ರಕ್ಕಸನ ಚಿತ್ರ ಅಂದುಕೊಂಡ್ರ? ಅಬ್ಬಾ ಇದು ಇರುವೆಯ ಮುಖದ ಫೋಟೋ!
ಇರುವೆ ಎಲ್ಲರಿಗೂ ಚಿರಪರಿಚಿತ. ಇರುವೆಯ ಗಾತ್ರ ಚಿಕ್ಕದಾದರೂ ಇಡೀ ಗುಂಪೇ ಹರಡಿರುತ್ತದೆ. ರೈಲಿನಂತೆ ಸಾಲುಗಟ್ಟಿ ಹೋಗುವ ಇರುವೆಗಳನ್ನು ನೋಡುವುದೇ ಸಂಭ್ರಮ. ಇವುಗಳ ಶಿಸ್ತುಬದ್ಧ ಸಹಜೀವನ ಮನುಕುಲವನ್ನೇ ನಾಚಿಸುವಂತಿದೆ. ಗುಂಪಾಗಿ ಜೀವಿಸುವ ಇರುವೆಗಳ ಬದುಕಿನ ಶೈಲಿಯ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೇ ಇದೆ.
ಆದ್ರೆ, ಈ ಇರುವೆ ಸಾಮಾನ್ಯವಾದುದು ಅಲ್ಲವೇ ಅಲ್ಲ. ಇದು ರಕ್ಕಸನಿಗಿಂತ ಕಿಂಚಿತ್ತೂ ಕಮ್ಮಿ ಇಲ್ಲ. ಹೌದು. ಇರುವೆಯ ಮುಖದ ಚಿತ್ರವನ್ನು ಅತ್ಯಂತ ಸೂಕ್ಮ್ಷವಾಗಿ ತೆಗೆಯಲಾಗಿದ್ದು, ನೋಡಿದವರಿಗೆ ಅಂತೂ ಅಬ್ಬಾ ಇದು ಇರುವೇನಾ? ಎಂದು ಭಯ ಹುಟ್ಟಿಸುವಂತೆ ಇದೆ. ಛಾಯಾಗ್ರಾಹಕರೊಬ್ಬರು ಇರುವೆಗಳ ಫೋಟೋವನ್ನು ಹತ್ತಿರದಿಂದ ತೆಗೆದಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಲ್ಲದೆ, ಆ ಇರುವೆಯ ಫೋಟೋ ಕ್ಲಿಕ್ಕಿಸಿ ಫೋಟೋಗ್ರಾಫರ್ ಅವಾರ್ಡ್ ಬೇರೆ ಮುಡಿಗೇರಿಸಿಕೊಂಡಿದ್ದಾರೆ.
ಲಿಥೋವೇನಿಯನ್ ಮೂಲದ ಛಾಯಾಗ್ರಾಹಕ ಯುಜೆನಿಜಸ್ ಈ ಚಿತ್ರವನ್ನು 2021 ರಲ್ಲಿ ಕ್ಲಿಕ್ ಮಾಡಿದ್ದು, 2022ರ ನಿಕಾನ್ ಸ್ಮಾಲ್ ವರ್ಲ್ಡ್ ಫೋಟೋ ಮೈಕ್ರೋಗ್ರಫಿ ಸ್ಪರ್ಧೆಗೆ ಕಳುಹಿಸಿ ಕೊಟ್ಟಿದ್ದರು. ಇದೀಗ ಈ ಚಿತ್ರದ ಛಾಯಾಗ್ರಾಹಕ ವಿಜೇತರಾಗಿ ಆಯ್ಕೆಯಾಗಿದ್ದು, ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಛಾಯಾಚಿತ್ರದಲ್ಲಿ ಇರುವೆಯ ಮುಖದಲ್ಲಿನ ಕಣ್ಣುಗಳು ನೇರಳೆ ಬಣ್ಣದಲ್ಲಿದೆ, ಚಿನ್ನದ ಬಣ್ಣದ ಹಲ್ಲುಗಳನ್ನು ಇದು ಹೊಂದಿರುವಂತೆ ಕಂಡಿದೆ. ಒಟ್ಟಾರೆ ಇರುವೆಯ ಮುಖ ಹಾರರ್ ಚಿತ್ರದಲ್ಲಿ ಪಾತ್ರದಂತೆ ಕಾಣುತ್ತಿದೆ
ಇರುವೆಯ ಮುಖದ ಚಿತ್ರವನ್ನು ಅತ್ಯಂತ ಸೂಕ್ಮ್ಷವಾಗಿ ತೆಗೆಯಲಾಗಿದ್ದು, ಅದಕ್ಕೆ ದೈತ್ಯ ಚಿತ್ರದ ಆಯಾಮ ನೀಡಲಾಗಿದೆ. ಈ ಚಿತ್ರ 2022ರ ನಿಕಾನ್ ಫೋಟೊಮೈಕ್ರೋಗ್ರಫಿ ಸ್ಪರ್ಧೆಗೆ ಸಲ್ಲಿಸಲಾದ ಅನೇಕ ಗಮನಾರ್ಹ ಚಿತ್ರಗಳಲ್ಲಿ ಒಂದಾಗಿತ್ತು. ಸ್ಪರ್ಧೆಯು ಸೂಕ್ಷ್ಮದರ್ಶಕಗಳನ್ನು ಬಳಸಿ ತೆಗೆಯಲಾದ ಅತ್ಯುತ್ತಮ ಛಾಯಾಚಿತ್ರಗಳನ್ನು ಗುರುತಿಸುತ್ತದೆ. ನಿರೀಕ್ಷೆಯಂತೆಯೇ ಇರುವೆಯ ಮುಖದ ಚಿತ್ರಕ್ಕೆ ಈ ಬಾರಿಯ ಪ್ರಶಸ್ತಿ ಸಿಕ್ಕಿದೆ. ಲಿಥುವೇನಿಯಾದ ಡಾ. ಯುಜೆನಿಜಸ್ ಕವಲಿಯೌಸ್ಕಾಸ್ ಅವರು ಈ ಚಿತ್ರವನ್ನು ತೆಗೆದಿದ್ದಾರೆ.
“ಲಿಥುವೇನಿಯಾದ ನನ್ನ ಮನೆಯ ಪಕ್ಕದಲ್ಲಿಯೇ ದೊಡ್ಡ ಅರಣ್ಯವಿದೆ. ಹಾಗಾಗಿ ಇಂಥ ಚಿತ್ರಗಳನ್ನುತೆಗೆಯುವುದು ನನಗೆ ಸುಲಭ. ಇರುವೆಯ ಮುಖದ ಚಿತ್ರ ಇಷ್ಟು ಡಿಟೇಲ್ ಆಗಿ ತೆಗೆದಾಗ ಇದನ್ನು ನಿಕಾನ್ ಸ್ಮಾಲ್ ವರ್ಲ್ಡ್ ಫೋಟೋಮೈಕ್ರೋಗ್ರಫಿ ಕಳಿಸಬಹುದು ಎಂದನಿಸಿತ್ತು. ಆದರೆ, ಪ್ರಶಸ್ತಿ ಬಂದಿದ್ದು ಖುಷಿಯಾಗಿದೆ ಎಂದಿದ್ದಾರೆ. ಸೃಷ್ಟಿಕರ್ತ ಜಗತ್ತಿನ ಜೀವಿಗಳನ್ನು ಯಾವೆಲ್ಲಾ ರೀತಿಯಲ್ಲಿ ವಿನ್ಯಾಸ ಮಾಡಿದ್ದಾನೆ ಎನ್ನುವ ನೋಡುವ ಕುತೂಹಲ ನನಗಂತೂ ಇದೆ. ಹಾಗಾಗಿ ಈ ರೀತಿಯ ಚಿತ್ರಗಳನ್ನು ತೆಗೆಯುವುದು ನನಗೆ ಇಷ್ಟ. ಪ್ರತಿ ಪ್ರಾಣಿಗಳನ್ನು, ಕೀಟಗಳನ್ನು ಅಮೂಲಾಗ್ರವಾಗಿ ಚಿತ್ರಿಸುತ್ತೇನೆ. ಫೋಟೋಗ್ರಫಿಯ ಮೂಲ ಉದ್ದೇಶವೇ ಅನ್ವೇಷಣೆ” ಎಂದು ಕವಲಿಯೌಸ್ಕಾಸ್ ಹೇಳುತ್ತಾರೆ.
ವೈರಲ್ ಆದ ಫೋಟೋ ನೋಡಿ ನೋಡುಗರೆಲ್ಲರು ಆಶ್ಚರ್ಯಚಕಿತರಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ವ್ಯಕ್ತಿ ಇದು ಅತ್ಯಂತ ಭಯಾನಕ ಚಿತ್ರ ಎಂದು ಹೇಳಿದ್ದಾರೆ. ಟ್ವಿಟರ್‌ನಲ್ಲಿ ಈ ಕುರಿತಾಗಿ ಬರೆದುಕೊಂಡಿರುವ ಅವರು, ಈಗ ಇರುವೆಯ ಕುರಿತಾಗಿ ನನ್ನ ಗ್ರಹಿಕೆ ಖಂಡಿತವಾಗಿ ಬದಲಾಗಿದೆ ಎಂದಿದ್ದಾರೆ. ಇನ್ನೊಂದೆಡೆ, ಮನುಷ್ಯರು ಯಾವುದೇ ಸಮಸ್ಯೆ ಇಲ್ಲದೆ ಬದುಕಬೇಕು ಎನ್ನುವ ಕಾರಣಕ್ಕಾಗಿ ಪ್ರಕೃತಿ ಇವುಗಳನ್ನು ಬಹಳ ಚಿಕ್ಕದಾಗಿ ರಚನೆ ಮಾಡಿವೆ ಎಂದಿದ್ದಾರೆ. ಬಹುಶಃ ಆಂಟ್ಜ್ ಎನ್ನುವ ಚಿತ್ರದಲ್ಲಿ ಇರುವೆಯನ್ನು ತಪ್ಪಾಗಿ ಬಿಂಬಿಸಿದ್ದಾರೆ ಎಂದು ಬರೆದಿದ್ದರೆ, ಮತ್ತೊಬ್ಬ ‘ಈ ಚಿತ್ರವನ್ನ ನೋಡಿದ ಬಳಿ ನಾನು ಮತ್ತೆ ಮಲಗೋದಿಲ್ಲ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಫೋಟೋಗ್ರಾಫರ್ ಯುಜೆನಿಜಸ್ ಕವಲಿಯೌಸ್ಕಾಸ್, ‘ಪ್ರಕೃತಿಯಲ್ಲಿ ಭಯಾನಕ ಎನ್ನುವಂಥ ವಿಚಾರವೇ ಇಲ್ಲ’ ಎಂದಿದ್ದಾರೆ.