Tech Tips : ಒಂದು ಸಿಮ್ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಬಹುದು ? ಈ ಬಗ್ಗೆ TRAI ಏನೇಳುತ್ತೆ?
ಬೆಳಗೆದ್ದ ಕೂಡಲೇ ಮೊಬೈಲ್ ಎಂಬ ಮಾಯಾವಿಯ ದರ್ಶನವಾಗದೆ ಹೆಚ್ಚಿನವರಿಗೆ ದಿನ ಮುಂದೆ ಸಾಗುವುದಿಲ್ಲ. ಅರೆ ಕ್ಷಣ ಬಿಟ್ಟಿರಲಾಗದಷ್ಟು ದಿನನಿತ್ಯದ ಅವಿಭಾಜ್ಯ ಅಂಗವಾಗಿ ಮೊಬೈಲ್ ಭದ್ರ ಸ್ಥಾನ ಪಡೆದು ಬಿಟ್ಟಿದೆ.
ಅದರಲ್ಲೂ ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಕೆ ಮಾಡದೇ ಇರುವವರೇ ವಿರಳ. ಮೊಬೈಲ್ ಬಳಕೆ ಮಾಡುವಾಗ ರಿಲಯನ್ಸ್ ಜಿಯೋ, ಏರ್ಟೆಲ್,ಬಿ ಎಸ್ ಎನ್ ಎಲ್, ಹೀಗೆ ನಾನಾ ಟೆಲಿಕಾಮ್ ಕಂಪನಿಗಳ ಸೇವೆಗಳ ಮೂಲಕ ಕರೆ, ಸಂದೇಶ, ಅಂತರ್ಜಾಲ ತಾಣಗಳ ಬಳಕೆ ಮಾಡಲು ಅನುವು ಮಾಡಿಕೊಟ್ಟಿದೆ. ಇತ್ತೀಚೆಗಷ್ಟೇ 4g ಸೇವೆಯಿಂದ 5G ಸೇವೆ ನೀಡಲು ಮುಂದಾಗಿರುವುದು ಕೂಡ ತಿಳಿದಿರಬಹುದು.
ಒಂದು ನೆಟ್ವರ್ಕ್ನಿಂದ ಮತ್ತೊಂದು ನೆಟ್ವರ್ಕ್ಗೆ ಮೊಬೈಲ್ ನಂಬರ್ ಅನ್ನು ನೀವು ಪೋರ್ಟ್ ಮಾಡಬೇಕಾದರೆ ಕೆಲವೊಂದು ನಿಯಮಗಳನ್ನು ತಪ್ಪದೇ ಪಾಲಿಸಬೇಕಾಗುತ್ತದೆ.
Sim Number Portability, ಮೊಬೈಲ್ ಸಂಖ್ಯೆಯನ್ನು ಬದಲಾಯಿಸದೆ ಒಂದು ನೆಟ್ ವರ್ಕ್ನಿಂದ ಮತ್ತೊಂದು ನೆಟ್ವರ್ಕ್ಗೆ ಸೇವೆಯನ್ನು ಬದಲಾಯಿಸುವ ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ ಸೌಲಭ್ಯಾದ ಮೂಲಕ ಜನರು ತಮಗೆ ಬೇಕಾದ ಟೆಲಿಕಾಮ್ ಕಂಪನಿಗಳ ಸೇವೆಗಳ ಸದುಪಯೋಗ ಪಡಿಸಿಕೊಳ್ಳಬಹುದು.
ಅನೇಕರಿಗೆ ಒಂದು ಸಿಮ್ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಬಹುದು?, ಟ್ರಾಯ್ ನಿಯಮಗಳು ಹೇಗಿದೆ ಎಂಬ ಬಗ್ಗೆ ತಿಳಿದಿಲ್ಲ. ಇಂದಿನ ಡಿಜಿಟಲ್ ಯುಗದಲ್ಲಿ ಬಹುತೇಕ ಕೆಲಸಗಳು ಫೋನ್ ಮೂಲಕವೇ ನಡೆಯುವುದರಿಂದ ಮೊಬೈಲ್ನಲ್ಲಿ ಸಿಮ್ (Sim card), ನೆಟ್ವರ್ಕ್, ಡೇಟಾ (Mobile Data) ಬಹುಮುಖ್ಯ ಪಾತ್ರ ವಹಿಸುತ್ತದೆ.
