ಈ ಫ್ಯಾನ್ ಗೆ ನೇಣು ಬಿಗಿದುಕೊಂಡರೂ ಹೋಗಲ್ಲ ಜೀವ | ಮಾರ್ಕೆಟ್ ಗೆ ಲಗ್ಗೆ ಇಟ್ಟಿದೆ ಸೇಫ್ ಫ್ಯಾನ್ ಡಿವೈಸ್ !!!

ದಿನದಿಂದ ದಿನಕ್ಕೆ ಹೊಸ ಆವಿಷ್ಕಾರಗಳು ನಡೆಯುತ್ತಲೆ ಇರುತ್ತವೆ. ಹೊಸ ತಂತ್ರಜ್ಞಾನ ಅಳವಡಿಸಿರುವ ಮೊಬೈಲ್, ಕಂಪ್ಯೂಟರ್, ಗೃಹಪಯೋಗಿ ಸಾಧನಗಳು ಎಲ್ಲದರಲ್ಲಿಯೂ ನವೀನತೆಯ ವೈಶಿಷ್ಟ್ಯವನ್ನು ಕಾಣ ಬಹುದು.

 

ಬಿಸಿಲಿನ ಬೇಗೆಯಲ್ಲಿ ಸೆಕೆಯ ತಣಿಸುವ ಫ್ಯಾನ್ ನಲ್ಲಿ ಕೂಡ ಇದೀಗ ಹೊಸ ಮಾರ್ಪಾಡುಗಳಾಗಿದ್ದು, ನವೀನ ಮಾದರಿಯ ಜೊತೆಗೆ ವೈಶಿಷ್ಟ್ಯ ವನ್ನು ಕೂಡ ಒಳಗೊಂಡಿದೆ. ಸೇಫ್ ಹ್ಯಾಲೋ ಕಂಪನಿ ಆವಿಷ್ಕಾರ ಮಾಡಿರುವ ಈ ಹೊಸ ಸೇಫ್ ಫ್ಯಾನ್ ಡಿವೈಸ್ ಅನ್ನು ಫ್ಯಾನ್​ಗೆ ಅಳವಡಿಸಿದಲ್ಲಿ ಆ ಫ್ಯಾನ್​ನಿಂದ ಯಾರೂ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಾಗದಂತಹ ಉಪಕರಣವನ್ನು ವಿನ್ಯಾಸ ಮಾಡಲಾಗಿದೆ.

ಹತ್ತು ಹಲವು ಕಾರಣಗಳಿಂದ ಮನನೊಂದು ಫ್ಯಾನ್​ಗೆ ಸೀರೆ, ಬೆಡ್ ಶೀಟ್, ಶಾಲು, ಹಗ್ಗವನ್ನು ಸುತ್ತಿ ಸುಲಭವಾಗಿ ನೇಣು ಹಾಕಿಕೊಳ್ಳುತ್ತಾರೆ. ದುಡುಕಿನ ಈ ನಿರ್ಧಾರದಿಂದಾಗಿ ಸಾಕಷ್ಟು ಜೀವಗಳು ಬಲಿಯಾಗುತ್ತಿವೆ. ಆತ್ಮಹತ್ಯೆ ಮಾಡಿಕೊಳ್ಳಲು ಜನರಿಗೆ ಸುಲಭವಾಗಿ ಸಿಗುವ ಉಪಾಯ ಸೀಲಿಂಗ್ ಫ್ಯಾನ್​ಗೆ ನೇಣು ಬಿಗಿದುಕೊಳ್ಳುವುದು ಎಂಬುದು ತಿಳಿದಿರುವ ವಿಚಾರ.

ಮಾನಸಿಕ ಒತ್ತಡ, ಆರೋಗ್ಯ ಸಮಸ್ಯೆ, ಜಿಗುಪ್ಸೆ ಇತ್ಯಾದಿ ಕಾರಣಗಳಿಂದ ನೊಂದು ಜನರು ಆತ್ಮಹತ್ಯೆ ಹಾದಿ ಹಿಡಿಯುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾಯಲು ಸುಲಭವಾಗಿ ದೊರೆಯುವ ಮಾರ್ಗವಾಗಿ ಫ್ಯಾನ್​ಗೆ ನೇಣು ಬಿಗಿದುಕೊಳ್ಳುತ್ತಾರೆ.

ಆದರೆ, ಇನ್ನೂ ಮುಂದೆ ಫ್ಯಾನ್ಗೆ ನೇಣು ಬಿಗಿದು ಕೊಳ್ಳುವ ಪ್ರಯತ್ನ ಯಶಸ್ಸು ಕಾಣಲು ಸಾಧ್ಯವಿಲ್ಲ. ಏಕೆಂದರೆ, ಫ್ಯಾನ್​ಗೆ ನೇಣು ಬಿಗಿದರೂ ಪ್ರಾಣಹಾನಿ ಆಗದಂತೆ ತಡೆಯುವ ತಂತ್ರಜ್ಞಾನವನ್ನು ಸೇಫ್ ಹ್ಯಾಲೋ ಎನ್ನುವ ಕಂಪನಿ ಆವಿಷ್ಕಾರ ಮಾಡಿ ಪೇಟೆಂಟ್ ಕೂಡ ಪಡೆದುಕೊಂಡಿದೆ.

