ನನ್ನನ್ನೂ ಭಾರತದ ರಾಷ್ಟ್ರಪತಿ ಮಾಡಿ ಎಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ ವ್ಯಕ್ತಿ| ಚಾಟಿ ಏಟು ಬೀಸಿದ ಕೋರ್ಟ್!!!
ಕೆಲವರು ಸಾಮಾನ್ಯ ಅರ್ಜಿ ಬರೀಬೇಕು ಅಂದ್ರೆನೇ ಹಿಂದೆ-ಮುಂದೆ ನೋಡುತ್ತಾರೆ. ಅಂತದ್ರಲ್ಲಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಬರೀಯೋದು ಅಂದ್ರೆ ತಮಾಷೆ ವಿಷಯವೇನಲ್ಲ. ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿ ಈ ಸ್ಥಾನಗಳೆಲ್ಲಾ ತುಂಬಾ ಜವಾಬ್ದಾರಿಯುತ ಹಾಗೂ ಮಹತ್ವದ ಸ್ಥಾನವಾಗಿದ್ದು, ನನಗೆ ಅ ಸ್ಥಾನ ಬೇಕು ಎಂದು ಹೇಳಿ ಯಾರು ಬೇಕಾದರೆ ಅವರು ಈ ಸ್ಥಾನಕ್ಕೆ ಏರಲು ಸಾಧ್ಯವಿಲ್ಲ ಅಲ್ಲವೇ. ಆದರೆ ಇಲ್ಲೊಬ್ಬ ಯೋಚನೆಗಳಳ್ಳೇ ಒಂದು ಹೆಜ್ಜೆ ಮುಂದೆ ಯೋಚಿಸಿದ್ದಾನೆ. ಅದು ಸಣ್ಣ ಯೋಚನೆಯಲ್ಲ ರಾಷ್ಟ್ರಪತಿಯಾಗಬೇಕೆಂಬ ಬಯಕೆಯನ್ನು ಮುಂದಿಟ್ಟಿದ್ದಾನೆ. ತಾನೇಕೆ ರಾಷ್ಟ್ರಪತಿ ಆಗಬಾರದು, ನನ್ನನ್ನು ರಾಷ್ಟ್ರಪತಿ ಮಾಡಿ ಎಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ!
ದೇಶದ ಮಹತ್ವದ ಸ್ಥಾನಗಳಲ್ಲಿ ಒಂದಾದ ರಾಷ್ಟ್ರಪತಿ ಹುದ್ದೆಗೆ ತನ್ನನ್ನು ಕೂಡ ನೇಮಕ ಮಾಡುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. “ಅವರ ಮನವಿಯನ್ನು ಪರಿಗಣಿಸಬೇಡಿ” ಎಂದು ನೋಂದಾವಣೆ ಕೇಳುತ್ತಾ, ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಅರ್ಜಿಯು “ಕ್ಷುಲ್ಲಕ” ಮತ್ತು “ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗ” ಎಂದು ಚಾಟಿ ಬೀಸಿದೆ.
ಕಳೆದ ಸುಮಾರು 20 ವರ್ಷಗಳಿಂದ ಪರಿಸರವಾದಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಳ್ಳುವ ಕಿಶೋರ್ ಜಗನ್ನಾಥ್ ಸಾವಂತ್ ಎಂಬಾತ ಸುಪ್ರೀಂ ಕೋರ್ಟ್‌ಗೆ ಈ ರೀತಿಯ ವಿಚಿತ್ರ ಅರ್ಜಿ ಸಲ್ಲಿಸಿದ್ದಾರೆ. ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಅವಕಾಶ ನೀಡಲಿಲ್ಲ ಎಂದು ಕೂಡ ದೂರಿದ್ದಾರೆ. ಕಿಶೋರ್ ಜಗನ್ನಾಥ್ ಸಾವಂತ್ ಅವರು ಸರ್ವೋಚ್ಚ ನ್ಯಾಯಾಲಯದ ಮುಂದೆ ಹಾಜರಾಗಿ ಸರ್ಕಾರದ ನೀತಿಗಳನ್ನು ಪ್ರತಿಭಟಿಸುವ ಎಲ್ಲಾ ಹಕ್ಕುಗಳನ್ನೂ ನಾನು ಹೊಂದಿದ್ದೇನೆ ಎಂದು ಹೇಳಿದ್ದಾರೆ.
