ಕೇವಲ ಒಂದು ಗುಲಾಬ್ ಜಾಮೂನಿಗಾಗಿ ಮದುವೆ ಮನೆಯಲ್ಲಿ ರಕ್ತಪಾತ । ಚಾಕು ಇರಿತಕ್ಕೆ ಒಳಗಾದ ಯುವಕ ಸಾವು !
ಮದುವೆ ಮನೆಯಲ್ಲಿ ಮಟನ್ ಊಟಕ್ಕಾಗಿ, ಚಿಕನ್ ಪೀಸಿಗಾಗಿ ಮಾರಾಮಾರಿ ನಡೆದು ರಕ್ತಪಾತ ಆದದ್ದನ್ನು ಕೇಳಿದ್ದೇವೆ. ಆದರೆ ಇಲ್ಲಿ ಗುಲಾಬ್ ಜಾಮೂನಿಗಾಗಿ ಕೊಲೆ ನಡೆದು ಹೋಗಿದೆ. ವಿವಾಹ ಸಮಾರಂಭವೊಂದರಲ್ಲಿ ‘ ಗುಲಾಬ್ ಜಾಮೂನ್ ’ ಕೊರತೆಯಿಂದಾಗಿ ನಡೆದ ಘರ್ಷಣೆಯಲ್ಲಿ 22 ವರ್ಷದ ಯುವಕ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.
ಆಗ್ರಾದ ಎತ್ಮಾದ್ಪುರದಲ್ಲಿ ನಡೆದ ಮೊಹಲ್ಲಾ ಶೇಖಾನ್ ನಿವಾಸಿಯಾದ ಉಸ್ಮಾನ್ ಅವರ ಪುತ್ರಿಯರ ವಿವಾಹ ಸಮಾರಂಭದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮದುವೆಗೆ ಸರ್ವ್ ಮಾಡಲು ತಯಾರು ಮಾಡಿದ್ದ ಗುಲಾಬ್ ಜಾಮೂನ್ ಕೊರತೆಯಿಂದಾಗಿ ವಧು ಮತ್ತು ವರನ ಕಡೆಯವರ ನಡುವೆ ವಾಗ್ವಾದ ನಡೆದಿದೆ. “ಸಿಹಿ ಕೊರತೆಯ ಬಗ್ಗೆ ವಾದವು ಗಂಭೀರ ಜಗಳಕ್ಕೆ ತಿರುಗಿತು ಮತ್ತು ಒಬ್ಬ ವ್ಯಕ್ತಿ ಹಾಜರಿದ್ದವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ” ಎಂದು ಎತ್ಮಾದ್ಪುರ ಸರ್ಕಲ್ ಆಫೀಸರ್ ರವಿಕುಮಾರ್ ಗುಪ್ತಾ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಸನ್ನಿ (22) ಎಂಬವರನ್ನು ಮೊದಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಯಿತು. ಮತ್ತು ನಂತರ ಆಗ್ರಾದ ಸರೋಜಿನಿ ನಾಯ್ಡು ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯಿತು. ಆದರೆ ಅಷ್ಟರಲ್ಲಿ ಅವರು ಸಾವನ್ನಪ್ಪಿದರು. ಜಗಳದಲ್ಲಿ ಗಾಯಗೊಂಡ ಐವರನ್ನು ಎತ್ಮಾದ್ಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ಕುಟುಂಬದವರು ದೂರು ದಾಖಲಿಸಿದ್ದಾರೆ. ಆದರೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಸಂತ್ರಸ್ತೆಯ ಕುಟುಂಬದವರ ದೂರಿನ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗುಪ್ತಾ ತಿಳಿಸಿದ್ದಾರೆ.