ಅಮಾನತ್ತಾಗಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ನಂದೀಶ್ ಹೃದಯಾಘಾತದಿಂದ ಸಾವು
ಬೆಂಗಳೂರು : ಅಮಾನತುಗೊಂಡಿದ್ದ ಸರ್ಕಲ್ ಇನ್ಸ್‌ಪೆಕ್ಟರ್ ನಂದೀಶ್ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕೆ.ಆರ್.ಪುರಂನ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರಿಲೆಳೆದಿದ್ದಾರೆ.
ನಂದೀಶ್ ಮೂಲತಃ ಮೈಸೂರಿನ ಹುಣಸೂರು ಮೂಲದವರು. ಇತ್ತೀಚೆಗೆ ಪಬ್ ವೊಂದು ಅವಧಿ ಮೀರಿ ನಡೆಸಲು ಸಹಕಾರ ನೀಡುತ್ತಿದ್ದರೆಂಬ ಆರೋಪದ ಮೇಲೆ ಅಮಾನತುಗೊಂಡಿದ್ದರು. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 2019ರಿಂದ 2020ರವರೆಗೆ ಕಾರ್ಯ ನಿರ್ವಹಿಸಿದ್ದರು.
ಅದಾದ ನಂತರ ಆನೇಕಲ್‌ನಲ್ಲಿ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾಗ ಅವಧಿ ಮೀರಿ ಪಬ್ ನಡೆಸಲು ಅವಕಾಶ ನೀಡಿದ ಆರೋಪದ ಮೇಲೆ ಸಸ್ಪೆಂಡ್ ಆಗಿದ್ದರು.
ಗುರುವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಎದೆ ನೋವು ಕಂಡುಬಂದಿದೆ. ನಂತರ ಕೆಆರ್ ಪುರಂನ ಲಕ್ಷ್ಮೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ಹೃದಯಾಘಾತದಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಅವಧಿ ಸಮಯ ಮೀರಿ ತಡರಾತ್ರಿಯವರೆಗೂ ತೆರೆದಿದ್ದ ಬಾರ್ ಆ್ಯಂಡ್ ರೆಸ್ಟೋರೆಂಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೇ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆ.ಆರ್. ಪುರ ಇನ್‌ಸ್ಪೆಕ್ಟರ್ ಎಚ್.ಎಲ್. ನಂದೀಶ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಟಾನಿಕ್ ಬಾರ್ ತಡರಾತ್ರಿ 2 ಗಂಟೆಯವರೆಗೂ ತೆರೆದಿತ್ತು. ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಸಿಸಿಬಿ ಪೊಲೀಸರು, ದಾಳಿ ಮಾಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದರು.
‘ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ರಾತ್ರಿ 1 ಗಂಟೆಯವರೆಗೆ ವಹಿವಾಟು ನಡೆಸಲು ಅವಕಾಶವಿದೆ. ಆದರೆ, ಟಾನಿಕ್ ಬಾರ್ ಆ್ಯಂಡ್ ರೆಸ್ಟೋರೆಂಟ್ ನಿತ್ಯವೂ ತಡರಾತ್ರಿಯವರೆಗೂ ವಹಿವಾಟು ನಡೆಸುತ್ತಿತ್ತು. ಇದು ಗೊತ್ತಿದ್ದರೂ ನಂದೀಶ್ ಕ್ರಮ ಕೈಗೊಂಡಿರಲಿಲ್ಲ’ ಎಂಬುದಾಗಿ ಸಿಸಿಬಿ ಪೊಲೀಸರು, ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದರು.