Online Complaint : ವಾಹನ ಕಳವಾಗಿದೆಯೇ ? ಚಿಂತೆ ಬೇಡ, ಆನ್ಲೈನ್ ಮೂಲಕ ದೂರು ಸಲ್ಲಿಸಿ!!!

ಇತ್ತೀಚಿನ ದಿನಗಳಲ್ಲಿ ವಸ್ತುಗಳ ಕಳ್ಳತನದ ಜೊತೆಗೆ ವಾಹನ ಕಳ್ಳತನ ಮಾಡಿ ಸಾಗಾಟ ಮಾಡುವ ದಂಧೆ ಕೂಡ ಎಗ್ಗಿಲ್ಲದೆ ನಡೆಯುತ್ತಿದ್ದು, ಇದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಮುಂದಾಗಿದೆ.

ನಮ್ಮ ಅಮೂಲ್ಯವಾದ ವಸ್ತುಗಳು ಕಳುವಾದಾಗ ಪೊಲೀಸರ ಮೊರೆ ಹೋಗುವುದು ಸಹಜ. ಅದೇ ರೀತಿ, ವಾಹನಗಳು ಕಳುವಾದರೆ ದೂರು ದಾಖಲಿಸಲು ಪೋಲಿಸ್ ಠಾಣೆಯ ಮೆಟ್ಟಿಲೇರಿ ಅಲೆದಾಡುವ ತಾಪತ್ರಯ ತಪ್ಪಿಸಿ, ವಾಹನ ಮಾಲೀಕನಿಗೆ ನೆರವಾಗುವ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಲಾಗಿದೆ.

ಸಾರ್ವಜನಿಕರ ವಾಹನ ಗಳು ಕಳವಾದ ಸಂದರ್ಭದಲ್ಲಿ ತುರ್ತಾಗಿ ಆನ್‌ಲೈನ್ ಮೂಲಕ ದೂರು ದಾಖಲಿಸಲು ಅವಕಾಶ ಕಲ್ಪಿಸಿರುವ ಪೊಲೀಸರು, ದೂರುಗಳಿಗೆ ಪ್ರತಿಯಾಗಿ ‘ಇ-ಎಫ್‌ಐಆರ್’ ಒದಗಿಸಿ ಶೀಘ್ರವಾಗಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ತನಿಖೆಯನ್ನು ನಡೆಸಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ರಾಜ್ಯೋತ್ಸವ ದಿನವಾದ ಮಂಗಳವಾರ ಈ ವ್ಯವಸ್ಥೆಗೆ ಚಾಲನೆ ನೀಡಲಾಗಿದ್ದು, ದ್ವಿಚಕ್ರ ವಾಹನ, ಕಾರು, ಆಟೊ, ಸರಕು ಸಾಗಣೆ ವಾಹನಗಳು ಕಳವಾದಾಗ ದೂರು ನೀಡುವ ವ್ಯವಸ್ಥೆ ಇದಾಗಿದೆ. ರಾಜಧಾನಿ ಬೆಂಗಳೂರು ಹಾಗೂ ವಿವಿಧ ಜಿಲ್ಲೆಗಳಲ್ಲಿ ವಾಹನಗಳ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವಾಹನಗಳ ಮಾಲೀಕರು ಠಾಣೆಗೆ ಅಲೆದಾಡಿ ದೂರು ದಾಖಲಿಸುತ್ತಿದ್ದಾರೆ.

ಕೆಲವೆಡೆ ಪ್ರಕರಣ ದಾಖಲಿಸುವ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಇದರಿಂದಾಗಿ ಪೊಲೀಸ್ ಇಲಾಖೆ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡಕೊಳ್ಳುವ ಸಲುವಾಗಿ ಪೊಲೀಸರು, ಆನ್‌ಲೈನ್ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ.

