ಸಮಾನ ವೇತನ ನೀಡಲು ಆಗ್ರಹ ಪ್ರತಿಭಟನೆ – ಕೆಎಸ್ ಆರ್ ಟಿಸಿ
ಕೆಎಸ್ಆರ್ಟಿಸಿ ನೌಕರರಿಗೆ ರಾಜ್ಯ ಸರ್ಕಾರಿ ನೌಕರರು ಹಾಗೂ ವಿವಿಧ ಇಲಾಖೆಗಳಲ್ಲಿ ಇರುವಂತೆ ಸಮಾನ ವೇತನ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾಗಿ ಬಸ್ ನಿಲ್ದಾಣ,ನಗರಸಭೆ ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು.
ಸಾರಿಗೆ ಸಂಸ್ಥೆಯ 4 ನಿಗಮಗಳಲ್ಲಿ 1.07 ಲಕ್ಷ ನೌಕರರು ಕೆಲಸ ಮಾಡುತ್ತಿದ್ದೂ, ಪ್ರತಿನಿತ್ಯ 1 ಕೋಟಿ ಪ್ರಯಾಣಿಕರಿಗೆ ಸೇವೆ ಒದಗಿಸಲಾಗುತ್ತಿದೆ. ಸರ್ಕಾರದ ತನ್ನ ಅಧೀನದಲ್ಲಿರುವ ವಿವಿಧ ನಿಗಮ, ಇಲಾಖೆಗಳ ನೌಕರರಿಗೆ ಕಾಲಕಾಲಕ್ಕೆ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸುತ್ತಿರುವ ಸರ್ಕಾರವು ಸಾರಿಗೆ ಸಂಸ್ಥೆಯ ನೌಕರರ ವಿಚಾರ ಬಂದಾಗ ಮಾತ್ರವೇ ತಾರತಮ್ಯವನ್ನು ಅನುಸರಿಸುತ್ತಿದೆ. ಎಂಬುದಾಗಿ ನೌಕರರು ಆರೋಪಿಸಿದ್ದಾರೆ.
ಸಾರಿಗೆ ಮುಷ್ಕರದ ಸಮಯದಲ್ಲಿ ಮಾಡಿರುವ ವಜಾ ಪ್ರಕರಣಗಳು, ಮಾಡಿರುವ ವರ್ಗಾವಣೆ ಹಾಗೂ ಇತರೆ ಶಿಕ್ಷೆಗಳನ್ನು ಯಾವುದೇ ನಿಬಂಧನೆಗಳನ್ನು ವಿಧಿಸದೆ ರದ್ದು ಮಾಡಬೇಕು ಹಾಗೂ ವಜಾ ಮಾಡಿದ ನೌಕರರನ್ನು ಪುನರ್ ನೇಮಕ ಮಾಡಿಕೊಳ್ಳಬೇಕು. ನಾಲ್ಕು ನಿಗಮಗಳ ಸಾರಿಗೆ ನೌಕರರ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ದಾಖಲಿಸಿರುವ ಪೋಲಿಸ್ ಪ್ರಕರಣಗಳನ್ನು ಹಿಂಪಡೆಯಬೇಕು. ಎಂದು ಬೇಡಿಕೆ ನೀಡಿದ್ದಾರೆ.
ವಿದ್ಯುತ್ ಚಾಲಿತ ವಾಹನಗಳಿಗೆ ಖಾಸಗಿ ಚಾಲಕರನ್ನು ಮತ್ತು ನಿರ್ವಾಹಣೆಯನ್ನು ಸಾರಿಗೆ ಸಂಸ್ಥೆಗಳು ಖಾಸಗಿಯವರಿಗೆ ವಹಿಸಿದ್ದು , ಸಾರಿಗೆ ಸಂಸ್ಥೆಯನ್ನು ಖಾಸಗೀಕರಣದ ಮೂಲಕ ರಾಜ್ಯದ ಯುವಕರಿಗೆ ಮತ್ತಷ್ಟು ನಿರುದ್ಯೋಗ ಸಮಸ್ಯೆಯನ್ನು ಸೃಷ್ಟಿ ಮಾಡುವ ಯೋಜನೆಯನ್ನು ಈ ಕೂಡಲೆ ಕೈ ಬಿಡಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.