Personal finance : ಸಂಬಳದ ಖಾತೆಗೆ ಹಣ ವರ್ಗಾವಣೆಯಾಗ್ತಿದೆಯೇ? ಹಾಗಾದರೆ ಈ ವಿಷ್ಯ ತಿಳಿದಿರಿ!!!
ಇಂದಿನ ಡಿಜಿಟಲ್ ಯುಗದಲ್ಲಿ ಹಣ ಉಳಿತಾಯ ಅತಿ ಅವಶ್ಯಕವಾಗಿದ್ದು, ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಮುಗ್ಗಟ್ಟನಿಂದ ತಪ್ಪಿಸಲು ನೆರವಾಗುತ್ತದೆ. ಅದರಲ್ಲೂ ಕಾಲ ಬದಲಾದಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿ, ಆನ್ಲೈನ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮೂಲಕ ಸರಳ ರೀತಿಯಲ್ಲಿ ವ್ಯವಹಾರ ನಡೆಸಲು ಅನುವು ಮಾಡಿಕೊಟ್ಟಿದೆ.
ಬ್ಯಾಂಕ್ ಖಾತೆಯಲ್ಲಿ ಅನೇಕ ವಿಧಗಳಿದ್ದು, ಉಳಿತಾಯ ಖಾತೆ ಹಾಗೂ ಸಂಬಳದ ಖಾತೆ ಮುಖ್ಯ ಪಾತ್ರ ವಹಿಸುತ್ತದೆ. ಸಂಬಳವನ್ನು ನಗದು ರೂಪದಲ್ಲಿ ನೀಡುವ ಹಾಗೂ ಪಡೆಯುವ ಎರಡೂ ಪದ್ಧತಿ ಈಗಿಲ್ಲ.ಈಗ ಡಿಜಿಟಲ್ ಯುಗದ್ದೇ ಕಾರುಬಾರು. ಈ ಹಿಂದೆ ಚೆಕ್ ರೂಪದಲ್ಲಿ ಸಂಬಳವನ್ನು ನೀಡಲಾಗುತ್ತಿತ್ತು.
ಆದರೆ, ಇದೀಗ,ಎಲ್ಲ ಕಂಪನಿಗಳು ಸಿಬ್ಬಂದಿ ಸಂಬಳವನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತವೆ. ಸಂಬಳ ಖಾತೆಯಿದ್ದರೆ ಸಿಬ್ಬಂದಿ ಕೆಲ ಲಾಭವನ್ನು ಪಡೆಯುತ್ತಾರೆ. ಸ್ಯಾಲರಿ ಅಕೌಂಟ್ ಗೆ ಸಂಬಂಧಿಸಿದ ಕೆಲ ಮಹತ್ವದ ವಿಷಯಗಳನ್ನು ತಿಳಿದುಕೊಂಡರೆ ಉಳಿತಾಯ ಮಾಡಲು ನೆರವಾಗಬಹುದು.
ಸ್ಯಾಲರಿ ಅಕೌಂಟ್ ಕಂಪನಿ (Company) ಯು ತೆರೆಯುವ ಖಾತೆಯಾಗಿದ್ದು, ಸಿಬ್ಬಂದಿಗಾಗಿ ಕಂಪನಿ ಪರವಾಗಿ ಸ್ಯಾಲರಿ ಖಾತೆ ತೆರೆದು, ಇದರಲ್ಲಿ ಉದ್ಯೋಗಿಯ ಸಂಬಳವನ್ನು ಪ್ರತಿ ತಿಂಗಳು ಜಮೆ ಮಾಡಲಾಗುತ್ತದೆ. ಸಂಬಳದ ಖಾತೆಯನ್ನು ಒಂದು ರೀತಿಯ ಉಳಿತಾಯ ಖಾತೆ ಎಂದೂ ಕರೆಯಬಹುದಾಗಿದ್ದು, ಆದರೆ ಇದು ಸಾಮಾನ್ಯ ಉಳಿತಾಯ ಖಾತೆಗಿಂತ ಸ್ವಲ್ಪ ಭಿನ್ನವಾಗಿದೆ. ಸ್ಯಾಲರಿ ಖಾತೆಯನ್ನು ಸಾಮಾನ್ಯ ಖಾತೆಯಾಗಿಯೂ ಬದಲಿಸಿಕೊಳ್ಳಲೂ ಕೂಡ ಅವಕಾಶವಿದೆ.
ಸ್ಯಾಲರಿ ಅಕೌಂಟ್ ನಲ್ಲಿ ಶೂನ್ಯ ಬ್ಯಾಲೆನ್ಸ್ ಸೌಲಭ್ಯ ಹೊಂದಿರಬಹುದು.ಅಂದರೆ ಉದ್ಯೋಗಿ ತನ್ನ ಖಾತೆಯಲ್ಲಿ ಹಣವಿಲ್ಲವೆಂದರು ಕೂಡ ಬ್ಯಾಂಕ್ಗೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾದ ಅವಶ್ಯಕತೆ ಇಲ್ಲ.ಮೂರು ತಿಂಗಳವರೆಗೆ ಉದ್ಯೋಗಿ ಯಾವುದೇ ಬ್ಯಾಲೆನ್ಸ್ ಹೊಂದಿಲ್ಲದೆ ಹೋದರು ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಾಗಿಲ್ಲ.
