Sleeping Tips : ಯಾರು ಎಷ್ಟು ಗಂಟೆ ನಿದ್ದೆ ಮಾಡಿದರೆ ಒಳ್ಳೆಯದು? ತಜ್ಞರ ಅಭಿಪ್ರಾಯವೇನು? ಸಂಪೂರ್ಣ ಮಾಹಿತಿ ಇಲ್ಲಿದೆ!
ನಿದ್ದೆಯು ನಮ್ಮ ದಿನನಿತ್ಯದ ದಿನಚರಿಯ ಒಂದು ಭಾಗ. ಉತ್ತಮ ನಿದ್ರೆಯು ನಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ. ನಮ್ಮ ದಿನವು ನಾವು ಹೇಗೆ ನಿದ್ದೆ ಮಾಡಿದ್ದೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಜನತೆ ನಿದ್ರೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಾರಣ ಗಂಟೆಗಟ್ಟಲೇ ಕಾಲ ಮೊಬೈಲ್, ಲ್ಯಾಪ್ ಟಾಪ್, ಕಂಪ್ಯೂಟರ್ ಮುಂದೆ ಕಳೆಯುತ್ತಾರೆ. ಇದೊಂದು ದೊಡ್ಡ ಸಮಸ್ಯೆ.
ಇದಲ್ಲದೆ ಇನ್ನು ಕೆಲವರು ಅಗತ್ಯಕ್ಕಿಂತ ಹೆಚ್ಚಾಗಿ ನಿದ್ದೆ ಮಾಡುತ್ತಾರೆ. ಇದೂ ಕೂಡ ಒಂದು ಸಮಸ್ಯೆಯೆ. ಒಬ್ಬ ಮನುಷ್ಯನು ದಿನಕ್ಕೆ ಇಂತಿಷ್ಟೇ ಹೊತ್ತು ನಿದ್ದೆ ಮಾಡಬೇಕು ಎಂಬುದನ್ನು ವೈದ್ಯಲೋಕದಲ್ಲಿ ತಿಳಿಸಿದ್ದಾರೆ. ಹಾಗಾದರೆ 18 ರಿಂದ 58 ವರ್ಷ ವಯಸ್ಸಿನ ಜನರಿಗೆ ಎಷ್ಟು ನಿದ್ರೆ ಬೇಕು? ಇದರ ಮಾಹಿತಿ ಇಲ್ಲಿದೆ.
ಸಾಮಾನ್ಯವಾಗಿ 18 ರಿಂದ 58 ವರ್ಷ ವಯಸ್ಸಿನ ಜನರು ಪ್ರತಿದಿನ ಏಳರಿಂದ ಎಂಟು ಗಂಟೆಗಳ ಕಾಲ ನಿದ್ದೆ ಮಾಡಿದ್ರೆ ಸಾಕಾಗುತ್ತದೆ. ಆದರೆ ಯಾರಾದರೂ ಇದಕ್ಕಿಂತ ಹೆಚ್ಚು ನಿದ್ರಿಸಿದರೆ, ಅವರು ಹೆಚ್ಚು ನಿದ್ರಿಸುವ ಕಾಯಿಲೆಯನ್ನು ಹೊಂದಿರುತ್ತಾರೆ. ಇದನ್ನು ಹೈಪರ್ಸೋಮ್ಮಿಯಾ ಎಂದು ಕರೆಯಲಾಗುತ್ತದೆ. ಈ ಸಮಸ್ಯೆ ಉಂಟಾದರೆ ಒಮ್ಮೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಇಲ್ಲವಾದರೆ ಇದು ದೊಡ್ಡ ಪರಿಣಾಮವನ್ನು ಬೀರಬಹುದು.
ಒಬ್ಬ ವ್ಯಕ್ತಿಯು ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ನಿದ್ರಿಸಿದರೆ, ಅವನು ಫಿಟ್ ಆಗಿರುತ್ತಾನೆ ಮತ್ತು ಹೈಪರ್ಸೋಮ್ಮಿಯಾದಿಂದ ಇತರ ಕಾಯಿಲೆಗಳನ್ನು ತಪ್ಪಿಸಬಹುದು.
18 ವರ್ಷದೊಳಗಿನ ಮತ್ತು 58 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಎಷ್ಟು ನಿದ್ರೆ ಬೇಕು?
18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮತ್ತು 58 ವರ್ಷಕ್ಕಿಂತ ಮೇಲ್ಪಟ್ಟವರು ಒಂಬತ್ತು ಗಂಟೆಯಿಂದ 11 ಗಂಟೆಗಳವರೆಗೆ ನಿದ್ರಿಸಬೇಕು. ಈ ವಯಸ್ಸಿನ ಜನರು ಇಷ್ಟು ಗಂಟೆಗಳ ಕಾಲ ಮಲಗುವುದು ಸರಿ ಎಂದು ತಜ್ಞರು ತಿಳಿಸಿದ್ದಾರೆ. ಹೆಚ್ಚು ನಿದ್ದೆ ಮಾಡುವವರಲ್ಲಿ ಪೌಷ್ಠಿಕಾಂಶದ ಕೊರತೆ ಇದ್ದು, ಇದರಿಂದಾಗಿ ದೌರ್ಬಲ್ಯವಿದ್ದು, ಸದಾ ನಿದ್ದೆಗೆ ಜಾರುವುದು ಹೆಚ್ಚಾಗಿ ಕಂಡು ಬರುತ್ತಿದೆ. ಆದ್ದರಿಂದ ನಾವು ಉತ್ತಮ ಆರೋಗ್ಯಕ್ಕಾಗಿ ಸರಿಯಾದ ನಿದ್ದೆ ಮಾಡುವುದು ಉತ್ತಮ.