ಭಗತ್ ಸಿಂಗ್ ಪಾತ್ರದ ಪ್ರಾಕ್ಟೀಸ್ ವೇಳೆ ನೇಣಿಗೀಡಾಗಿ ಬಾಲಕ ಸಾವು | ಕೋಟೆ ನಾಡಿನಲ್ಲಿ ನಡೀತು ಹೃದಯ ವಿದ್ರಾವಕ ಘಟನೆ

ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಭಗತ್ ಸಿಂಗ್ ಪಾತ್ರದ ರಿಹರ್ಸಲ್ ವೇಳೆ  ನಿಜವಾಗಿಯೂ ಬಾಲಕ ನೇಣಿಗೀಡಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಚಿತ್ರದುರ್ಗದಲ್ಲಿ ಈ ಅವಘಡ ಸಂಭವಿಸಿದ್ದು, ಸಂಜಯ್ ಗೌಡ(12) ಎಂದು ಗುರುತಿಸಲಾಗಿದೆ.

ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಮುಂತಾದ ಸಂದರ್ಭದಲ್ಲಿ ಸಣ್ಣ ಮಕ್ಕಳು ದೇಶಕ್ಕಾಗಿ ಹೋರಾಡಿದ ವೀರ ಸೇನಾನಿಗಳ, ಸಾಧಕರ ವೇಷಧರಿಸಿ ನಾಟಕ, ನೃತ್ಯ, ಭಾಷಣ ಮಾಡುವುದನ್ನು ಶಾಲೆಗಳಲ್ಲಿ ನಾವು ನೋಡಿರುತ್ತೇವೆ.

ಇದೇ ರೀತಿ ಈ ಬಾರಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಭಗತ್ ಸಿಂಗ್ ಪಾತ್ರ ನಿರ್ವಹಿಸಲು ಪ್ರಾಕ್ಟೀಸ್ ನಡೆಸುತ್ತಿದ್ದ ವೇಳೆ ಬಾಲಕ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ.

ಚಿತ್ರದುರ್ಗದ ಎಸ್‍ಎಲ್‍ವಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ ಸಂಜಯ್, ಭಗತ್ ಸಿಂಗ್ ಪಾತ್ರದಲ್ಲಿ ಅಭಿನಯಿಸಲು ಪ್ರಾಕ್ಟೀಸ್ ಸಂಜಯ್ ನಡೆಸುತ್ತಿದ್ದ. ಮನೆಗೆ ಬಂದ ಬಳಿಕವೂ ಶನಿವಾರ ರಿಹರ್ಸಲ್‍ಗೆ ಮುಂದಾಗಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನಿಗೆ ನೂಲಿನಿಂದ ಮಾಡಿದ ಹಗ್ಗ ಬಿಗಿದು ಮಂಚದ ಮೇಲೆ ನಿಂತಿದ್ದಾನೆ. ಬಳಿಕ ತನ್ನ ಮುಖಕ್ಕೆ ಸಿನಿಮಾದಲ್ಲಿ ತೋರಿಸುವಂತೆ ಉಲ್ಲನ್ ಟೋಪಿ ಹಾಕಿಕೊಂಡು ಮಂಚದಿಂದ ಜಿಗಿದಿದ್ದಾನೆ. ಇದರಿಂದ ಸ್ಥಳದಲ್ಲಿಯೇ ಸಂಜಯ್ ಸಾವನ್ನಪ್ಪಿದ್ದಾನೆ.

ನಂತರ ಮನೆಗೆ ಬಂದ ಪೋಷಕರು ಮಗ ಫ್ಯಾನಿನಲ್ಲಿ ನೇತಾಡುತ್ತಿರುವುದನ್ನು ಕಂಡು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟೋತ್ತಿಗಾಗಲೇ ಬಾಲಕನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇದೀಗ ಈ ಸಂಬಂಧ ಚಿತ್ರದುರ್ಗ ಬಡಾವಣೆ ಠಾಣೆಗೆ ಸಂಜಯ್ ಪೋಷಕರು ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.