ವೈದ್ಯರ ದಿವ್ಯ ನಿರ್ಲಕ್ಷ್ಯ | ಅವಳಿ ಗಂಡು ಮಕ್ಕಳ ಜೊತೆ ತಾಯಿ ಕೂಡಾ ಸಾವು | ಅಷ್ಟಕ್ಕೂ ಈ ಆಸ್ಪತ್ರೆ ಮಾಡಿದ್ದಾದರೂ ಏನು ಗೊತ್ತೇ?
ವೈದ್ಯರನ್ನು ದೇವರ ಸಮಾನ ಎಂದು ಪರಿಗಣಿಸುವುದು ವಾಡಿಕೆ. ಆದರೆ ವೈದ್ಯರ ನಿರ್ಲಕ್ಷ್ಯಕ್ಕೆ ಕೆಲವೊಮ್ಮೆ ಜೀವಕ್ಕೆ ಕುತ್ತು ಬಂದರೂ ಅಚ್ಚರಿಯಿಲ್ಲ. ಈ ರೀತಿಯ ಘಟನೆಯೊಂದು ವರದಿಯಾಗಿದೆ.
ತುಮಕೂರು ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ ಹಾಗೂ ಅವಳಿ ಗಂಡು ಮಕ್ಕಳು ಬಲಿಯಾಗಿರುವಂತಹ ಖೇದನಿಯ ಘಟನೆ ಜಿಲ್ಲೆಯ ಭಾರತಿನಗರದ ಆಂಜನೇಯ ದೇಗುಲ ಬಳಿ ನಡೆದಿದೆ.
ತಮಿಳುನಾಡು ಮೂಲದ ಕಸ್ತೂರಿ 1 ತಿಂಗಳಿಂದ ಓರ್ವ ಪುತ್ರಿ ಜತೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಗರ್ಭಿಣಿ ಕಸ್ತೂರಿಗೆ ನಿನ್ನೆ ಸಂಜೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸ್ಥಳೀಯರು ಆಟೋದಲ್ಲಿ ತುಮಕೂರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ತಾಯಿಯ ಆಧಾರ್ ಕಾರ್ಡ್ ಇಲ್ಲವೆಂದು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಜಿಲ್ಲಾಸ್ಪತ್ರೆ ಸಿಬ್ಬಂದಿ ನಿರಾಕರಿಸಿರುವ ಜೊತೆಗೆ ಚಿಕಿತ್ಸೆಯನ್ನು ಕೂಡ ವೈದ್ಯರು ನಿರಾಕರಿಸಿದ್ದಾರೆ. ಅಲ್ಲದೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆಡೊಯ್ಯಲು ಸಿಬ್ಬಂದಿ ಹೇಳಿದ್ದಾರೆ. ಆದರೆ, ಬೆಂಗಳೂರಿಗೆ ತೆರಳಲು ಹಣವಿಲ್ಲದೆ ಇದ್ದುದ್ದರಿಂದ ಕಸ್ತೂರಿ ಮರಳಿ ಮನೆಗೆ ಹಿಂದಿರುಗಿದ್ದಾರೆ.
ಇಂದು ಮುಂಜಾನೆ ಒಂದು ಮಗುವಿಗೆ ಜನ್ಮ ನೀಡಿರುವ ಕಸ್ತೂರಿ ಮತ್ತೊಂದು ಮಗುವಿಗೆ ಜನ್ಮನೀಡುವಾಗ ರಕ್ತಸ್ರಾವವಾಗಿ ಅವಳಿ ಗಂಡು ಮಕ್ಕಳು, ತಾಯಿ ಕಸ್ತೂರಿ ಸಾವನ್ನಪ್ಪಿದ್ದಾರೆ.
ತಾಯಿ, ಮಕ್ಕಳ ಸಾವಿಗೆ ಜಿಲ್ಲಾಸ್ಪತ್ರೆ ವೈದ್ಯರೇ ಕಾರಣವೆಂದು ಸ್ಥಳೀಯರು ಆರೋಪಿಸಿದ್ದು, ತುಮಕೂರಿನ ಎನ್ಇಪಿಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ DHO ಡಾ.ಮಂಜುನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ವೀಣಾ ಭೇಟಿ ನೀಡಿದ್ದಾರೆ. ಈ ವೇಳೆ ಆಸ್ಪತ್ರೆಗೆ ದಾಖಲಿಸಿಕೊಳ್ಳದ ವೈದ್ಯರ ವಿರುದ್ಧ ಸ್ಥಳೀಯರು ತರಾಟೆ ತೆಗೆದುಕೊಂಡಿದ್ದಾರೆ.
ಡಾ. ಉಷಾ ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸುವಂತೆ DHO ಮಂಜುನಾಥ್ಗೆ ಸ್ಥಳೀಯರು ಆಗ್ರಹಿಸಿದ್ದು, ಅಮಾನತುಗೊಳಿಸುವವರೆಗೂ ಶವಗಳನ್ನು ಎತ್ತಲ್ಲ ಎಂದು ಅಲ್ಲಿದ್ದವರು ಪಟ್ಟುಹಿಡಿದಿದ್ದಾರೆ.
ಹೆರಿಗೆ ಮಾಡಿಸಲು ಆಧಾರ್, ತಾಯಿ ಕಾರ್ಡ್ ಕಡ್ಡಾಯವಲ್ಲ. ಈ ಸಂಬಂಧ ಮಾಹಿತಿ ಪಡೆದು ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುವುದಾಗಿ ತುಮಕೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುನಾಥ್ ಹೇಳಿಕೆ ನೀಡಿದ್ದಾರೆ.
ಏನೇ ಆಗಲಿ, ಗರ್ಭಿಣಿ ಹೆಣ್ಣಿನ ಅವಸ್ಥೆಯನ್ನು ಕಂಡು ಕೂಡ ಕರಗದ ವೈದ್ಯಕೀಯ ತಂಡ ಹಾಗೂ ಸಿಬ್ಬಂದಿ ವರ್ಗಗಳ ನಡೆ ನಿಜಕ್ಕೂ ಅಚ್ಚರಿ ಮೂಡಿಸುವುದಲ್ಲದೆ, ಎರಡು ಪುಟ್ಟ ಕಂದಮ್ಮಗಳು ಜಗವ ನೋಡುವ ಮೊದಲೇ ಜೀವಕ್ಕೆ ಕುತ್ತು ತರುವಂತೆ ಆದದ್ದು ವಿಪರ್ಯಾಸ.