ಅರ್ಜಿದಾರನ ಅರ್ಜಿಯಲ್ಲಿ ಮೂರು ಅಂಶಗಳು ಒಳಗೊಂಡಿತ್ತು. ಮೊದಲನೆಯದಾಗಿ: ಕಿಶೋರ್ ಜಗನ್ನಾಥ್ ಸಾವಂತ್ ಅವರನ್ನು 2022 ರ ಅಧ್ಯಕ್ಷೀಯ ಚುನಾವಣೆಗೆ ಅವಿರೋಧ ಅಭ್ಯರ್ಥಿಯಾಗಿ ಪರಿಗಣಿಸಲು ನಿರ್ದೇಶನ ನೀಡಬೇಕು.ಎರಡನೆಯದಾಗಿ: ಭಾರತದ ರಾಷ್ಟ್ರಪತಿಯಾಗಿ ಅವರನ್ನು ನೇಮಕ ಮಾಡಲು ನಿರ್ದೇಶನ .ಮೂರನೆಯದಾಗಿ: 2004 ರಿಂದ ಹಿಂದಿನ ರಾಷ್ಟ್ರಪತಿಗಳಿಗೆ ಪಾವತಿಸಿದ ವೇತನವನ್ನು ಪಾವತಿಸಲು ನಿರ್ದೇಶನ ನೀಡಬೇಕು ಅಂತ ಮನವಿ ಮಾಡಲಾಗಿತ್ತು. ಇನ್ನು ಶ್ರೀಲಂಕಾದಲ್ಲಿ ಮಾಜಿ ಅಧ್ಯಕ್ಷರು ಜನರ ಪ್ರತಿಭಟನೆಗೆ ಮಣಿಯಬೇಕಾದ ಪರಿಸ್ಥಿತಿಯನ್ನು ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜಸ್ಟೀಸ್ ಚಂದ್ರಚೂಡ್ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠದ ಮುಂದೆ ಈ ಅರ್ಜಿ ವಿಚಾರಣೆಗೆ ಬಂದಿತ್ತು. ಅರ್ಜಿಯನ್ನ ಗಮನಿಸಿದ ನ್ಯಾಯಪೀಠ, ಕೆಂಡಾಮಂಡಲವಾಗಿದೆ. ಈ ಅರ್ಜಿಯನ್ನ ವಜಾ ಮಾಡಿದ್ದಷ್ಟೇ ಅಲ್ಲ, ಅರ್ಜಿ ಸ್ವೀಕರಿಸಿದ ರಿಜಿಸ್ಟ್ರಾರ್, ಅರ್ಜಿ ಸಲ್ಲಿಸಿದ್ದ ವ್ಯಕ್ತಿ ಸೇರಿದಂತೆ ಹಲವರಿಗೆ ಏಕಕಾಲಕ್ಕೆ ಚಾಟಿ ಬೀಸಿದೆ.
ಅಷ್ಟೇ ಅಲ್ಲದೆ ಈ ರೀತಿಯ ಕ್ಷುಲ್ಲಕ ಅರ್ಜಿಗಳನ್ನು ಏಕೆ ವಿಚಾರಣೆಗೆ ಸ್ವೀಕರಿಸುತ್ತೀರಿ ಎಂದು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೆ ಚಾಟಿ ಬೀಸಿದ ನ್ಯಾಯಮೂರ್ತಿಗಳು, ಮುಂದೆ ಈ ರೀತಿಯ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಬಾರದು ಎಂದು ತಾಕೀತು ಮಾಡಿದೆ. ಅಷ್ಟೇ ಅಲ್ಲ ಈ ಪ್ರಸಂಗವನ್ನು ನ್ಯಾಯಾಂಗದ ಹಾಗೂ ನ್ಯಾಯಾಲಯ ಕಾರ್ಯ ಕಲಾಪಗಳ ದುರ್ಬಳಕೆ ಎಂದು ಪೀಠ ಹರಿಹಾಯ್ದಿದೆ. ಅರ್ಜಿದಾರನ ವಿರುದ್ಧ ಕಟು ಶಬ್ಧಗಳನ್ನು ಪ್ರಯೋಗ ಮಾಡಿರುವ ಸುಪ್ರೀಂ ಕೋರ್ಟ್ ನ್ಯಾಯಪೀಠ, ಈ ರೀತಿಯ ಅರ್ಜಿ ಸಲ್ಲಿಸೋದು ಕೀಳು ಮಟ್ಟದ ಹಾಸ್ಯಾಸ್ಪದ ವರ್ತನೆ ಎಂದು ಕಿಡಿ ಕಾರಿದೆ. ನಿಜವಾಗಿಯೂ ಇದೊಂದು ಹುಚ್ಚು ಸಾಹಸವೇ ಸರಿ, ಆತನ ಸಮಯ ವ್ಯರ್ಥವಾಗಿದ್ದಲ್ಲದೆ ನ್ಯಾಯಾಂಗದ ಸಮಯವನ್ನು ಹಾಳುಮಾಡಿದ್ದಾನೆ.