ಕೆಲವರು ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಳ್ಳಲು ನೇಣುಬಿಗಿದುಕೊಂಡರೆ, ಮತ್ತೆ ಕೆಲವರು ಹೆದರಿಸಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಾರೆ. ಹಾಸ್ಟೆಲ್​ಗಳಲ್ಲಿ ವಿದ್ಯಾರ್ಥಿಗಳು, ಹೋಟೆಲ್​ಗಳಲ್ಲಿ ಗ್ರಾಹಕರು, ಕ್ವಾಟ್ರಸ್​ಗಳಲ್ಲಿ ಸಿಬ್ಬಂದಿ ಆತ್ಮಹತ್ಯೆಗೆ ಶರಣಾದ ಅನೇಕ ಉದಾಹರಣೆಗಳಿವೆ.

ನಗರದ ಅರಮನೆ ಆವರಣದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿನ ವಸ್ತು ಪ್ರದರ್ಶನ ಮಳಿಗೆಯಲ್ಲಿ ಸೂಸೈಡ್ ತಡೆಗಟ್ಟುವ ಫ್ಯಾನ್ ಡಿವೈಸ್ ಉಪಕರಣವನ್ನು ಪ್ರದರ್ಶನಕ್ಕಿಡಲಾಗಿದೆ. ಸೇಫ್ ಹ್ಯಾಲೋ ಕಂಪನಿ ಆವಿಷ್ಕಾರ ಮಾಡಿರುವ ಹೊಸ ಉಪಕರಣವನ್ನು ಸೇಫ್ ಫ್ಯಾನ್ ಹೆಸರಿನಲ್ಲಿ ಪ್ರದರ್ಶನಕ್ಕಿಟ್ಟಿದ್ದು,ಈ ಉಪಕರಣ ಫ್ಯಾನ್​ಗೆ ಅಳವಡಿಸಿದಲ್ಲಿ ಆ ಫ್ಯಾನ್​ನಿಂದ ಯಾರೂ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಾಗದಂತೆ ಉಪಕರಣವನ್ನು ವಿನ್ಯಾಸ ಮಾಡಲಾಗಿದೆ.

ಮನೆ, ಕಚೇರಿ, ಶಾಲಾ ಕಾಲೇಜು, ವಸತಿ ನಿಲಯ, ಹೋಟೆಲ್ ಸೇರಿದಂತೆ ಎಲ್ಲ ಕಡೆ ಸೀಲಿಂಗ್ ಫ್ಯಾನ್​ಗಳನ್ನು ಅಳವಡಿಸಬಹುದಾಗಿದೆ. ಈ ಸೀಲಿಂಗ್ ಫ್ಯಾನ್ ಮೂಲಕವೇ ಸಾಕಷ್ಟು ಆತ್ಮಹತ್ಯೆ ಘಟನೆ ನಡೆಯುತ್ತಿವೆ. ಮರ್ಯಾದೆಗೆ ಅಂಜಿ ಕೆಲವರು ಮನೆಯಲ್ಲಿಯೂ ಫ್ಯಾನ್ ಬಳಸಿ ನೇಣಿಗೆ ಕೊರಳೊಡ್ಡಿರುವ ನಿದರ್ಶನಗಳು ಕೂಡ ಬೇಕಾದಷ್ಟಿವೆ.

ಕಂಪನಿ ಮೂಲಗಳ ಪ್ರಕಾರ ಆತ್ಮಹತ್ಯೆ ಕೇಸ್ ಗಳಲ್ಲಿ ಶೇ.30 ರಷ್ಟು ಫ್ಯಾನ್​ಗೆ ನೇಣು ಬಿಗಿದುಕೊಂಡೇ ಆಗಿವೆ. ಈ ರೀತಿ ದುಡುಕಿನ ನಿರ್ಧಾರಕ್ಕೆ ಫ್ಯಾನ್ ಮೂಲಕ ನೇಣಿಗೆ ಕೊರಳೊಡ್ಡಲು ಮುಂದಾಗುವವರ ಪ್ರಾಣ ರಕ್ಷಣೆಗೆ ಇದೀಗ ಈ ಫ್ಯಾನ್​ ಡಿವೈಸ್ ಬಂದಿದ್ದು, ನೇರವಾಗಿ ಸೀಲಿಂಗ್ ಫ್ಯಾನ್ ಅನ್ನು ರೂಫ್​ಗಳಿಗೆ ಫಿಟ್ ಮಾಡುವ ಬದಲು ಸೇಫ್ ಹ್ಯಾಲೋ ಕಂಪನಿ ಒದಗಿಸುವ ಸೇಫ್ ಕ್ಲಾಂಪ್ ಅಳವಡಿಸಿ ಅದರ ಮೂಲಕ ಸೀಲಿಂಗ್ ಫ್ಯಾನ್ ಫಿಟ್ ಮಾಡಬೇಕಾಗಿದೆ.

