DR : ಕೇಂದ್ರ ಸರಕಾರಿ ಪಿಂಚಣಿದಾರರ ಡಿಆರ್ ಹೆಚ್ಚಳ | ಇವರಿಗೆ ಮಾತ್ರ ಅನ್ವಯ!!!
ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಕೇಂದ್ರ ನೌಕರರಿಗೆ ವೇತನ ದರದಲ್ಲಿ ಪರಿಷ್ಕರಣೆ ಮಾಡಿದ್ದು ತಿಳಿದಿರುವ ವಿಚಾರ. ಕೇಂದ್ರ ಸರ್ಕಾರದ ನೌಕರರು ಹಾಗೂ ಪಿಂಚಣಿದಾರರ ತುಟ್ಟಿಭತ್ಯೆಯನ್ನು(ಡಿಎ) ಶೇ.4ರಷ್ಟು ಹೆಚ್ಚಳ ಮಾಡಿದ ಪರಿಣಾಮವಾಗಿ, ಕೇಂದ್ರ ಸರ್ಕಾರಿ ನೌಕರರ ಡಿಎ (DA) ಮೂಲವೇತನದಲ್ಲಿ ಶೇ.38ಕ್ಕೆ ಏರಿಕೆಯಾಗಿದೆ.
ಇದು ಏಳನೇ ವೇತನ ಆಯೋಗದ ಅಡಿಯಲ್ಲಿ ವೇತನ ಪಡೆಯುವ ಎಲ್ಲ ನೌಕರರಿಗೂ ಅನ್ವಯವಾಗಿತ್ತು. ತುಟ್ಟಿ ಭತ್ಯೆ ಅಥವಾ ಡಿಎ (DA) ಅನ್ನು ಸರ್ಕಾರಿ ನೌಕರರಿಗೆ ನೀಡಿ ಡಿಯರನೆಸ್ ರಿಲೀಫ್ (DR) ಅನ್ನು ಪಿಂಚಣಿದಾರರಿಗೆ (Pensioners) ನೀಡಲಾಗುತ್ತದೆ.
ಇದೀಗ, ಐದನೇ ವೇತನ ಆಯೋಗದಡಿಯಲ್ಲಿ ಪಿಂಚಣಿ ಪಡೆಯುತ್ತಿರುವ ಕೇಂದ್ರ ಸರ್ಕಾರದ ಕೆಲವು ಪಿಂಚಣಿದಾರರ ಡಿಯರ್ ನೆಸ್ ರಿಲೀಫ್ (ಡಿಆರ್) ದರವನ್ನು ಪರಿಷ್ಕರಣೆ ಮಾಡಲಾಗಿದೆ.
ಕೇಂದ್ರ ಸರ್ಕಾರ ತನ್ನ ನೌಕರರ ತುಟ್ಟಿ ಭತ್ಯೆ (DA) ಹಾಗೂ ತುಟ್ಟಿ ಪರಿಹಾರವನ್ನು (DR) ಪ್ರತಿ ವರ್ಷ ಜನವರಿ 1 ಮತ್ತು ಜುಲೈ 1 ರಂದು ಪರಿಷ್ಕರಿಸುತ್ತದೆ. ಆದರೆ, ಈ ನಿರ್ಧಾರವನ್ನು ಮಾತ್ರ ಸರ್ಕಾರ ಮಾರ್ಚ್ ಮತ್ತು ಸೆಪ್ಟೆಂಬರ್ ನಲ್ಲಿ ಪ್ರಕಟಿಸುತ್ತದೆ. ಪಿಂಚಣಿ ಹಾಗೂ ಪಿಂಚಣಿದಾರರ ಕಲ್ಯಾಣ ಇಲಾಖೆ (ಡಿಒಪಿಪಿಡಬ್ಲ್ಯು) ಈ ಕ್ರಮ ಕೈಗೊಂಡಿದ್ದು, ಪಿಂಚಣಿದಾರರು ಜುಲೈ 1, 2022ರಿಂದ ಅನ್ವಯಿಸುವಂತೆ ಪ್ರಸ್ತುತ ಮೂಲ ಧನದ ಶೇ.396ರಷ್ಟು ಡಿಆರ್ ಪಡೆಯಬಹುದಾಗಿದೆ.
2022ರ ಅಕ್ಟೋಬರ್ 31 ರ ಕಚೇರಿ ಜ್ಞಾಪನಾ ಪತ್ರದಲ್ಲಿ ಈ ಬಗ್ಗೆ ಡಿಒಪಿಪಿಡಬ್ಲ್ಯು ಮಾಹಿತಿ ನೀಡಿದ್ದು, 18.11.1960 ಹಾಗೂ 31.12.1985ರ ನಡುವೆ ಸೇವೆಯಿಂದ ನಿವೃತ್ತಗೊಂಡಿರುವ ಸಿಪಿಎಫ್ ಗ್ರೂಪ್ ಎ, ಬಿ, ಸಿ ಹಾಗೂ ಡಿ ಫಲಾನುಭವಿಗಳು ಮೂಲ ಧನದ 3000ರೂ., 1000ರೂ., 750ರೂ. ಹಾಗೂ 650 ರೂ. ಅನ್ನು ಕ್ರಮವಾಗಿ ಪಡೆಯಲು 2013 ರ ಜೂನ್ 4ರಿಂದ ಅನ್ವಯಿಸುವಂತೆ ಪಡೆಯಲು ಅರ್ಹರಾಗುತ್ತಾರೆ.