‘ಸಾರ್ವಜನಿಕ ಸೇವಾ ಕೇಂದ್ರ ವ್ಯವಸ್ಥೆ ಮೂಲಕ ಆನ್‌ಲೈನ್ ದೂರು ಸ್ವೀಕಾರ ಪ್ರಕ್ರಿಯೆ ನಡೆಯಲಿದೆ. ವಾಹನಗಳ ಮಾಲೀಕರು ಠಾಣೆಗಳಿಗೆ ಅಲೆಯುವುದನ್ನು ತಪ್ಪಿಸುವುದು ಈ ವ್ಯವಸ್ಥೆಯ ಗುರಿಯಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ. ಜೊತೆಗೆ ‘ಸಾರ್ವಜನಿಕರ ವಾಹನಗಳು ಕಳವಾದರೆ, ಎಫ್‌ಐಆರ್ ದಾಖಲಿಸು ವುದು ಇನ್ನು ಮುಂದೆ ಸರಳವಾಗಿದೆ.

ಜನರು ಆನ್‌ಲೈನ್ ಮೂಲಕ ದೂರು ನೀಡಿದರೆ, ಸಂಬಂಧಪಟ್ಟ ಠಾಣೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ದೂರು ದಾಖಲಿಸಲು ಕರ್ನಾಟಕ ಪೊಲೀಸ್ ಇಲಾಖೆಯ ‘https://ksp.karnataka.gov.in/’ ಜಾಲತಾಣಕ್ಕೆ ಭೇಟಿ ನೀಡಬೇಕು. ಜಾಲತಾಣದ ಎಡಬದಿಯ ಆಯ್ಕೆಯಲ್ಲಿರುವ ‘ನಾಗರಿಕ ಕೇಂದ್ರಿತ ತಾಣ’ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ, ‘ನಾಗರಿಕ ಕೇಂದ್ರಿತ ಪೋರ್ಟಲ್ ಕರ್ನಾಟಕ ರಾಜ್ಯ ಪೊಲೀಸ್’ ಪುಟ ತೆರೆದುಕೊಳ್ಳುತ್ತದೆ.

ಬಳಿಕ, ಅಲ್ಲಿಯ ಲಾಗಿನ್ ಬಟನ್ ಒತ್ತಬೇಕು.’ನ್ಯೂ ಟು ಎಸ್‌ಎಸ್‌ಒ’ ಕ್ಲಿಕ್ ಮಾಡಿ, ಆಧಾರ್ ಸಂಖ್ಯೆ ಬಳಸಿಕೊಂಡು ಹೊಸ ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ಸೃಷ್ಟಿಸಬೇಕು. ನಂತರ, ಕಳವಾದ ವಾಹನದ ವಿವರ ದಾಖಲಿಸಿ ದೂರು ಸಲ್ಲಿಸಬೇಕು.

ಇದಾದ ಬಳಿಕ, ಸಂಬಂಧಪಟ್ಟ ಠಾಣೆಗೆ ಸಂದೇಶ ರವಾನೆಯಾಗಲಿದೆ. ನಂತರವೇ, ಸಂಬಂಧಪಟ್ಟ ಠಾಣೆಗಳ ತನಿಖಾಧಿಕಾರಿ ಸಹಿ ಸಮೇತ ‘ಇ-ಎಫ್‌ಐಆರ್’ ಪ್ರತಿ ಲಭ್ಯವಾಗಲಿದೆ. ಈ ಎಫ್‌ಐಆರ್ ಪ್ರತಿಗೆ ಕಾನೂನುಬದ್ಧ ಮಾನ್ಯತೆ ಇದ್ದು, ಇದರಲ್ಲಿರುವ ಸಾರಾಂಶವನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಲಿದ್ದಾರೆ.

ಕಳವಾದ ವಾಹನಗಳು ಪತ್ತೆಯಾದರೆ ಮಾಲೀಕರಿಗೆ ಪೊಲೀಸರೇ ಮಾಹಿತಿ ನೀಡಲಿದ್ದಾರೆ. ಈ ಮೂಲಕ ವಾಹನ ಮಾಲೀಕರಿಗೆ ಅಲೆದಾಡುವುದರೊಂದಿಗೆ ಕಳುವಾದ ವಾಹನಗಳು ಶೀಘ್ರ ದೊರೆಯಲಿದೆ.

Leave A Reply

Your email address will not be published.