ಈ ರೀತಿ ಡಿವೈಸ್ ಕನೆಕ್ಟ್ ಆದ ಫ್ಯಾನ್ ಮೂಲಕ ಯಾರಾದರೂ ಆತ್ಮಹತ್ಯೆಗೆ ಯತ್ನಿಸಿದರೆ ಅದು ಯಶ ಕಾಣಲು ಸಾಧ್ಯವಿಲ್ಲ.ಯಾಕೆಂದರೆ ಈ ಡಿವೈಸ್ 20 ಕೆಜಿ ಭಾರ ಬೀಳುತ್ತಲೇ ನಿಧಾನಕ್ಕೆ ಕೆಳಗಡೆ ಜಾರಿ ನೇಣಿಗೆ ಕೊರಳೊಡ್ಡಿದ ವ್ಯಕ್ತಿಯನ್ನು ನೆಲಕ್ಕೆ ತಲುಪಿಸುತ್ತದೆ .ಹಾಗಾಗಿ ನೇಣು ಬಿಗಿಯುವುದಿಲ್ಲ. ಜೊತೆಗೆ ಅಲಾರಾಂ ಕೂಡ ಆಗಲಿದ್ದು, ಇದರಿಂದ ಅಕ್ಕಪಕ್ಕದವರು ಅಥವಾ ಸಮೀಪದಲ್ಲಿ ಇರುವವರು ನೆರವಿಗೆ ಧಾವಿಸಲು ಸಹಕಾರಿಯಾಗಲಿದೆ.

ಮತ್ತೊಂದು ವಿಶೇಷತೆ ಎಂದರೆ, ಡಿವೈಸ್​ಗೆ ಕನೆಕ್ಟ್ ಆದ ಮೊಬೈಲ್ ಸಂಖ್ಯೆಗೆ ಸಂದೇಶವೂ ರವಾನೆಯಾಗಲಿದ್ದು, ಕೂಡಲೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಲು ಸಹಕಾರಿಯಾಗಲಿದೆ.

700-1000 ರೂ. ಗಳಿಗೆ ಕೈಗೆ ಎಟಕುವ ದರದಲ್ಲಿ ಈ ಉಪಕರಣ ಸಿಗಲಿದೆ. ಮೆಕ್ಯಾನಿಕಲ್ ಡಿವೈಸ್ ಆಗಿರುವ ಉಪಕರಣದಲ್ಲಿ ಅಲಾರಮ್ ಬಳಕೆಯಾಗಲಿದ್ದು, ಇದು ಬ್ಯಾಟರಿ ಚಾಲಿತವಾಗಿರಲಿದೆ. ಬ್ಯಾಟರಿ 10 ವರ್ಷ ಬಾಳಿಕೆ ಬರಲಿದೆ. ಅಲಾರಾಮ್ ಜೊತೆ ಮೊಬೈಲ್​ಗೆ ಮೆಸೇಜ್ ಕೂಡ ಬರಲಿದೆ.

ಈ ಕಂಪೆನಿಯು ಯಾವುದೇ ಸಂಸ್ಥೆಗಳಿಗೆ ಬೇಕಾದಲ್ಲಿ ಈ ಡಿವೈಸ್ ಸರಬರಾಜು ಮಾಡುತ್ತಿದ್ದು, ಖಾಸಗಿಯಾಗಿಯೂ ಯಾರು ಬೇಕಾದರೂ ಖರೀದಿ ಮಾಡಬಹುದಾಗಿದೆ. ಸದ್ಯ ವಾಯುಪಡೆ ವಸತಿಗೃಹಗಳು ಮುಖ್ಯ ಗ್ರಾಹಕರಾಗಿದ್ದಾರೆ.

ಹಾಲಿ ಇರುವ ಫ್ಯಾನ್​ಗಳಿಗೆ ಈ ಡಿವೈಸ್ ಅಳವಡಿಸಬಹುದಾಗಿದ್ದು, ಸೇಫ್ ಹ್ಯಾಲೋ(safehalo.in) ವೆಬ್ ಸೈಟ್ ಮೂಲಕ ಡಿವೈಸ್ ಖರೀದಿಸಬಹುದಾಗಿದ್ದು, ಇತರ ಕೆಲ ಆನ್ ಲೈನ್ ಶಾಪಿಂಗ್ ತಾಣಗಳ ಮೂಲಕವೂ ಉಪಕರಣ ಖರೀದಿಸಬಹುದಾಗಿದೆ.

Leave A Reply

Your email address will not be published.