ಹಿರಿಯ ನಟಿ ವಿನಯಪ್ರಸಾದ್ ಮನೆಗೆ ನುಗ್ಗಿದ ಕಳ್ಳರು| ಚಿನ್ನ, ನಗದು ಸಹಿತ ಪರಾರಿ

ಬಹುಭಾಷಾ ಹಿರಿಯ ಕಲಾವಿದೆ, ಪ್ರಸ್ತುತ ‘ಪಾರು’ ಧಾರವಾಹಿಯಲ್ಲಿ ನಟಿಸುತ್ತಿರುವ ವಿನಯಪ್ರಸಾದ್ ಅವರ ಮನೆಯಲ್ಲಿ ಕಳ್ಳರು ಕೈ ಚಳಕ ತೋರಿಸಿದ್ದಾರೆ . ಬಾಗಿಲು ಮುರಿದು ಒಳ ನುಗ್ಗಿರುವ ಖದೀಮರು ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಎಗರಿಸಿರುವ ದುರ್ಘಟನೆ ನಂದಿನಿ ಲೇಔಟ್ ನಲ್ಲಿ ನಡೆದಿದೆ.

 

ನಟಿ ವಿನಯ ಪ್ರಸಾದ್ ಅವರು, ದೀಪಾವಳಿ ಹಬ್ಬಕ್ಕೆಂದು ಅ.22ರಂದು ತಮ್ಮ ಹುಟ್ಟೂರಾದ ಉಡುಪಿಗೆ ಕುಟುಂಬ ಸಮೇತರಾಗಿ ಹೋಗಿದ್ದರು. ಮನೆಗೆ ಬೀಗ ಹಾಕಿರುವುದನ್ನು ಗಮನಿಸಿದ ಕಳ್ಳರು, ಇದೇ ಅವಕಾಶವೆಂದು ಕೊಂಡು ದೀಪಾವಳಿ ಹಬ್ಬದ ದಿನವೇ ಬೀಗ ಮುರಿದು ಮನೆಯೊಳಗೆ ನುಗ್ಗಿದ್ದಾರೆ. ಕಳ್ಳರು 7 ಸಾವಿರ ನಗದು ಚಿನ್ನಾಭರಣ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ಹಬ್ಬ ಮುಗಿಸಿ ಅ.26ರಂದು ನಂದಿನಿ ಲೇಔಟ್‍ನಲ್ಲಿರುವ ತಮ್ಮ ವಾಸಸ್ಥಳಕ್ಕೆ ಬಂದಾಗ ಕಳ್ಳತನ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಳ್ಳರಿಗಾಗಿ ಹುಡುಕಾಟ ನಡೆಯುತ್ತಿದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೊಡ್ಡ ಮಟ್ಟದ ಪಟಾಕಿ ಹೊಡೆಯುವುದನ್ನೇ ಬಂಡವಾಳವನ್ನಾಗಿಸಿಕೊಂಡು ಮಾಲೀಕರು ಮನೆಯಲ್ಲಿ ಇಲ್ಲದೇ ಇರುವುದನ್ನು ಅರಿತು ಆ ಮನೆಯೊಳಕ್ಕೆ ನುಗ್ಗಿ ಬೆಳೆಬಾಳುವ ವಸ್ತುಗಳನ್ನೆಲ್ಲಾ ದೋಚುತ್ತಾರೆ. ದೀಪಾವಳಿ ಹಬ್ಬದ ದಿನವೇ ಉತ್ತರ ವಿಭಾಗದ ನಾಲ್ಕೈದು ಠಾಣಾ ವ್ಯಾಪ್ತಿಯಲ್ಲಿ ಇದೇ ರೀತಿಯ ಘಟನೆಗಳು ನಡೆದಿದ್ದು, ಕಳ್ಳರು, ಜೆಸಿ ನಗರ, ಮಲ್ಲೇಶ್ವರಂ, ಸುಬ್ರಹ್ಮಣ್ಯನಗರ, ರಾಜಗೋಪಾಲನಗರ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಕರಾಮತ್ತು ತೋರಿಸಿದ್ದಾರೆ.

Leave A Reply

Your email address will not be published.