70 ವರ್ಷದ ವೃದ್ಧನ ಅದ್ಭುತ ಸಾಧನೆ | ಡಿಪ್ಲೋಮಾ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದ ವೃದ್ಧ!!!
ಓದೋದು ಅಂದ್ರೆ ಕೆಲವರಿಗೆ ಇಷ್ಟ ಇದ್ರೆ, ಅದರಲ್ಲಿ ಹಲವರಿಗೆ ಕಷ್ಟನೇ. ಒಂದು ಸಲ ಓದು ಮುಗಿಸಿ ಕೆಲಸ ಸಿಕ್ಕಿತು ಅಂದ್ರೆ ಅಲ್ಲಿಗೆ ಓದು ಮುಗಿದ ಹಾಗೆ, ಮತ್ತೆ ಕಾಲೇಜು ಮೆಟ್ಟಿಲು ಹತ್ತಲು ಸ್ವಲ್ಪ ಕಷ್ಟಾನೆ. ಇನ್ನು ವೃದ್ಧರಾದಾಗ ಓದೋದು ಅಂದ್ರೆ ಕನಸೇ ಸರಿ, ಆಗಂತೂ ಮರೆವಿನಿಂದ ಪರೀಕ್ಷೆಯಲ್ಲಿ ಯಾವೊಂದು ನೆನಪಿಗೆ ಬಾರದು. ಆದರೆ ಇಲ್ಲೊಬ್ಬರು 70 ವರ್ಷದ ವೃದ್ಧ ಇದನ್ನೆಲ್ಲ ಮೀರಿ ಡಿಪ್ಲೋಮಾ ಇಂಜಿನಿಯರಿಂಗ್ ಪರೀಕ್ಷೆಯನ್ನು ಬರೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದರೆ ಆಶ್ಚರ್ಯವೇ ಸರಿ.
ಉತ್ತರ ಕನ್ನಡ ಜಿಲ್ಲೆ ಶಿರಸಿಯ ನಾರಾಯಣ ಎಸ್. ಭಟ್ ಎಂಬುವವರು ಡಿಪ್ಲೋಮಾ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಬಹುದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಇವರ ಸಾಧನೆ ಉಳಿದವರಿಗೂ ಮಾದರಿಯಾಗಲಿದೆ. ಕಲಿಕೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ.
ಮೂಲತಃ ಶಿರಸಿ ತಾಲೂಕಿನ ಸುಗಾವಿ ಗ್ರಾಮದ ನಾರಾಯಣ ಭಟ್ 1973 ರಲ್ಲಿಯೇ ಮೆಕ್ಯಾನಿಕಲ್ ಡಿಪ್ಲೋಮಾ ಎಂಜಿನಿಯರಿಂಗ್ ಪದವಿ ಪಡೆದಿದ್ದು, ದೇಶದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದರು. 2013ರಲ್ಲಿ ನಿವೃತ್ತಿಯಾದ ಬಳಿಕ ಶಿರಸಿಗೆ ಮರಳಿದ್ದಾರೆ. ನಂತರ ಅವರಿಗೆ ಮತ್ತೆ ವ್ಯಾಸಂಗ ಮುಂದುವರಿಸಬೇಕು ಎಂಬ ಹಂಬಲ ಉಂಟಾಗಿದೆ.
ಆದರೆ ಇವರ ಪ್ರವೇಶಾತಿಗೆ ಕೆಲವು ತಾಂತ್ರಿಕ ಅಡಚಣೆ ಎದುರಾಗಿತ್ತು. ಕೊನೆಗೆ ಸತತ ಪ್ರಯತ್ನಗಳ ನಂತರ 2019 ರಲ್ಲಿ ಶಿರಸಿಯ ಆರ್ ಎನ್ ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿವಿಲ್ ಡಿಪ್ಲೋಮಾ ಎಂಜಿನಿಯರಿಂಗ್ ಗೆ ಪ್ರವೇಶ ಪಡೆದಿದ್ದರು. ಇದೀಗ ಅಂತಿಮ ವರ್ಷದ ಪರೀಕ್ಷಾ ಪಲಿತಾಂಶ ಹೊರ ಬಿದ್ದಿದೆ. ಅದರಲ್ಲಿ ಶೇಕಡಾ 94 ರಷ್ಟು ಅಂಕ ಗಳಿಸಿ ರಾಜ್ಯದಲ್ಲೇ ಹೆಚ್ಚು ಅಂಕ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಗೂ ಪ್ರಯತ್ನ, ಓದುವ ಮನಸ್ಸಿದ್ದರೆ ವಯಸ್ಸಿನ ಮಿತಿ ಬೇಕಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