5ಜಿ ಆಧಾರಿತ ಸಾರ್ವಜನಿಕ ವೈಫೈ ಸೇವೆಯನ್ನು ಆರಂಭಿಸಿದ ರಿಲಯನ್ಸ್ ಜಿಯೋ!

ರಿಲಯನ್ಸ್ ಜಿಯೋ ಹೊಸ-ಹೊಸ ಯೋಜನೆಗಳನ್ನು ರೂಪಿಸುವುದರ ಮೂಲಕ ಗ್ರಾಹಕರನ್ನು ಹೆಚ್ಚಿಸುತ್ತಲೇ ಇದೆ. ಇದೀಗ ಪ್ರತಿಯೊಬ್ಬ ನಾಗರಿಕನಿಗೂ 5ಜಿ ಸೇವೆಯನ್ನು ಪಡೆಯಬೇಕು ಎನ್ನುವ ಉದ್ದೇಶದಿಂದ 5ಜಿ ಆಧಾರಿತ ಸಾರ್ವಜನಿಕ ವೈಫೈ ಸೇವೆಯನ್ನು ರಿಲಯನ್ಸ್ ಜಿಯೋ ಆರಂಭಿಸಿದೆ.

 

ರೈಲು ನಿಲ್ದಾಣ, ಧಾರ್ಮಿಕ ಸ್ಥಳಗಳು, ಬಸ್ಸು ನಿಲ್ದಾಣ, ವಾಣಿಜ್ಯ ಹಬ್​ಗಳು ಹಾಗೂ ಇತರ ಪ್ರದೇಶಗಳಲ್ಲಿ ಟ್ರೂ5ಜಿ ವೈಫೈ ಸೇವೆಯನ್ನು ಜಿಯೋ ಪರಿಚಯಿಸುತ್ತಿದೆ. ಈ ಆಫರ್ ಮೂಲಕ ಗ್ರಾಹಕರು ಬೆಟಾ ಟ್ರಯಲ್ ಸಂದರ್ಭದಲ್ಲಿ 5ಜಿ ಸೇವೆ ಪಡೆಯಬಹುದಾಗಿದ್ದು, ಸೆಕಂಡ್​ಗೆ 1 ಗಿಗಾಬೈಟ್ ವೇಗದಲ್ಲಿ ಇಂಟರ್​ನೆಟ್ ಸಿಗಲಿದೆ. ರಾಜಸ್ಥಾನದ ದೇಗುಲ ನಗರಿ ನಾಥ್​ದ್ವಾರಾದಲ್ಲಿ ಸಾರ್ವಜನಿಕ ವೈಫೈ ಸೇವೆ ಆರಂಭಿಸಲಾಗಿದ್ದು, ಮುಂಬರುವ ದಿನಗಳಲ್ಲಿ ರೈಲು ನಿಲ್ದಾಣ, ಶೈಕ್ಷಣಿಕ ಸಂಸ್ಥೆಗಳು ಮತ್ತಿತರ ಕಡೆಗಳಲ್ಲಿ ಸೇವೆ ಲಭ್ಯವಾಗಲಿದೆ ಎಂದು ಕಂಪನಿ ಶನಿವಾರ ತಿಳಿಸಿದೆ.

‘ಶ್ರೀನಾಥ್ ದೇಗುಲ ನಗರವಾದ ನಾಥ್​ದ್ವಾರದಲ್ಲಿ ನಾವಿಂದು 5ಜಿ ಆಧಾರಿತ ವೈಫೈ ಸೇವೆ ಆರಂಭಿಸಿದ್ದೇವೆ. ಇದರೊಂದಿಗೆ, ಇನ್ನೂ ಅನೇಕ ಪ್ರದೇಶಗಳಿಗೆ ನಮ್ಮ ಸೇವೆಯನ್ನು ವಿಸ್ತರಿಸಲಿದ್ದೇವೆ. ಚೆನ್ನೈ ನಗರದಲ್ಲಿ ಕೂಡ ಜಿಯೋ ಟ್ರೂ5ಜಿ ವೆಲ್​ಕಮ್ ಆಫರ್ ನೀಡಲಾಗಿದೆ. ಜಿಯೋ 5ಜಿ ಕೆಲವೊಬ್ಬರಿಗೆ ಮಾತ್ರ ಅಥವಾ ದೊಡ್ಡ ನಗರಗಳ ಜನರಿಗೆ ಮಾತ್ರ ಸಿಗುವ ಸೇವೆಯಾಗಿ ಪರಿಣಮಿಸಬಾರದು. ಅದು ಪ್ರತಿಯೊಬ್ಬ ನಾಗರಿಕನಿಗೂ, ಪ್ರತಿ ಮನೆಗೂ ಹಾಗೂ ದೇಶದಾದ್ಯಂತ ಎಲ್ಲ ಉದ್ಯಮಗಳಿಗೂ ದೊರೆಯುಂತಾಗಬೇಕು’ ಎಂದು ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಎಂ ಅಂಬಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇಶದಲ್ಲಿ 5ಜಿ ಸೇವೆ ಒದಗಿಸಲು ರಿಲಯನ್ಸ್ ಜಿಯೋ ಹಾಗೂ ಎರಿಕ್ಸನ್ ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿದ್ದವು.  ಎಲ್​ಟಿಇ ಸೇವೆ ಆರಂಭಿಸುವ ಮೂಲಕ 2016ರಲ್ಲಿ ಭಾರತದಲ್ಲಿ ಜಿಯೊ ಡಿಜಿಟಲ್​ ಕ್ರಾಂತಿಗೆ ಹೊಸ ಆಯಾಮ ನೀಡಿತ್ತು. 5ಜಿ ಸೇವೆಯು ಭಾರತದ ಡಿಜಿಟಲೀಕರಣ ಪ್ರಕ್ರಿಯೆಗೆ ಮತ್ತಷ್ಟು ವೇಗ ನೀಡಲಿದೆ. ಡಿಜಿಟಲ್ ಇಂಡಿಯಾ ದೃಷ್ಟಿಕೋನಕ್ಕೆ ಪೂರಕವಾಗಲಿದೆ ಎಂಬ ಭರವಸೆ ನಮಗಿದೆ ಎಂದು ಆಕಾಶ್ ಅಂಬಾನಿ ಹೇಳಿದ್ದರು.

Leave A Reply

Your email address will not be published.