Good News : ಕಿರಿಯ ಪ್ರಾಥಮಿಕ ಶಾಲೆ ಪದವೀಧರ ಶಿಕ್ಷಕರಿಗೆ ದೀಪಾವಳಿಯಂದೇ ದೊರಕಿದೆ ಭರ್ಜರಿ ಗುಡ್ ನ್ಯೂಸ್!!!
ದೀಪಾವಳಿ ಸಂದರ್ಭದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿನ ಪದವೀಧರ ಶಿಕ್ಷಕರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೆಯೇ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಬಡ್ತಿ ನೀಡಲು ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಕಾನೂನು ಇಲಾಖೆ ಬಳಿಕ ಈಗ ಆರ್ಥಿಕ ಇಲಾಖೆಯೂ ಒಪ್ಪಿಗೆ ನೀಡಿದೆ.
ಇದರಿಂದಾಗಿ ಇದೀಗ ಶಿಕ್ಷಣ ಇಲಾಖೆ ನೇಮಕಾತಿ
ನಿಯಮಾವಳಿಗಳಿಗೆ ತಿದ್ದುಪಡಿ ತಂದು ಬಡ್ತಿ ನೀಡುವ ಪ್ರಕ್ರಿಯೆಯನ್ನು ಆರಂಭಿಸಬೇಕಾಗಿದ್ದು, ಇದಕ್ಕೆ ಸದ್ಯದಲ್ಲೇ ಚಾಲನೆ ಸಿಗುವ ನಿರೀಕ್ಷೆ ಇದೆ. ಈ ಮೊದಲು ಶೇಕಡ 33 ರಷ್ಟು ಹುದ್ದೆಗಳನ್ನು ಬಡ್ತಿ ಮೂಲಕ ಹಾಗೂ ಶೇಕಡಾ 67 ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿತ್ತು. ಇದೀಗ ಬಡ್ತಿ ಮೂಲಕ ನೇಮಕಾತಿ ಮಾಡಿಕೊಳ್ಳುವ ಪ್ರಮಾಣವನ್ನು ಶೇಕಡ 40ಕ್ಕೆ ಏರಿಸಲಾಗಿದೆ.
ಇದರಿಂದಾಗಿ ಹಾಲಿ ಇರುವ 57,000ಕ್ಕೂ ಹೆಚ್ಚು ಪದವೀಧರ ಶಿಕ್ಷಕರ ಹುದ್ದೆಗಳ ಪೈಕಿ 20,000ಕ್ಕೂ ಅಧಿಕ ಹುದ್ದೆಗಳು ಹಾಲಿ ಸೇವೆಯಲ್ಲಿ ಇರುವ ಪದವೀಧರ ಶಿಕ್ಷಕರಿಗೆ ದೊರೆಯಲಿದೆ. ಈ ಕುರಿತಂತೆ ಮಾತನಾಡಿರುವ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಿ ಶಿಕ್ಷಣ ಇಲಾಖೆಯ ಈ ನಿರ್ಧಾರ ಸಂತಸ ತಂದಿದೆ. ಆದಷ್ಟು ಬೇಗ ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ತಂದು ಬಡ್ತಿ ಪ್ರಕ್ರಿಯೆ ನಡೆಸಬೇಕು ಎಂದು ಹೇಳಿದ್ದಾರೆ.