ಕೆಲವರು ಸಂಬಳ ಖಾತೆ ಬದಲು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗೆ ಸಂಬಳವನ್ನು ವರ್ಗಾಯಿಸಿಕೊಳ್ಳುತ್ತಾರೆ. ವೈಯಕ್ತಿಕ ಬ್ಯಾಂಕ್ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ ಇದ್ದಾಗ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ನಿಮ್ಮ ವೈಯಕ್ತಿಕ ಖಾತೆಗೆ ಸಂಬಳವನ್ನು ವರ್ಗಾಯಿಸಿಕೊಳ್ಳದಿರುವುದು ಉತ್ತಮ.
ಯಾವುದೇ ಬ್ಯಾಂಕಿನಲ್ಲಿ ಸ್ಯಾಲರಿ ಖಾತೆ ಹೊಂದಿದ್ದರೆ ಬ್ಯಾಂಕ್ ಉದ್ಯೋಗಿ ವೈಯಕ್ತಿಕಗೊಳಿಸಿದ ಚೆಕ್ ಪುಸ್ತಕ ನೀಡಲಾಗುತ್ತದೆ. ಇದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಇದರ ಜೊತೆಗೆ ಸ್ಯಾಲರಿ ಅಕೌಂಟ್ ಹೊಂದಿದ್ದರೆ ನಿಮಗೆ ಬ್ಯಾಂಕ್ ಉಚಿತ ಇಮೇಲ್ ಸ್ಟೇಟ್ಮೆಂಟ್, ಬ್ಯಾಂಕಿಂಗ್ ಸೇವೆ, ಕ್ರೆಡಿಟ್ ಕಾರ್ಡ್ ಮುಂತಾದ ಸೌಲಭ್ಯಗಳನ್ನು ಕೂಡ ಮಾಡಲು ಅನುವು ಮಾಡಿ ಕೊಡುತ್ತದೆ.
ಅನೇಕ ಬ್ಯಾಂಕ್ ಗಳು ಸಂಬಳ ಖಾತೆಗೆ ಹೆಚ್ಚುವರಿ ಸೌಲಭ್ಯಗಳನ್ನು ನೀಡುತ್ತವೆ. ಅದರಲ್ಲಿ ಉಚಿತ ಎಟಿಎಂ ಸೌಲಭ್ಯ ಕೂಡ ಒಂದಾಗಿದ್ದು, ಕೆಲ ಬ್ಯಾಂಕ್ ಗಳು ಸ್ಯಾಲರಿ ಅಕೌಂಟ್ ಗೆ ಎಟಿಎಂನಲ್ಲಿ ಉಚಿತ ಮತ್ತು ಅನಿಯಮಿತ ವಹಿವಾಟುಗಳನ್ನು ನಡೆಸಲು ಅವಕಾಶ ಕಲ್ಪಿಸುತ್ತದೆ.
ನೀವು ಸ್ಯಾಲರಿ ಅಕೌಂಟ್ ಹೊಂದಿದ್ದರೆ ನೀವು ಖಾತೆ ಹೊಂದಿರುವ ಬ್ಯಾಂಕ್, ನಿಮಗೆ ಎಟಿಎಂ ಉಚಿತ ವಹಿವಾಟು ನೀಡುತ್ತದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳುವುದು ಸೂಕ್ತ. ಈ ಬಗ್ಗೆ ನಿಮಗೆ ಮಾಹಿತಿ ಇದ್ದರೆ, ನೀವು ಹಣವನ್ನು ಉಳಿತಾಯ ಮಾಡಬಹುದಾಗಿದೆ.
ತಿಂಗಳಲ್ಲಿ ಎಷ್ಟು ಬಾರಿ ಬೇಕಾದರೂ ಕೂಡ ಎಟಿಎಂ ಮೂಲಕ ವಹಿವಾಟು ಮಾಡಬಹುದಾಗಿದೆ. ಇಲ್ಲದಿದ್ದರೆ, ಎಟಿಎಂ ವಹಿವಾಟನ್ನು ಸೀಮಿತಗೊಳಿಸಬೇಕಾಗುತ್ತದೆ. ಬ್ಯಾಂಕ್ ಸಂಬಳ ಖಾತೆಗೂ ಸೀಮಿತ ವಹಿವಾಟನ್ನು ಮಾಡಿದ್ದಾಗ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ಅನೇಕ ಬ್ಯಾಂಕ್ಗಳು ಸಂಬಳ ಖಾತೆಗಳ ಮೇಲಿನ ಲಾಕರ್ ಶುಲ್ಕವನ್ನು ಮನ್ನಾ ಮಾಡುತ್ತವೆ. ಎಸ್ಬಿಐ, ಸ್ಯಾಲರಿ ಅಕೌಂಟ್ ನ ಲಾಕರ್ ಚಾರ್ಜ್ನಲ್ಲಿ ಶೇಕಡಾ 25 ರವರೆಗೆ ರಿಯಾಯಿತಿ ನೀಡುತ್ತದೆ. ಉದ್ಯೋಗಿಯ ಖಾತೆಗೆ ಸಂಬಳ ಬರುವುದು ನಿಂತಾಗ ಸ್ಯಾಲರಿ ಖಾತೆಗೆ ಸಿಗುವ ಎಲ್ಲ ಸೌಲಭ್ಯವನ್ನು ಕೂಡ ಬ್ಯಾಂಕ್ ಹಿಂಪಡೆಯುತ್ತದೆ.