ಭಕ್ತರೇ ಗಮನಿಸಿ : ನ.8 ರ ಚಂದ್ರಗ್ರಹಣ ಹಿನ್ನೆಲೆ, ತಿಮ್ಮಪ್ಪನ ದರ್ಶನ ಭಾಗ್ಯವಿಲ್ಲ

ಅಕ್ಟೋಬರ್‌ 25ರಂದು ಸಂಭವಿಸಿದ್ದ ಸೂರ್ಯಗ್ರಹಣದ ಬಳಿಕ, ಚಂದ್ರಗ್ರಹಣ ನಡೆಯಲಿದ್ದು, ಈ ವರ್ಷದ ಕೊನೆಯ ಚಂದ್ರಗ್ರಹಣ ಇದಾಗಿದೆ. 2022ನೇ ನವೆಂಬರ್‌ 8ರಂದು ಸಂಭವಿಸಲಿದ್ದು, ಇದು ಸಂಪೂರ್ಣ ಚಂದ್ರಗ್ರಹಣವಾಗಿರುತ್ತದೆ.
ಮೊನ್ನೆಯಷ್ಟೇ ಸೂರ್ಯಗ್ರಹಣ ನಡೆದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಖಗ್ರಾಸ ಚಂದ್ರ ಗ್ರಹಣ ಸಂಭವಿಸಲಿದೆ. ಸಾಮಾನ್ಯವಾಗಿ ಗ್ರಹಣ ಸಮಯದಲ್ಲಿ ದೇವಾಲಯ ಇಲ್ಲವೇ ಯಾವುದೇ ದೈವಿಕ ಆಚರಣೆ ನಡೆಸುವುದಿಲ್ಲ. ಗ್ರಹಣ ಮುಗಿದ ಬಳಿಕ ಶುಚಿ ಕಾರ್ಯ ನಡೆಸಿ ಪೂಜೆ ಪುನಸ್ಕಾರ ನಡೆಸುವುದು ವಾಡಿಕೆ.

 

ನ. 8ರಂದು ಚಂದ್ರಗ್ರಹಣ ಹಿನ್ನೆಲೆಯಲ್ಲಿ ಸುಮಾರು 12 ಗಂಟೆಗಳ ಕಾಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ದೊರೆಯುವುದಿಲ್ಲ. ಹಾಗಾಗಿ, 12 ಗಂಟೆಗಳ ಕಾಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ನಿರ್ಬಂಧಿಸಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
ನ. 8 ಮಂಗಳವಾರ ಮಧ್ಯಾಹ್ನ 2.39ರಿಂದ 6.27ರವರೆಗೆ ಚಂದ್ರಗ್ರಹಣವಿದ್ದು, ಈ ಕಾರಣಕ್ಕಾಗಿ ಶ್ರೀವಾರಿ ದೇವಸ್ಥಾನದ ಬಾಗಿಲುಗಳನ್ನು ಬೆಳಗ್ಗೆ 8.40 ರಿಂದ ಸಂಜೆ 7.20 ರವರೆಗೆ ಮುಚ್ಚಲಾಗುತ್ತದೆ.

ಚಂದ್ರಗ್ರಹಣ ಪೂರ್ಣ ಮುಗಿದ ನಂತರ ರಾತ್ರಿ 8:30ಕ್ಕೆ ದೇವಾಯವನ್ನು ಮತ್ತೆ ತೆರೆಯಲಾಗುತ್ತದೆ. ಗ್ರಹಣ ಮುಗಿಯುವವರೆಗೆ ಅಡುಗೆ ಮಾಡದೆ ಇರುವುದರಿಂದ ತಿರುಮಲದಲ್ಲಿರುವ ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನಪ್ರಸಾದ ಭವನ, ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ನಲ್ಲಿ ಅನ್ನಪ್ರಸಾದ ವಿತರಣೆ ಕೂಡ ಇರುವುದಿಲ್ಲ ಎಂಬುದನ್ನು ಭಕ್ತರು ಗಮನಿಸಬೇಕು.

ಇನ್ನು ಗ್ರಹಣದ ನಂತರ ದೇಗುಲದ ಒಳಗೆ, ಹೊರಗೆ ಶುದ್ಧಿ ಕಾರ್ಯ ಮಾಡಿದ ಬಳಿಕ ದೇವಾಲಯದ ದ್ವಾರ ತೆರೆಯಲಾಗುತ್ತದೆ. ಹಾಗಾಗಿ,
ತಿರುಪತಿ ತಿಮ್ಮಪ್ಪನ ದರ್ಶನ ಮಾಡಬಯಸುವ ಭಕ್ತರು ಈ ಮಾಹಿತಿಯನ್ನು ತಿಳಿದು ಪ್ರಯಾಣಿಸಬೇಕು ಎಂದು ಸೂಚಿಸಲಾಗಿದೆ. ದೂರದೂರಿನ ಭಕ್ತರು ಈ ವಿಚಾರವನ್ನು ತಿಳಿದುಕೊಂಡು ದೇವರ ದರ್ಶನ ಮಾಡುವುದು ಒಳಿತು.

Leave A Reply

Your email address will not be published.