ಇವರಿಗೆ ಡಿಆರ್ ಅನ್ನು ಶೇ.381ರಿಂದ ಶೇ.396ಕ್ಕೆ ಏರಿಕೆ ಮಾಡಲಾಗಿದ್ದು , 01.01.1986ಕ್ಕಿಂತ ಮೊದಲು ಸೇವೆಯಿಂದ ನಿವೃತ್ತರಾದ ಅಥವಾ ಸೇವೆಯಲ್ಲಿರುವಾಗಲೇ ಮೃತರಾದ ಸಿಪಿಎಫ್ ಫಲಾನುಭವಿಯ ವಿಧವೆ ಪತ್ನಿ ಹಾಗೂ ಮಕ್ಕಳು 2013ರ ಜೂನ್ 4ರಿಂದ ಮೂಲಧನದ 645ರೂ. ಮಾಸಿಕ ಪಿಂಚಣಿಯ ಪ್ರಯೋಜನ ಪಡೆಯುತ್ತಿದ್ದರೆ ಅವರಿಗೂ ಕೂಡ ಈ ಹೊಸ ಪಿಂಚಣಿ ಪರಿಷ್ಕೃರಣೆ ಅನ್ವಯಿಸಲಿದೆ.
ಹಾಗೆಯೇ 18.11.1960ರ ಮುನ್ನ ನಿವೃತ್ತಿ ಹೊಂದಿದ ಸಿಪಿಎಫ್ ಉದ್ಯೋಗಿ 654ರೂ., 659ರೂ., 703ರೂ. ಹಾಗೂ 965ರೂ. ಪಿಂಚಣಿ ಪ್ರಯೋಜನ ಪಡೆಯುತ್ತಿದ್ದವರಿಗೂ ಕೂಡ ಪಿಂಚಣಿ ಹೆಚ್ಚಳವಾಗಲಿದೆ.
ಕೋವಿಡ್ -19 (COVID-19) ಕಾರಣದಿಂದ ಎದುರಾದ ಹೆಚ್ಚುವರಿ ವೆಚ್ಚಗಳನ್ನು ಭರಿಸಲು ಕೇಂದ್ರ ಸರ್ಕಾರ ಡಿಎ (DA) ಹಾಗೂ ಡಿಆರ್ (DR) ದರ ಹೆಚ್ಚಳದ ಮೂರು ಕಂತುಗಳನ್ನು ತಡೆ ಹಿಡಿದಿದೆ. 2021ರ ಜುಲೈನಲ್ಲಿ ಡಿಎ ಹಾಗೂ ಡಿಆರ್ ಹೆಚ್ಚಳದ ಮೇಲಿನ ತಡೆಯನ್ನು ಹಿಂಪಡೆದ ಸರ್ಕಾರ, ಆ ಬಳಿಕ ಒಟ್ಟು ಮೂರು ಬಾರಿ ಡಿಎ ಹಾಗೂ ಡಿಆರ್ ಭತ್ಯೆಗಳಲ್ಲಿ ಹೆಚ್ಚಳ ಮಾಡಿದೆ.
ಡಿಎ ಪರಿಷ್ಕರಣೆಗೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಮಾನದಂಡವಾಗಿದ್ದು,ಅದರ ಆಧಾರದಲ್ಲೇ ಪರಿಷ್ಕರಿಸಲಾಗುತ್ತದೆ. ಎಐಸಿಪಿಐ ಆರ್ ಬಿಐಯ (RBI) ಸಹನ ಮಟ್ಟಕ್ಕಿಂತ ಮೇಲಿದೆ.
ಸದ್ಯ ಚಿಲ್ಲರೆ ಹಣದುಬ್ಬರ (Retail inflation) ಆರ್ ಬಿಐ ಸಹನ ಮಟ್ಟವಾದ ಶೇ.2-6ಕ್ಕಿಂತ ಹೆಚ್ಚಿದೆ. ಹೀಗಾಗಿ ಹೀಗಾಗಿ ತುಟ್ಟಿ ಭತ್ಯೆಯನ್ನು ಶೇ. 4ರಷ್ಟು ಹೆಚ್ಚಿಸಲಾಗಿದೆ. ಈ ವರ್ಷದ ಮಾರ್ಚ್ ನಲ್ಲಿ ಕೇಂದ್ರ ಸಚಿವ ಸಂಪುಟ (Central cabinet) ಡಿಎಯನ್ನು ಶೇ.3ಕ್ಕೆ ಏರಿಕೆ ಮಾಡಲು ಒಪ್ಪಿಗೆ ನೀಡಿದ್ದರಿಂದ ಡಿಎ ಮೂಲವೇತನದ ಶೇ.34ಕ್ಕೆ ಹೆಚ್ಚಳವಾಗಿದೆ.