No shave November : ಜಾಲತಾಣದಲ್ಲಿ ನೋ ಶೇವ್ ನವೆಂಬರ್ ಅಭಿಯಾನ| ಯಾಕಾಗಿ ಈ ತಿಂಗಳಲ್ಲಿ ಪುರುಷರು ಶೇವ್ ಮಾಡಲ್ಲ, ತಿಳಿದಿದೆಯೇ?

ಇತ್ತೀಚಿನ ದಿನಗಳಲ್ಲಿ ದಿನಕ್ಕೊಂದು ಹೊಸ ಅಭಿಯಾನಗಳು ನಡೆಯುತ್ತಿವೆ. ಕೆಲವೊಂದು ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದು ಸ್ವಚ್ಚ ಭಾರತ್ ಎಂದು ಶಾಲೆಗಳ, ನಗರಗಳಲ್ಲಿ ಶುಚಿ ಕಾರ್ಯ ನಡೆಸುವ ಇಲ್ಲವೇ, ಫಿಟ್ ಇಂಡಿಯಾ ಅಭಿಯಾನದ ಮೂಲಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಯೋಗ, ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಪರಿಪಾಠ ನಡೆಯುತ್ತಿವೆ. ಈ ನಡುವೆ ‘ನೋ ಶೇವ್ ನವೆಂಬರ್’ ಎಂಬ ಕಾನ್ಸೆಪ್ಟ್ ಟ್ರೆಂಡಿಂಗ್ ನಲ್ಲಿದೆ.

ನವೆಂಬರ್ ಶುರುವಾಗುತ್ತಿದ್ದಂತೆ ಫೇಸ್ಬುಕ್‌, ಟ್ವಿಟರ್, ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ‘ನೋ ಶೇವ್ ನವೆಂಬರ್’ ಎಂಬ ಅಭಿಯಾನ ನಡೆಸುವ ಬಗ್ಗೆ ಚಿಂತನೆ ನಡೆಯುತ್ತಿದೆ.

ಇದೇನಪ್ಪಾ!!! ನೋ ಶೇವ್ ನವೆಂಬರ್ ಎಂದು ನೀವು ಯೋಚಿಸುತ್ತಿದ್ದರೆ, ಉತ್ತರ ಇಲ್ಲಿದೆ ನೋಡಿ.. ಈ ವಿಷಯಕ್ಕೂ ಪುರುಷರ ಗಡ್ಡಕ್ಕೂ ನಂಟಿದೆ. ಪ್ರತಿವರ್ಷ ನವೆಂಬರ್‌ ತಿಂಗಳಿನಲ್ಲಿ ಪುರುಷರು ಗಡ್ಡ ಶೇವ್‌ ಮಾಡಬಾರದು ಅನ್ನೋದು ಈ ಕ್ಯಾಂಪೇನ್‌ನ ಉದ್ದೇಶವಾಗಿದೆ.

ಪುರುಷರನ್ನು ಕಾಡುವ ಅನೇಕ ಕಾಯಿಲೆಗಳು ಹಾಗೂ ಪುರುಷರ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಈ ಅಭಿಯಾನವನ್ನು ಆರಂಭಿಸಲಾಗಿದೆ. ಪುರುಷರಿಗೆ ಮಾರಕವಾಗಿರುವ ಪ್ರಾಸ್ಟೇಟ್ ಕ್ಯಾನ್ಸರ್, ವೃಷಣ ಕ್ಯಾನ್ಸರ್, ಕಳಪೆ ಮಾನಸಿಕ ಆರೋಗ್ಯ ಅಥವಾ ಖಿನ್ನತೆ ಮತ್ತು ದೈಹಿಕ ನಿಷ್ಕ್ರಿಯತೆ ಕುರಿತು ಜಾಗೃತಿ ಮೂಡಿಸಲು ನೋ ಶೇವ್‌ ನವೆಂಬರ್‌ ಅನ್ನು ಆಚರಿಸಲು ತೀರ್ಮಾನಿಸಲಾಗಿದೆ.

