ಕೇರಳದಲ್ಲಿ ಪತ್ತೆಯಾಯ್ತು ಹಂದಿ ಜ್ವರ | ಹೆಚ್ಚಿದ ಆತಂಕ!!!
ಜಗತ್ತು ಈಗಾಗಲೇ ರೋಗ ರುಜಿನಗಳಿಂದ ಸೋತು ಹೋಗಿದೆ. ಈಗಾಗಲೇ ಕೊರೋನ ಪರಿಣಾಮವಾಗಿ ಜನರು ಹಲವಾರು ರೀತಿಯ ತೊಂದರೆ ಮತ್ತು ನಷ್ಟಗಳನ್ನು ಅನುಭವಿಸಿ ಚೇತರಿಕೆ ಕಾಣುತ್ತಿದ್ದಾರೆ. ಆದರೆ ಆ ಬೆನ್ನ ಹಿಂದೆ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿರುವ ಅಫ್ರಿಕನ್ ಹಂದಿ ಜ್ವರ ಈಗ ಭಯ ಹೆಚ್ಚಿಸಿದೆ.
ಹೌದು ನಮ್ಮ ದೇಶದ ಕೇರಳ ರಾಜ್ಯದಲ್ಲೂ ಅಫ್ರಿಕನ್ ಹಂದಿ ಜ್ವರ ಆತಂಕ ಹೆಚ್ಚಿಸುತ್ತಿದೆ. ಕೊಟ್ಟಾಯಂ ಬಳಿಕ ತ್ರಿಶೂರ್‌ನ ಕಾಡಂಗೋಡೆಯಲ್ಲಿ 40 ಹಂದಿಗಳು ಈ ವೈರಸ್‌ಗೆ ಬಲಿಯಾಗಿವೆ. ಹೀಗಾಗಿ, 600ಕ್ಕೂ ಅಧಿಕ ಹಂದಿಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ.
ಅಫ್ರಿಕನ್ ಹಂದಿ ಜ್ವರ ಮನುಷ್ಯರಿಗೆ ಹರಡುವುದಿಲ್ಲ. ಆದರೆ, ಒಂದು ಹಂದಿಯಿಂದ ಮತ್ತೊಂದು ಹಂದಿಗೆ ಹರಡುತ್ತದೆ. ಹಂದಿಗಳ ನಡುವೆ ಪರಸ್ಪರ ದೈಹಿಕ ಸಂಪರ್ಕ ಮತ್ತು ಶರೀರದ ದ್ರವಗಳ ವಿನಿಮಯದಿಂದ ವೈರಸ್ ವ್ಯಾಪಿಸುತ್ತದೆ. ಅಲ್ಲದೇ, ಸರಿಯಾಗಿ ಬೇಯಿಸದ ಸೋಂಕಿತ ಆಹಾರವನ್ನು ಹಂದಿಗಳಿಗೆ ನೀಡುವುದರಿಂದಲೂ ಇದು ಹಬ್ಬುತ್ತದೆ.
ಇದರಿಂದಾಗಿ ಸೋಂಕಿತ ಹಂದಿಗಳು ಸಾಯಲಾರಂಭಿಸುತ್ತವೆ. ಈ ಸೋಂಕು ಮನುಷ್ಯರಿಗೆ ಹಬ್ಬುವುದಿಲ್ಲ. ಆದರೆ, ಭಾರೀ ಸಂಖ್ಯೆಯ ಹಂದಿಗಳು ಸೋಂಕಿಗೆ ಬಲಿಯಾಗುವ ಕಾರಣ, ಹಂದಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುತ್ತದೆ , ಇದು ಹಂದಿ ಸಾಕಣೆಯನ್ನೇ ಉದ್ಯಮವಾಗಿಸಿಕೊಂಡವರಿಗೆ ಭಾರೀ ಹೊಡೆತ ನೀಡುತ್ತದೆ
ಹಂದಿ ಜ್ವರ ರೋಗಲಕ್ಷಣಗಳು:
ವಿಪರೀತ ಜ್ವರ, ಹಸಿವಿಲ್ಲದಿರುವಿಕೆ, ದೌರ್ಬಲ್ಯ, ಚರ್ಮದಲ್ಲಿ ಕೆಂಪು ಮಚ್ಚೆ, ವಾಂತಿ ಭೇದಿ, ಕೆಮ್ಮು ಮತ್ತು ಉಸಿರಾಟದ ತೊಂದರೆ, ಆರಂಭದಲ್ಲಿ ಹಂದಿಗಳ ತಾಪಮಾನ 40.5ಡಿ ಸೆ.ಗೆ ತಲುಪಲಿದೆ. ನಂತರ ಅವುಗಳು ಸಪ್ಪೆಯಾಗಿ, ಆಹಾರ ಸೇವಿಸುವುದನ್ನು ಸ್ಥಗಿತಗೊಳಿಸುತ್ತವೆ.
ಹಂದಿ ಜ್ವರ ಸಲುವಾಗಿ ಕೇರಳ ಸರ್ಕಾರ ಕೈಗೊಂಡ ಕ್ರಮಗಳು:
• ಹಂದಿ ಮಾಂಸ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಲು ಅದೇಶಿಸಿದ್ದಾರೆ.
• ಸೋಂಕು ಪತ್ತೆಯಾದ ಪ್ರದೇಶದಿಂದ ಹಂದಿಗಳ ಸಾಗಣೆ ಸ್ಥಗಿತ ಮಾಡಿದ್ದಾರೆ.
• ಸೋಂಕು ಪತ್ತೆಯಾದ ಪ್ರದೇಶದಿಂದ ಹಂದಿ ಮಾಂಸ, ಮೇವು ಸಾಗಣೆ ಸ್ಥಗಿತ ಗೊಳಿಸಿದ್ದಾರೆ.
• ಇಂಥ ಪ್ರದೇಶದ ಸುತ್ತಲಿನ 10 ಕಿ.ಮೀ ಅನ್ನು ರೋಗ ನಿಗಾ ವಲಯ ಎಂದು ಘೋಷಣೆ ಮಾಡಿದೆ