ಅರೇ ಕುಡುಕ ಪಟ್ಟ ಕಟ್ಟಿಕೊಂಡ ಮಂಗ | ಅಂಗಡಿಯಲ್ಲಿಟ್ಟ ಎಣ್ಣೆ ಎಲ್ಲಾ ‘ಮಂಗಮಾಯ’!!!

ಎಣ್ಣೆನೂ…. ಸೋಡಾನೂ… ಎಂತ ಒಳ್ಳೆ ಫ್ರೆಂಡು… ಕಂಠ ಪೂರ್ತಿ ನೀ.. ಕುಡಿಯೋ ಅಣ್ಣನೇ..ಎಂಬ ಮಾತಿಗೆ ಅನುಗುಣವಾಗಿ ಕುಡುಕರಿಗೆ ಬಾರೊಂದು ತವರು ಮನೆ ಇದ್ದಂತೆ. ಒಮ್ಮೆ ಭೇಟಿ ನೀಡಿ ಅದರ ಸ್ವಾದ ತುಟಿಗೆ ತಗುಲಿದರೆ ಮಾತ್ರ ದಿನ ಪೂರ್ತಿಯಾಗುವುದು.
ನೀವೇನಾದರೂ ಮದ್ಯ ಕೇವಲ ಮನುಜರಿಗೆ ಮಾತ್ರ ಪ್ರಿಯವಾದ ಪಾನೀಯವೆಂದು ಭಾವಿಸಿದ್ದರೆ, ಇದನ್ನು ಸುಳ್ಳು ಎಂದು ರುಜುವಾತು ಮಾಡುವಂತಹ ನಿದರ್ಶನ ನೀಡುವ ಪ್ರಹಸನವೊಂದು ವರದಿಯಾಗಿದೆ.
ಹೌದು!!!.. ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಮಂಗವೊಂದು ಮದ್ಯದಂಗಡಿಗಳಿಗೆ ನುಗ್ಗಿ ಮದ್ಯ ಕದಿಯುತ್ತಿರುವ ಕುತೂಹಲಕಾರಿ ಪ್ರಕರಣವೊಂದು ವರದಿಯಾಗಿದೆ. ಇದರ ನಡುವೆ ಮಂಗನೊಂದು ಜನರ ಮದ್ಯದ ಬಾಟಲಿಗಳನ್ನು ಕದಿಯುತ್ತಿದೆ ಎಂದು ಆರೋಪಿಸಲಾಗಿದೆ.

ಮದ್ಯಕ್ಕೆ ದಾಸನಾದ ಮಂಗ ಅಂಗಡಿಯಲ್ಲಿರುವ ಮದ್ಯಗಳನ್ನು ಕದಿಯುತ್ತಿದೆ ಎಂದು ದೂರಲಾಗಿದ್ದು, ನಿತ್ಯ ಈ ಮಂಗಕ್ಕೆ ಒಂದು ಬಾಟಲಿ ಮದ್ಯ ಬೇಕು. ಮಾಲೀಕನ ಕಣ್ಣು ತಪ್ಪಿಸಿ ಚಾಣಾಕ್ಷತನದಿಂದ ಮದ್ಯ ಕದಿಯುವ ಮಂಗ ಕದ್ದ ಮದ್ಯವನ್ನು ಮರೆಯಲ್ಲಿ ಕುಡಿದು ಅಲ್ಲಿಂದ ಜೂಟ್ ಆಗಿ ಬಿಡುತ್ತದೆ.
ಮತ್ತೊಂದು ಅಚ್ಚರಿ ವಿಷಯವೇನೆಂದರೆ ಈವರೆಗೆ ಮಂಗ ತಾನಾಗಿಯೇ ಯಾರಿಗೂ ಉಪಟಳ ಮಾಡಿಲ್ಲ. ಆದರೆ ಅಕಸ್ಮಾತ್ ಯಾರಾದರು ಮದ್ಯ ಕದಿಯುವುದನ್ನು ತಪ್ಪಿಸಲು ಸಂಚು ಮಾಡಿದರೆ ಮಾತ್ರ ಸುಮ್ಮನೆ ಬಿಡುವುದಿಲ್ಲ…ದಾಳಿಗೆ ಮುಂದಾಗುತ್ತದೆ..
ಹಾಗಾಗಿ, ಅಂಗಡಿ ಮಾಲೀಕ ಹೈರಾಣಾಗಿ ಹೋಗಿದ್ದಾರೆ.ರಾಯ್ ಬರೇಲಿ ಜಿಲ್ಲೆಯ ಅಚಲಗಂಜ್ನ ಮದ್ಯದ ಅಂಗಡಿ ಮಾಲೀಕರೊಬ್ಬರು ಮದ್ಯ ಕಳ್ಳನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಕೋತಿಯನ್ನು ಅಟ್ಟಿಸಿಕೊಂಡು ಹೋದರೆ ಕಚ್ಚುತ್ತದೆ ಎಂದು ಹೇಳಿಕೊಂಡಿದ್ದಾರೆ.
ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೆ ಎಂದು ಅಂಗಡಿ ಮಾಲೀಕ ಆರೋಪಿಸಿದ್ದಾರೆ. ಜಿಲ್ಲಾ ಅಬಕಾರಿ ಅಧಿಕಾರಿ ರಾಜೇಂದ್ರ ಪ್ರತಾಪ್ ಸಿಂಗ್ , ಅರಣ್ಯ ಇಲಾಖೆಯ ನೆರವಿನಿಂದ ಈ ಕೋತಿಯನ್ನು ಹಿಡಿಯಲು ಪ್ರಯತ್ನಿಸುತ್ತಿದ್ದು, ಶೀಘ್ರದಲ್ಲೇ ಗ್ರಾಹಕರು ಈ ಸಮಸ್ಯೆಯಿಂದ ಮುಕ್ತರಾಗುತ್ತಾರೆ ಎಂದು ಭರವಸೆ ನೀಡಿದ್ದಾರೆ.
ಮನುಷ್ಯರು ಮಾತ್ರವಲ್ಲದೆ ಕೋತಿ ಮದ್ಯ ಕುಡಿಯುತ್ತಿರುವ ವಿಡಿಯೋ ಕೂಡ ವೈರಲ್ ಆಗಿದ್ದು, ಕೋತಿ ಮದ್ಯವನ್ನು ಕುಡಿಯುತ್ತಿರುವ ರೀತಿ ನೋಡಿದ ಮದ್ಯ ಪ್ರಿಯರು ಇದಕ್ಕೂ ಕೂಡ ಎಣ್ಣೆಯ ಮಹಿಮೆ ತಿಳಿದಿದೆ ಎಂದು ನಿಟ್ಟುಸಿರು ಬಿಟ್ಟರೆ, ವೀಡಿಯೊ ನೋಡಿದ ನೆಟ್ಟಿಗರಿಗೆ ಮಂಗನ ನಡೆ ಭಾರೀ ಕುತೂಹಲದ ಜೊತೆಗೆ ಬೆರಗು ಮೂಡಿಸಿದೆ.