ಹಾಗಾಗಿ, ‘ನೋ ಶೇವ್ ನವೆಂಬರ್’ ನಲ್ಲಿ, ಪುರುಷರು 30 ದಿನಗಳವರೆಗೆ ಗಡ್ಡ ತೆಗೆಯುವುದಿಲ್ಲ. ಮುಖದ ಕೂದಲು, ಗಡ್ಡ, ಮೀಸೆ ಹೀಗೆ ಏನೇ ಇದ್ದರೂ ಅದನ್ನು ಶೇವ್‌ ಮಾಡುವುದಿಲ್ಲ. ಕ್ಯಾನ್ಸರ್ ಒಂದು ಭಯಾನಕ ಕಾಯಿಲೆ ಎಂಬುದರಲ್ಲಿ ಸಂದೇಹವಿಲ್ಲ. ಇದರಿಂದಾಗಿ ಪ್ರತಿ ವರ್ಷ ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ.

ಹಣಕಾಸಿನ ಸಮಸ್ಯೆಯಿಂದ ಎಷ್ಟೋ ಜನರಿಗೆ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕಾಗಿಯೇ ಈ ಅಭಿಯಾನವನ್ನು ಪ್ರತಿ ವರ್ಷ ನಡೆಸಲಾಗುತ್ತಿದೆ. ಪ್ರಪಂಚದಾದ್ಯಂತದ ಸೆಲೆಬ್ರಿಟಿಗಳೂ ಕೂಡ ಇದಕ್ಕೆ ಸಾಥ್ ನೀಡಿ ಬೆಂಬಲಿಸುತ್ತಿದ್ದಾರೆ.

ನೋ ಶೇವ್ ನವೆಂಬರ್ ಅಭಿಯಾನದ ಮೂಲಕ ಈ ಸಮಸ್ಯೆಗಳ ಕುರಿತು 1,000ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಈ ಅಭಿಯಾನದ ಮೂಲಕ ಕ್ಯಾನ್ಸರ್ ಸಂಶೋಧನೆಗಳಿಗೆ ಬೆಂಬಲ ನೀಡುವ ಸಣ್ಣ ಪ್ರಯತ್ನವಾಗಿದೆ. ನವೆಂಬರ್ ತಿಂಗಳ ಪೂರ್ತಿ ಕ್ಷೌರ ಮಾಡಬೇಡಿ ಎಂಬ ಸಂದೇಶವನ್ನು ಒಳಗೊಂಡಿದ್ದು, ವೃತ್ತಿಪರ ಡ್ರೆಸ್ ಕೋಡ್ ಅನ್ನು ಅನುಸರಿಸುವುದನ್ನು ಹೊರತುಪಡಿಸಿ ಕನಿಷ್ಠ ಟ್ರಿಮ್ಮಿಂಗ್‌ನೊಂದಿಗೆ, ಈ ಅಭಿಯಾನದಲ್ಲಿ ಭಾಗವಹಿಸಬಹುದಾಗಿದೆ .

ಪುರುಷರಲ್ಲಿ ಸಾಮಾನ್ಯ ಕ್ಯಾನ್ಸರ್ವೃಷಣ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ಪುರುಷರಲ್ಲಿ ಹೆಚ್ಚಾಗಿ ಕಂಡುಬರುವ ಕ್ಯಾನ್ಸರ್‌ಗಳಾಗಿವೆ. ಇದು ವಿಶೇಷವಾಗಿ ಪುರುಷರಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿಯನ್ನು ಮೂಡಿಸುವ ಉದ್ದೇಶ ಹೊಂದಿದ್ದು, ಇದರ ಜೊತೆಗೆ ಈ ಅಭಿಯಾನವು ಪುರುಷರು ತಮ್ಮ ಕೂದಲನ್ನು ಬೆಳೆಸುವಂತೆ ಪ್ರೋತ್ಸಾಹಿಸುತ್ತದೆ.

Leave A Reply

Your email address will not be published.