ತೂಗುಸೇತುವೆಯ ಮೇಲೆ ಕಾರು ಚಲಾವಣೆ | ಸ್ಥಳೀಯರ ಆಕ್ರೋಶಕ್ಕೆ ಗುರಿಯಾದ ಚಾಲಕ!!
ಗುಜರಾತ್ನ ಮೊರ್ಬಿ ದುರಂತ ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದು, ಸಾಕಷ್ಟು ಜನರ ಸಾವಿಗೆ ಕಾರಣವಾಗಿದೆ. ಈ ದುರಂತದ ಬಳಿಕವೂ ಜನರು ಎಚ್ಚೆತ್ತುಕೊಂಡಿಲ್ಲ ಎನಿಸುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ನಡುವೆ ಸೇತುವೆ ನೋಡಲು ಬಂದಂತಹ ಪ್ರವಾಸಿಗರು ಸೇತುವೆಯ ಬಳಿ ಮೈಮರೆತು ತಮಗಿಷ್ಟ ಬಂದ ಹಾಗೆ ನಡೆದುಕೊಂಡಿದ್ದಾರೆ. ತೂಗು ಸೇತುವೆಯ ಮೇಲೆ ಕಾರು ಚಲಾಯಿಸಿ ಸ್ಥಳೀಯರ ವಿರೋಧಕ್ಕೆ ಕಾರಣರಾಗಿದ್ದಾರೆ. ಇನ್ನೂ ಈ ಕಾರು ಮಹಾರಾಷ್ಟ್ರ ನೋಂದಣಿ ಹೊಂದಿರುವುದು ಎಂದು ತಿಳಿದುಬಂದಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ತೂಗುಸೇತುವೆ ಮೇಲೆ ಕಾರು ಚಲಾಯಿಸಿ ಪ್ರವಾಸಿಗರು ಹುಚ್ಚಾಟವಾಡಿದ್ದಾರೆ. ಪ್ರವಾಸಿಗರು ತಮ್ಮ ಪ್ರಾಣವನ್ನು ಕಡೆಗಣಿಸಿ ತೂಗುಸೇತುವೆಯ ಮೇಲೆ ಕಾರು ಚಲಾಯಿಸಿ ಪುಂಡಾಟ ತೋರಿದ್ದಾರೆ. ಈ ಘಟನೆ ಯಲ್ಲಾಪುರದ ಶಿವಪುರ ಗ್ರಾಮದಲ್ಲಿ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ತೂಗುಸೇತುವೆಯಲ್ಲಿ ನಡೆದಿದೆ. ಈ ಘಟನೆ ಬಗ್ಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗೂ ತೂಗು ಸೇತುವೆಯಲ್ಲಿ ತುಂಬಾ ಮುಂದೆ ಕಾರು ಚಲಾಯಿಸಿಕೊಂಡು ಹೋದ ಚಾಲಕನಿಗೆ ಬೈದು ರಿವರ್ಸ್ ಗೇರ್‌ನಲ್ಲೇ ಹಿಂದಕ್ಕೆ ಹೋಗುವಂತೆ ಹೇಳಿದ್ದಾರೆ.
ಶಿವಪುರದ ಸೇತುವೆಯು ಪ್ರಾಕೃತಿಕ ಸೌಂದರ್ಯದ ಕಾರಣ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಇನ್ನೂ ಈ ತೂಗುಸೇತುವೆಯ ಮೇಲೆ ಕಾರು ಚಲಾಯಿಸಿಕೊಂಡು ಬರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರವಾಸಿಗರ ಪುಂಡಾಟಕ್ಕೆ ಸಂಬಂಧಿಸಿದಂತೆ ಯಲ್ಲಾಪುರದ ಪೊಲೀಸರು ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.