ಭೀಕರ ಕಾಲ್ತುಳಿತಕ್ಕೆ ಸುಮಾರು 150 ಮಂದಿ ಸಾವು; 100ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ಭೀಕರ ಘಟನೆಯೊಂದು ಸಂಭವಿಸಿದೆ. ಹ್ಯಾಲೋವೀನ್ ಹಬ್ಬದ ದಿನದಂದು ಭೀಕರ ಕಾಲ್ತುಳಿತದಲ್ಲಿ ಸುಮಾರು 150 ಮಂದಿ ಸಾವನ್ನಪ್ಪಿದ್ದಾರೆ. ಮತ್ತು 100ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ. ಇಟಾವಾನ್ ಲೆಸ್ಸರ್ ಜಿಲ್ಲೆಯ ಕಿರಿದಾದ ರಸ್ತೆಯಲ್ಲಿ ಜನಸಂದಣಿಯಿಂದಾಗಿ ಕಾಲ್ತುಳಿತಕ್ಕೆ ಸಿಕ್ಕಿ ಈ ದುರಂತ ಸಂಭವಿಸಿದೆ.
ಹ್ಯಾಲೋವೀನ್ ಹಬ್ಬ ಆಚರಿಸಲು ಸಾಕಷ್ಟು ಜನರು ಸೇರಿದ್ದರು ಆ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ. ಪ್ರತಿವರ್ಷ ಅಕ್ಟೋಬರ್ 31 ರಂದು ಕೆಲವು ಪ್ರದೇಶಗಳಲ್ಲಿ ಹ್ಯಾಲೋವೀನ್ ಹಬ್ಬದ ಆಚರಣೆ ನಡೆಯುತ್ತದೆ. ಈ ಸಂದರ್ಭದಲ್ಲಿ ಆತ್ಮಗಳು ಮತ್ತು ದೆವ್ವಗಳಂತೆ ಜನರು ಸಿಂಗಾರಗೊಂಡು ಸತ್ತವರಿಗೆ ಸಂತರ್ಪಣೆ ಸಲ್ಲಿಸುತ್ತಾರೆ.
ಕಳೆದೆರಡು ವರ್ಷಗಳಿಂದ ಕೊರೊನಾದಿಂದಾಗಿ ದಕ್ಷಿಣ ಕೊರಿಯಾದಲ್ಲಿ ಸ್ಥಗಿತಗೊಂಡಿದ್ದ ಹ್ಯಾಲೋವೀನ್ ಹಬ್ಬವನ್ನು ಈ ವರ್ಷ ಆಚರಿಸಲು ಸರ್ಕಾರ ಅವಕಾಶ ನೀಡಿದೆ. ಹಾಗಾಗಿ ಜನ ಹಬ್ಬದ ಖರೀದಿಗಾಗಿ ಮಾರುಕಟ್ಟೆಯಲ್ಲಿ ಸೇರಿದ್ದರು. ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ಮಾರುಕಟ್ಟೆಯಲ್ಲಿದ್ದರು. ಈ ವೇಳೆ ಹಲವರಿಗೆ ಹೃದಯಾಘಾತ ಉಂಟಾಯಿತು. ಮತ್ತು 100 ಕ್ಕೂ ಹೆಚ್ಚು ಮಂದಿ ಏಕಾಏಕಿ ಉಸಿರಾಟದ ಸಮಸ್ಯೆಯಿಂದ ಕುಸಿದು ಬಿದ್ದಿದ್ದಾರೆ. ಅವರನ್ನೂ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ 150 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಂಭಿರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ಸಾರ್ವಜನಿಕ ಅಡಳಿತ ಮತ್ತು ಭದ್ರತಾ ಸಚಿವರ ನೇತೃತ್ವದಲ್ಲಿ ಎಲ್ಲಾ ಸಂಬಂಧಿತ ಸಚಿವಾಲಯಗಳು ಮತ್ತು ಏಜೆನ್ಸಿಗಳು ಸಂತ್ರಸ್ತರಿಗೆ ತ್ವರಿತವಾಗಿ ನೆರವು ನೀಡಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಹೋಲ್ ಅವರು ವಕ್ತಾರರ ಮೂಲಕ ಸೂಚನೆ ನೀಡಿದ್ದಾರೆ