ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ | ಜನರಲ್ಲಿ ಮೂಡಿದ ಆತಂಕ !
ಸಾರ್ವಜನಿಕರಿಗೆ ನೀಡುವ ಪಡಿತರ ಅಕ್ಕಿ ಹಾಗೂ ಶಾಲಾ ಮಕ್ಕಳಿಗೆ ಬಿಸಿಯೂಟಕ್ಕೆ ಉಪಯೋಗಿಸುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯನ್ನು ಪೂರೈಕೆ ಮಾಡಲಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಜನರು ಆತಂಕಗೊಂಡು ಅಕ್ಕಿಯನ್ನು ಬಳಸದೆ, ಅಕ್ಕಿ ಪಡೆದುಕೊಂಡು ನಂತರ ಮಾರಾಟ ಮಾಡುತ್ತಿದ್ದಾರೆ.
ಕಳೆದ ಕೆಲವು ತಿಂಗಳಿಂದ ಸಾರ್ವಜನಿಕರಿಗೆ ವಿತರಿಸುವ ಪಡಿತರ ಅಕ್ಕಿಯಲ್ಲಿ ಸ್ವಲ್ಪ ಪ್ರಮಾಣದ ಅಕ್ಕಿ ನೀರಿನಲ್ಲಿ ಬೆರೆಯದೆ ಮೇಲೆ ತೇಲುವ ಅಕ್ಕಿಯನ್ನು ಪೂರೈಕೆ ಮಾಡಲಾಗುತ್ತಿತ್ತು. ಹೀಗಾಗಿ ಸಾರ್ವಜನಿಕರು ಭಯಗೊಂಡು ಪಡಿತರ ಅಕ್ಕಿಯನ್ನು ಬಳಸದೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸರ್ಕಾರದ ಮಹತ್ವದ ಕಾರ್ಯ ಉಲ್ಲಂಘನೆಯಾಗಿದೆ. ಪ್ಲಾಸ್ಟಿಕ್ ಅಕ್ಕಿ ಎನ್ನುವ ಭ್ರಮೆಯಲ್ಲಿರುವ ಜನರಿಗೆ ಸರಿಯಾದ ವೈಜ್ಞಾನಿಕ ಮಾಹಿತಿ ನೀಡುವಲ್ಲಿ ಆಹಾರ ಇಲಾಖೆ ವಿಫಲವಾಗಿದೆ.
ಸಾರ್ವಜನಿಕ ಪಡಿತರ ಅಕ್ಕಿಯ ಜೊತೆಗೆ ಶೇ.25 ರಷ್ಟು ಪೌಷ್ಠಿಕಾಂಶವುಳ್ಳ ಅಕ್ಕಿಯನ್ನೂ ಮಿಶ್ರಣ ಮಾಡಿ ವಿತರಿಸಲಾಗುತ್ತಿತ್ತು. ಹೈದರಾಬಾದ್, ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗಗಳಲ್ಲಿ ಅಪೌಷ್ಟಿಕತೆಯ ಸಮಸ್ಯೆಯಿಂದಾಗಿ ಗರ್ಭಿಣಿಯರು ಮತ್ತು ನವಜಾತ ಶಿಶುಗಳಿಗೆ ಹೆಚ್ಚಿನ ಪ್ರಮಾಣದ ಪೌಷ್ಠಿಕಾಂಶ ತರುವ ಉದ್ದೇಶದಿಂದ, ಸರ್ಕಾರ ಪೌಷ್ಠಿಕಾಂಶವುಳ್ಳ ಅಕ್ಕಿಯನ್ನು ಪೂರೈಕೆ ಮಾಡುತ್ತಿದೆ.
ಜನರು ಇದನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಪ್ಲಾಸ್ಟಿಕ್ ಅಕ್ಕಿಯ ವಿತರಣೆಯಾಗುತ್ತಿದೆ ಎಂದು ಗಂಭೀರ ಆರೋಪ ಮಾಡುತ್ತಿದ್ದಾರೆ. ಪೌಷ್ಠಿಕಾಂಶವುಳ್ಳ ಅಕ್ಕಿ ವಿತರಣೆ ಬಗ್ಗೆ ಆಹಾರ ಇಲಾಖೆ ಜಿಲ್ಲಾಡಳಿತ, ತಾಲೂಕಾಡಳಿತ, ಹೋಬಳಿವಾರು ಸಾರ್ವಜನಿಕರಿಗೆ ಜಾಗೃತಿಯನ್ನುಂಟು ಮಾಡಿ ಸಾರ್ವಜನಿಕ ಪಡಿತರ ಅಕ್ಕಿಯನ್ನು ಮಾರಾಟ ಮಾಡದೆ ತಾವೇ ಬಳಸುವಂತೆ ಸಲಹೆ ನೀಡಬೇಕಿದೆ.
ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಲಾಗಿದೆ. ಸಾರ್ವಜನಿಕ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ ಎಂಬ ಸುಳ್ಳು ಸುದ್ದಿ ಹರಡುತ್ತಿದ್ದು, ಇದು ಸರಿಯಾದ ಮಾಹಿತಿಯಲ್ಲ.ಇದು ನಿಜವಾದುದಲ್ಲ. ಜನರು ಈ ಸುಳ್ಳು ,ಗಾಳಿ ಸುದ್ದಿಯನ್ನು ನಂಬಬಾರದು. ಅಪೌಷ್ಟಿಕತೆಯ ಕೊರತೆಯಿಂದ ಬಳಲುತ್ತಿರುವ ಜನರಿಗೆ ಪೌಷ್ಟಿಕಾಂಶ ನೀಡುವ ಒಳ್ಳೆಯ ಉದ್ದೇಶದಿಂದ ಸರ್ಕಾರ ಕಳೆದ ಕೆಲವು ತಿಂಗಳಿಂದ ಪಡಿತರ ಅಕ್ಕಿಯ ಜೊತೆಗೆ ಸ್ವಲ್ಪ ಪ್ರಮಾಣದ ಪೌಷ್ಠಿಕಾಂಶವುಳ್ಳ ಅಕ್ಕಿಯನ್ನೂ ಮಿಶ್ರಣ ಮಾಡಿ ವಿತರಣೆ ಮಾಡುತ್ತಿದೆ. ಸಾರ್ವಜನಿಕರು ತಪ್ಪು ಮಾಹಿತಿಗೆ , ಗಾಳಿ ಸುದ್ದಿಗೆ ಕಿವಿ ಕೊಡಬೇಡಿ. ಪಡಿತರ ಅಕ್ಕಿಯನ್ನು ಮಾರಾಟ ಮಾಡದೆ ಊಟಕ್ಕೆ ಬಳಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಜಿಲ್ಲಾ ಉಪನಿರ್ದೇಶಕ ಮಲ್ಲಿಕಾರ್ಜುನ ತಿಳಿಸಿದ್ದಾರೆ.