ಕೆಲವು ಸಿಮ್ಗಳು ಕೆಲವು ಪ್ರದೇಶಗಳಲ್ಲಿ ಸಿಗದೇ ಇರುವ ಜೊತೆಗೆ ನಿಧಾನಗತಿಯ ಇಂಟರ್ನೆಟ್ ವೇಗ, ಕೆಲವೊಂದು ಪ್ರದೇಶದಲ್ಲಿ ಅಸಮರ್ಪಕ ನೆಟ್ವರ್ಕ್ ಕವರೇಜ್ ಅಥವಾ ಇತರೆ ಕಾರಣಗಳಿಗಾಗಿ ಬಳಕೆದಾರರು ಮೊಬೈಲ್ ನಂಬರ್ ಪೋರ್ಟ್ (Mobile Number Port) ಮಾಡಲು ಮುಂದಾಗುತ್ತಾರೆ.
ಒಂದು ನೆಟ್ವರ್ಕ್ನಿಂದ ಮತ್ತೊಂದು ನೆಟ್ವರ್ಕ್ಗೆ ಮೊಬೈಲ್ ನಂಬರ್ ಅನ್ನು ಪೋರ್ಟ್ ಮಾಡಬೇಕಾದರೆ ಕೆಲವೊಂದು ನಿಯಮಗಳನ್ನು ತಪ್ಪದೇ ಪಾಲಿಸಬೇಕಾದ ಅವಶ್ಯಕತೆ ಇದೆ.
ದೇಶದಲ್ಲಿ ಕಳೆದ ವರ್ಷದ ಅಂತ್ಯದಲ್ಲಿ ಹೊಸ ಎಂಎನ್ಪಿ, ಅಂದರೆ ಮೊಬೈಲ್ ನಂಬರ್ ಪೋರ್ಟೆಬಿಲಿಟಿ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಹೀಗಾಗಿ, ಗ್ರಾಹಕರು ಯಾವುದೇ ಸಮಸ್ಯೆಯಿಲ್ಲದೆ ಸುಲಭದಲ್ಲಿ ಮೊಬೈಲ್ ನಂಬರ್ ಪೋರ್ಟ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಒಂದು ಮೊಬೈಲ್ ಸಂಖ್ಯೆಯನ್ನು ಎಷ್ಟು ಬಾರಿ ಬೇಕಾದರೂ ಪೋರ್ಟ್ ಮಾಡಬಹುದಾಗಿದ್ದು, ಇದಕ್ಕೆ ಯಾವುದೇ ನಿರ್ದಿಷ್ಟ ಮಿತಿಯಿಲ್ಲ.
ಟೆಲಿಕಾಂ ವಲಯದಲ್ಲಿ ಎಮ್ಎನ್ಪಿ ಸೌಲಭ್ಯವು ಚಂದಾದಾರರಿಗೆ ಉಪಯುಕ್ತವಾಗಿದ್ದು, ಒಂದು ಆಪರೇಟರ್ನಿಂದ ಇನ್ನೊಂದು ಟೆಲಿಕಾಂ ಆಪರೇಟರ್ಗೆ ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಈ ಎಮ್ಎನ್ಪಿ ಬದಲಾವಣೆಯು ಯಶಸ್ವಿಯಾಗಲು ಸುಮಾರು ಒಂದು ವಾರ ಬೇಕಾಗಿತ್ತು. ಆದರೆ, ಟ್ರಾಯ್ನ ಹೊಸ ಎಮ್ಎನ್ಪಿ ನಿಯಮ ಜಾರಿಯಿಂದ ಈಗ ಆದಷ್ಟು ಬೇಗ ಸಿಮ್ ಫೋರ್ಟ್ ಆಗುತ್ತದೆ.
ಆದರೆ, ನಿಮ್ಮ ಮೊಬೈಲ್ ನಂಬರ್ ಪೋರ್ಟ್ ಮಾಡಬೇಕಾದರೆ, ಮೊಬೈಲ್ ನಂಬರ್ ಮತ್ತೊಂದು ನೆಟ್ವರ್ಕ್ಗೆ ಪೋರ್ಟ್ ಮಾಡಿಕೊಳ್ಳಲು ಬಯಸಿದ್ದರೆ, ಅದಕ್ಕೂ ಮುಂಚೆ ಹಳೆಯ ಕಂಪನಿಗೆ ಬಾಕಿ ಉಳಿಸಿಕೊಂಡಿರುವ ಎಲ್ಲ ಬಿಲ್ ಮೊತ್ತವನ್ನು ಪಾವತಿಸಿರಬೇಕಾಗುತ್ತದೆ.
