80 ಜನರನ್ನು ಬಲಿ ಪಡೆದ ಗುಜರಾತ್ ನ ಕೇಬಲ್ ಸೇತುವೆ ದುರಂತ | ಜೋಕಾಲಿ ಜೀಕಿದ್ದೇ ಘಟನೆಗೆ ಕಾರಣ ಆಯ್ತೇ ?!
ಗುಜರಾತ್ ನಲ್ಲಿ ನಿನ್ನೆ ಸಂಭವಿಸಿದ ಭಾರೀ ದುರಂತಕ್ಕೇ ಕಾರಣಗಳನ್ನು ಹುಡುಕುವ ಕೆಲಸ ಆರಂಭವಾಗಿದೆ. ಅಲ್ಲಿನ ಮೊರ್ಬಿ ಪ್ರದೇಶದಲ್ಲಿ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕೇಬಲ್ ಸೇತುವೆ ಕುಸಿದು ಸದ್ಯ 80 ಮಂದಿ ಮೃತಪಟ್ಟಿದ್ದು ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ.
ನಿನ್ನೆ ಸಂಜೆ 6.30ರ ಸುಮಾರಿಗೆ ಈ ದುರಂತ ಸಂಭವಿಸಿದ್ದು ಈ ವೇಳೆ ಸೇತುವೆ ಮೇಲೆ ಮಕ್ಕಳು, ವೃದ್ಧರೂ ಸೇರಿದಂತೆ 400 ಕ್ಕೂ ಹೆಚ್ಚು ಜನರು ನೆರೆದಿದ್ದರು. ಸೇತುವೆ ಕುಸಿತದಿಂದಾಗಿ ಹಲವಾರು ಜನರು ನದಿಗೆ ಬಿದ್ದಿದ್ದಾರೆ. ಸದ್ಯ 250 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು ಕಾರ್ಯಾಚರಣೆ ಭರದಿಂದ ಸಾಗಿದೆ. ಪೊಲೀಸರು, ಅಗ್ನಿಶಾಮಕ ತುರ್ತು ಸೇವೆಗಳು ಮತ್ತು ಮೂರು ಎನ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿವೆ.
ಈ ಘಟನೆಗೆ ಕಾರಣ ತಿಳಿಸಬಲ್ಲ ಮೋರ್ಬಿ ಕೇಬಲ್ ಸೇತುವೆಯ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ಸೇತುವೆ ಮೇಲೆ ಜನರು ಕಿಕ್ಕಿರಿದು ತುಂಬಿರುವುದು ಕಾಣಬಹುದಾಗಿದೆ. ಇನ್ನು ಕೆಲ ಯುವಕರು ಹುಚ್ಚಾಟ ಮೆರೆದಿದ್ದಾರೆ. ಸೇತುವೆಗೆ ಅಳವಡಿಸಿದ್ದ ಕಬ್ಬಿಣದ ಸರಳುಗಳನ್ನು ಜೋರಾಗಿ ಅಲ್ಲಾಡಿಸುತ್ತಿದ್ದಾರೆ. ಕೆಲವರು ಕಾಲಿನಿಂದ ಒದೆಯುತ್ತಿರುವುದು ಮೊಬೈಲ್ ನಲ್ಲಿ ಸೆರೆಯಾಗಿದೆ. ಬಹುಶಃ ಜೋಕಾಲಿಯಂತೆ ತೂಗುಸೇತುವೆ ಯನ್ನು ಜೀಕಲು ಅವರು ಪ್ರಯತ್ನಿಸುತ್ತಿದ್ದಾರೆ ಅನ್ನಿಸುತ್ತಿದೆ. ಮೇಲ್ನೋಟಕ್ಕೆ ಜನರ ಹುಚ್ಚಾಟ ದುರಂತಕ್ಕೆ ಕಾರಣ ಎನ್ನಲಾಗಿದೆ.
Heavy traffic before crashing machhu hanging bridge many of this people try to damage this bridge. pic.twitter.com/pmfdh5QDGl
— vijay patel (@vijaypatelMorbi) October 30, 2022
ಈ ಸೇತುವೆಯ ನವೀಕರಣ ಕಾಮಗಾರಿ ಕೇವಲ ಒಂದು ವಾರದ ಹಿಂದೆ ಮುಕ್ತಾಯಗೊಂಡಿತ್ತು. ಮೂರು ದಿನಗಳ ಹಿಂದೆ ಸೇತುವೆಯನ್ನು ಮತ್ತೊಮ್ಮೆ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು. ಹೀಗಾಗಿ ನೂರಾರು ಜನರು ಸೇತುವೆಯನ್ನು ವೀಕ್ಷಿಸಲು ಬಂದಿದ್ದಾಗ ಈ ದುರುಂತ ಸಂಭವಿಸಿದೆ.
ಸೇತುವೆ ಮೇಲೆ ಮಿತಿಮೀರಿದ ಜನಸಂದಣಿ ಇತ್ತು. ಹೀಗಾಗಿ ಅದರ ಭಾರದಿಂದ ಈ ಅನಾಹುತ ಸಂಭವಿಸಿರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆ ಕುರಿತಂತೆ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಗುಜರಾತ್ ಸಿಎಂ ಭುಪೇಂದ್ರ ಸಿಂಗ್ ಆಘಾತ ವ್ಯಕ್ತಪಡಿಸಿದ್ದು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಗುಜರಾತ್ ಸರ್ಕಾರ 4 ತಜ್ಞರ ಸಮಿತಿ ರಚಿಸಿ ತನಿಖೆಗೆ ಆದೇಶಿಸಿದೆ.
ಈಗ ಬಂದ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ 140 ಕ್ಕೆ ಏರಿದೆ.