ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ್ರೂ ಹಾಕಲ್ಲ ದಂಡ
ದೀಪಾವಳಿ ಹಬ್ಬಕ್ಕೆ ವಾಹನ ಸವಾರರಿಗೆ ಸರ್ಕಾರದಿಂದ ಸಿಹಿಸುದ್ದಿ ದೊರಕಿದ್ದು, ಹಬ್ಬದ ಸಂದರ್ಭದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಜನರಿಗೆ ದಂಡ ವಿಧಿಸಲಾಗುವುದಿಲ್ಲ ಎಂದು ಹೇಳಿದೆ.
ಅಕ್ಟೋಬರ್ 21 ರಿಂದ ಅಕ್ಟೋಬರ್ 27 ರವರೆಗೆ ಟ್ರಾಫಿಕ್ ಪೊಲೀಸರು ಜನರಿಂದ ಯಾವುದೇ ದಂಡವನ್ನು ಸಂಗ್ರಹಿಸುವುದಿಲ್ಲ. ಇಂತಹದೊಂದು ನಿರ್ಧಾರವನ್ನು ಗುಜರಾತ್ ಸರ್ಕಾರ ಘೋಷಿಸಿದೆ.
ಗುಜರಾತ್ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಶುಕ್ರವಾರ ಈ ಘೋಷಣೆ ಮಾಡಿದ್ದು, ದೀಪಾವಳಿ ಹಬ್ಬದ ದೃಷ್ಟಿಯಿಂದ ಗುಜರಾತ್ನ ಸಂಚಾರ ಪೊಲೀಸರು ಅಕ್ಟೋಬರ್ 27 ರವರೆಗೆ ಟ್ರಾಫಿಕ್ ನಿಯಮ ಉಲ್ಲಂಘಿಸುವವರಿಂದ ಯಾವುದೇ ದಂಡವನ್ನು ಸಂಗ್ರಹಿಸುವುದಿಲ್ಲ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಮಾರ್ಗದರ್ಶನದಂತೆ ರಾಜ್ಯ ಗೃಹ ಇಲಾಖೆಯಿಂದ ದೀಪಾವಳಿ ಸಂದರ್ಭದಲ್ಲಿ ಜನರಿಗೆ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಈ ಅವಧಿಯಲ್ಲಿ ಯಾರಾದರೂ ಹೆಲ್ಮೆಟ್ ಅಥವಾ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಸಿಕ್ಕಿಬಿದ್ದರೆ ಅಥವಾ ಇತರ ಯಾವುದೇ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ, ನಮ್ಮ ಪೊಲೀಸರು ಅವರಿಗೆ ಹೂವು ನೀಡುತ್ತಾರೆ’ ಎಂದು ಸಚಿವರು ಹೇಳಿದರು.