗಳ ವ್ಯಾಪ್ತಿ ಹೆಚ್ಚುವುದರ ಜತೆಗೆ ಕೃಷಿ ಉತ್ಪನ್ನಗಳ ಪ್ರಮಾಣವೂ ಹೆಚ್ಚಾಗಲಿ. ಈ ಮೂಲಕ ರೈತರು ಮತ್ತು ರೈತ ಕುಟುಂಬಗಳು ಮತ್ತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿ ಎಂಬುದು ನಮ್ಮ ಈ ಯೋಜನೆಯ ಉದ್ದೇಶ’ ಎಂದರು.
‘ರೈತರಿಗೆ ಮೊದಲ ಬಾರಿಗೆ ಪ್ರತಿ ಎಕರೆಗೆ 250 ರೂ. ನಂತೆ ಗರಿಷ್ಠ 5 ಎಕರೆಗೆ ಡೀಸೆಲ್ ಸಹಾಯಧನ ನೀಡಲು ಸರಕಾರ ಅಗತ್ಯ ವ್ಯವಸ್ಥೆ ಮಾಡಿಕೊಂಡಿದೆ. ಬಜೆಟ್‌ನಲ್ಲಿ ಘೋಷಿಸಿದಂತೆ ‘ರೈತ ಶಕ್ತಿ ಯೋಜನೆ’ಯಡಿ ಈ ಸಹಾಯಧನ ನೀಡಲಾಗುವುದು. ಈಗಾಗಲೇ ‘ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯಡಿ ರೈತರಿಗೆ ನೀಡುತ್ತಿರುವ ಪ್ರೋತ್ಸಾಹಧನಕ್ಕಾಗಿ ರಾಜ್ಯದ 53 ಲಕ್ಷ ರೈತರಿಂದ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಜಮೀನು ಪಹಣಿ, ಆಧಾರ್ ಜೋಡಣೆಯೂ ಆಗಿದೆ. ಇದರ ಆಧಾರದ ಮೇಲೆಯೇ ಐದು ಎಕರೆವರೆಗೆ ಜಮೀನು ಹೊಂದಿರುವ ಅರ್ಹ ರೈತರಿಗೆ ಡೀಸೆಲ್ ಸಬ್ಸಿಡಿ ನೀಡಲಾಗುವುದು” ಎಂದು ವಿವರಿಸಿದರು.
”ಸಾಮಾನ್ಯವಾಗಿ ರೈತರಿಗೆ ಟ್ರ್ಯಾಕ್ಟರ್‌ನಲ್ಲಿ ಒಂದು ಎಕರೆ ಭೂಮಿ ಉಳುಮೆ ಮಾಡಲು 20 ಲೀಟರ್ ಡೀಸೆಲ್ ಬೇಕಾಗುತ್ತದೆ. ಈ ಪೈಕಿ ಪ್ರತಿ ಲೀಟರ್‌ಗೆ 25 ರೂ. ನಂತೆ 10 ಲೀಟರ್‌ಗೆ 250 ರೂ. ಸಬ್ಸಿಡಿ ನೀಡಲಾಗುವುದು. ಐದು ಎಕರೆ ಭೂಮಿ ಹೊಂದಿರುವವರಿಗೆ ಗರಿಷ್ಠ 1,250 ರೂ. ಸಬ್ಸಿಡಿ ಕೊಡಲಾಗುತ್ತದೆ. ಇದಕ್ಕಾಗಿ ಸರಕಾರ ಈಗಾಗಲೇ 500 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ” ಎಂದು ಸಚಿವರು ತಿಳಿಸಿದರು.