ಪೋಸ್ಟ್ ಪೋಯ್ಡ್ ಗ್ರಾಹಕರು, ತಿಂಗಳ ಬಿಲ್ ಮೊತ್ತ ಬಾಕಿ ಉಳಿಸಿಕೊಂಡಿದ್ದರೆ, ಅದನ್ನು ಟೆಲಿಕಾಂ ಸೇವಾದಾರ ಕಂಪನಿಗೆ ಪಾಲಿಸುವುದು ಕಡ್ಡಾಯವಾಗಿದೆ. ಯಾವುದಾದರೂ ಪಾವತಿ ಮಾಡಲು ಬಾಕಿ ಉಳಿಸಿಕೊಂಡಿದ್ದರೆ, ಪೋರ್ಟಿಂಗ್ ಮಾಡಲು ಸಾಧ್ಯವಾಗುವುದಿಲ್ಲ.
ಇದರ ಜೊತೆಗೆ ಯಾವುದೇ ನೆಟ್ವರ್ಕ್ಗೆ ಪೋರ್ಟ್ ಮಾಡಬೇಕಾದರೆ ಸದ್ಯ ಇರುವ ನೆಟ್ವರ್ಕ್ನಲ್ಲಿ ಕನಿಷ್ಟ 90 ದಿನ ಪೂರೈಸಬೇಕಾಗುತ್ತದೆ. ಇದಕ್ಕಿಂತ ಮುಂಚೆ ಮತ್ತೊಂದು ನೆಟ್ವರ್ಕ್ಗೆ ಪೋರ್ಟ್ ಮಾಡಲು ಸಾಧ್ಯವಾಗುವುದಿಲ್ಲ. ಇದಲ್ಲದೇ, ಸಿಮ್ ಕಾರ್ಡ್ ಹೊಂದಿರುವ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಮಾಲಿಕತ್ವ ಹಸ್ತಾಂತರಿಸುವ ಪ್ರಕ್ರಿಯೆ ಮಾಡಿದ್ದರೆ, ಅಂತಹ ಸಂದರ್ಭದಲ್ಲಿ ಎಂಎನ್ಪಿ ಸಾಧ್ಯವಾಗುವುದಿಲ್ಲ.
ಮೊಬೈಲ್ ನಂಬರ್ ಪೋರ್ಟ್ ಮಾಡಲು ಈ ಕ್ರಮಗಳನ್ನು ಅನುಸರಿಸುವುದು ಉತ್ತಮ.
ಸಿಮ್ ಪೋರ್ಟ್ ಮಾಡಲು UPC (ಯೂನಿಕ್ ಪೋರ್ಟಿಂಗ್ ಕೋಡ್) ಅಗತ್ಯವಾಗಿದ್ದು, ಅದಕ್ಕಾಗಿ ಮೊದಲು UPC (ಯೂನಿಕ್ ಪೋರ್ಟಿಂಗ್ ಕೋಡ್) ಜನರೇಟ್ ಮಾಡಬೇಕಾಗಿದೆ. ಕ್ಯಾಪಿಟಲ್ ಅಕ್ಷರಗಳಲ್ಲಿ PORT-ಸ್ಪೇಸ್-ನಿಮ್ಮ ನೊಬೈಲ್ ಸಂಖ್ಯೆ ನಮೂದಿಸಬೇಕು.
ಬಳಿಕ , 1900 ನಂಬರ್ಗೆ ಎಸ್ಎಮ್ಎಸ್ ಮಾಡಬೇಕು. ಇದರ ನಂತರ UPC ಎಸ್ಎಮ್ಎಸ್ ಲಭ್ಯವಾಗುತ್ತದೆ. ಈ ಪ್ರಕ್ರಿಯೆಯ ಬಳಿಕ ಪೋರ್ಟ್ ಆಗ ಬಯಸುವ ಟೆಲಿಕಾಂ ಸಂಸ್ಥೆಯ ಸರ್ವೀಸ್ ಸೆಂಟರ್ಗೆ ಭೇಟಿ ನೀಡಬೇಕು. Customer Acquisition Form (CAF) ತುಂಬಬೇಕು ಮತ್ತು ಕೆವೈಸಿ ದಾಖಲಾತಿಯನ್ನೂ ನೀಡಬೇಕಾಗುತ್ತದೆ.
ಗ್ರಾಹಕರು ಮೊಬೈಲ್ ಸಿಮ್ ಪೋರ್ಟ್ ಮಾಡುವಾಗ ಮೇಲೆ ತಿಳಿಸಿದ ಅಂಶಗಳನ್ನು ಗಮನಿಸಬೇಕು.