ಪ್ರತಿದಿನ ಶಾಲಾ ಕಾಲೇಜಿನಲ್ಲಿ ಇನ್ನು ಮುಂದೆ 10 ನಿಮಿಷ ಧ್ಯಾನ ಕಡ್ಡಾಯ- ಬಿ ಸಿ ನಾಗೇಶ್!!!
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಸರ್ಕಾರಗಳು ಹೊಸ ಯೋಜನೆಗಳನ್ನು ರೂಪಿಸುವುದು ಸಾಮಾನ್ಯ. ಶೈಕ್ಷಣಿಕವಾಗಿ ಅಲ್ಲದೆ, ವೈಯಕ್ತಿಕವಾಗಿ ಚಟುವಟಿಕೆಯಿಂದ ಕೂಡಿದ್ದು, ಏಕಾಗ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಶಿಕ್ಷಣ ಇಲಾಖೆ ಹೊಸ ಕ್ರಮ ಕೈಗೊಳ್ಳಲು ಮುಂದಾಗಿದೆ.
ಕರ್ನಾಟಕದ ಪ್ರಾಥಮಿಕ ಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸಲು, ಆರೋಗ್ಯ ವೃದ್ಧಿ ಹಾಗೂ ಮಾನಸಿಕ ಒತ್ತಡದಿಂದ ಮುಕ್ತಗೊಳಿಸಲು ಪ್ರತಿದಿನ 10 ನಿಮಿಷಗಳ ಕಾಲ ಧ್ಯಾನ ಮಾಡಿಸುವುದಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ.
ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿಸಿ ನಾಗೇಶ್ ಈ ಕುರಿತು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಧ್ಯಾನ ಮಾಡುವ ಸಂಬಂಧ ಆದೇಶ ಹೊರಡಿಸಲು ಸೂಚನೆ ನೀಡಿದ್ದು, ನಿತ್ಯ ಶಾಲಾ-ಕಾಲೇಜುಗಳಲ್ಲಿ 10 ನಿಮಿಷ ವಿದ್ಯಾರ್ಥಿಗಳು ಕಡ್ಡಾಯವಾಗಿ ಧ್ಯಾನ ಮಾಡಬೇಕಾಗಿದ್ದು, ಈ ಸಲುವಾಗಿ, ಸಮಯ ನಿಗದಿ ಮಾಡುವಂತೆ ಸೂಚನೆ ನೀಡಿದ್ದಾರೆ.
ಧ್ಯಾನ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಸಕರಾತ್ಮಕ ಸ್ಪಂದನೆ , ಒಳ್ಳೆಯ ಹವ್ಯಾಸ ಬೆಳೆಸಿಕೊಂಡು ಉತ್ತಮ ಪ್ರಜೆಯಾಗಲು ಸಹಕಾರಿಯಾಗುತ್ತದೆ. ಈಗಾಗಲೆ ಹಲವು ಜಿಲ್ಲೆಗಳ ಶಾಲೆಗಳಲ್ಲಿ ಧ್ಯಾನವನ್ನು ಮಾಡಿಸಲಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಜಾರಿ ತರಲು ಸಚಿವರು ಇಲಾಖೆಗೆ ಸೂಚಿಸಿದ್ದಾರೆ.
ಬಿ.ಸಿ. ನಾಗೇಶ್ ಅವರು ಪತ್ರದ ಆಧಾರದಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಸದ್ಯದಲ್ಲೇ ಆದೇಶ ಹೊರಡಿಸುವ ನಿರೀಕ್ಷೆ ಇದ್ದು, ಶೀಘ್ರವೇ ಶಾಲಾ-ಕಾಲೇಜುಗಳಲ್ಲಿ ಧ್ಯಾನದ ಮಾಡುವ ಆದೇಶ ಅಧಿಕೃತವಾಗಲಿದೆ.
ಧ್ಯಾನ ಧಾರ್ಮಿಕ ಅಂಶಗಳನ್ನು ಒಳಗೊಂಡಿದೆ ಎಂದು ಟೀ ಕೆ ಮಾಡಿದ್ದಾರೆ. ಕೆಲವರ ಟೀಕೆಗೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವರಾದ ನಾಗೇಶ್ ರವರು ಧ್ಯಾನವು ಧಾರ್ಮಿಕ ಆಚರಣೆಯಲ್ಲ ಎಂದು ಪ್ರತಿಪಾದಿಸಿದ್ದಾರೆ.
ಕೋವಿಡ್ 19 ಸಾಂಕ್ರಾಮಿಕ ನಂತರದ ಅವಧಿಯಲ್ಲಿ ಮಕ್ಕಳು ಏಕಾಗ್ರತೆಯನ್ನು ಕಳೆದುಕೊಂಡಿದ್ದು, ಮೊಬೈಲ್ ಎಂಬ ಸಾಧನಕ್ಕೆ ಒಗ್ಗಿ ಹೋಗಿದ್ದಾರೆ. ಈ ಪರಿಸ್ಥಿತಿಯಿಂದ ಹೊರಬರಲು , ಶಿಕ್ಷಣ ತಜ್ಞರು ಮಕ್ಕಳಿಗೆ ಧ್ಯಾನವನ್ನು ಪರಿಚಯಿಸಲು ಸಲಹೆ ನೀಡಿದ್ದಾರೆ. ವಿರೋಧದ ನಡುವೆಯೂ ಒಳ್ಳೆಯ ಉಪಕ್ರಮವನ್ನು ಬಿಡುವ ಅಗತ್ಯವಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.