ಮಂಗಳೂರು : ಬಂದೇಬಿಡ್ತು ‘ಯೋಗಿ ಮಾಡೆಲ್’ | ಕಸಾಯಿಖಾನೆ ಮುಟ್ಟುಗೋಲು!
ಉತ್ತರ ಪ್ರದೇಶದ ಯೋಗಿ ಸರ್ಕಾರದ ಆಡಳಿತದ ವೈಖರಿಯ ಮಾದರಿಯಲ್ಲೇ ಅಕ್ರಮ ದಂಧೆಕೋರರಿಗೆ ಆಸ್ತಿ ಮುಟ್ಟುಗೋಲಿನ ಶಾಕ್ ಕರ್ನಾಟಕಕ್ಕೂ ತಟ್ಟಿದೆ.
ಹಂತಕರ ವಿರುದ್ಧ ರಾಜ್ಯದಲ್ಲೇ ಮೊದಲ ಬಾರಿಗೆ ಯೋಗಿ ಮಾದರಿ ಪ್ರಯೋಗ ಮಾಡಲಾಗಿದ್ದು, ಮಂಗಳೂರಿನ ಮೂರು ಕಡೆಗಳಲ್ಲಿ ಸರ್ಕಾರ ಅಕ್ರಮ ಕಸಾಯಿಖಾನೆಗಳನ್ನು ಕಾನೂನು ಪ್ರಕಾರ ಮುಟ್ಟುಗೋಲು ಹಾಕಿಕೊಂಡಿದೆ.ಕಾಯ್ದೆ ಜಾರಿ ಬೆನ್ನಲ್ಲೇ ಪರಿಣಾಮಕಾರಿ ಅನುಷ್ಠಾನಕ್ಕೆ ಶಾಸಕ ಭರತ್ ಶೆಟ್ಟಿಯವರ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತ ಮದನ್ ಮೋಹನ್ ಆದೇಶ ಮಾಡಿದ್ದು, ಪೊಲೀಸ್ ಠಾಣೆಗಳ ವರದಿ ಪಡೆದು ವಿಚಾರಣೆ ನಡೆಸಿ ಕಾಯ್ದೆ ಪ್ರಕಾರ ಮುಟ್ಟುಗೋಲು ಹಾಕಲಾಗಿದೆ.
ಜಾಗ ಮಾರಾಟ, ಬಾಡಿಗೆ ಹಾಗೂ ಯಾವುದೇ ಚಟುವಟಿಕೆ ನಡೆಸದಂತೆ ಕಂದಾಯ ಇಲಾಖೆಯಿಂದ ಮುಟ್ಟುಗೋಲು ಹಾಕಲಾಗಿದೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮೂರು ಅಕ್ರಮ ಕಸಾಯಿಖಾನೆಗಳನ್ನು ಅಧಿಕೃತವಾಗಿ ಕಂದಾಯ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದ್ದು, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ರ ಕಲಾಂ 8 (4) ಅಡಿಯಲ್ಲಿ ಮುಟ್ಟುಗೋಲು ಹಾಕಲಾಗಿದೆ.
ಅಧಿಕೃತವಾಗಿ ಅಕ್ರಮ ಕಸಾಯಿಖಾನೆಯ ಜಾಗಗಳನ್ನು ಸರ್ಕಾರ ವಶಕ್ಕೆ ಪಡೆದಿದೆ. ಅಕ್ರಮ ಕಸಾಯಿಖಾನೆ ಜಾಗ ವಶಕ್ಕೆ ಪಡೆದು ಸರ್ಕಾರದ ಹೆಸರಲ್ಲಿ ಆರ್.ಟಿ.ಸಿ ನೋಂದಾಣಿ ಮಾಡಲಾಗಿದ್ದು, ಕಾಟಿಪಳ್ಳ, ಅರ್ಕುಳ ಮತ್ತು ಗಂಜಿ ಮಠದಲ್ಲಿ ಅಕ್ರಮ ಕಸಾಯಿಖಾನೆ ಆಸ್ತಿ ಮುಟ್ಟುಗೋಲು ಮಾಡಲಾಗಿದೆ.
ಶಾಸಕರ ಸೂಚನೆಯನ್ನೂ ಪರಿಗಣಿಸಿ, ಕಾರ್ಯ ಪ್ರವೃತ್ತರಾದ ಪೊಲೀಸರು, ಮಂಗಳೂರು ಉತ್ತರ ಕ್ಷೇತ್ರದ ಅಕ್ರಮ ಕಸಾಯಿಖಾನೆಗಳ ಮೇಲೆ ದಾಳಿ ನಡೆಸಿ ಜಾಗ ಮತ್ತು ವಸ್ತುಗಳನ್ನು ವಶಕ್ಕೆ ಪಡೆದು ಸಹಾಯಕ ಆಯುಕ್ತರಿಗೆ ವರದಿ ಸಲ್ಲಿಸಿದ್ದಾರೆ.
ವರದಿ ಪಡೆದ ಬಳಿಕ ಜಾಗದ ಮಾಲೀಕರಿಗೆ ನೋಟೀಸ್ ನೀಡಿ ಆಸ್ತಿ ಮುಟ್ಟುಗೋಲು ಹಾಕಲಾಗಿದೆ. ಗಂಜಿಮಠದ ಯೂಸೂಫ್, ಅರ್ಕುಳದ ಬಾತೀಶ್, ಕಾಟಿಪಳ್ಳದ ಹಕೀಂ ಜಾಗ ಮುಟ್ಟುಗೋಲು ಹಾಕಲಾಗಿದ್ದು, ಬಜಪೆ, ಸುರತ್ಕಲ್ ಹಾಗೂ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಅಕ್ರಮ ಕಸಾಯಿಖಾನೆಗಳು ಇದ್ದವು ಎನ್ನಲಾಗಿದೆ.
ಕಾನೂನು ಪ್ರಕಾರ ಕಾಯ್ದೆ ಜಾರಿ ಮಾಡಿ ರಾಜ್ಯದಲ್ಲೇ ಮೊದಲ ಬಾರಿಗೆ ಕ್ರಮ ಕೈಗೊಳ್ಳಲಾಗಿದೆ . ಈಗ ಗೋ ಹತ್ಯೆ ಪ್ರತಿಬಂಧಕ ಕಾಯ್ದೆಯನ್ವಯ ಕ್ರಮ ಆಗಿದ್ದು, ಕಾಯ್ದೆಯಲ್ಲಿ ಆಸ್ತಿ ಮುಟ್ಟುಗೋಲು ಹಾಕಲು ಅವಕಾಶ ಇದೆ.
ಹಾಗಾಗಿ, ಆಸ್ತಿ ಮುಟ್ಟುಗೋಲಿನ ಬಳಿಕ ಗೋ ಹತ್ಯೆ ಕ್ರೈಂ ರೇಟ್ ಇಳಿದಿದ್ದು, ತಮ್ಮ ಕ್ಷೇತ್ರದಲ್ಲಿ ಗೋ ಸಾಗಾಟ, ಗೋ ಹತ್ಯೆ ಸಂಪೂರ್ಣ ಬಂದ್ ಆಗಿದೆ ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ತಿಳಿಸಿದ್ದಾರೆ.