ಪ್ರೇಮ ವೈಫಲ್ಯ | ಫ್ರೆಂಡ್ ಜೊತೆ ಮಾತನಾಡುವಾಗ ಮನೆಗೆ ಬಂದ ಮಾಜಿ ಪ್ರಿಯಕರ | ಆಮೇಲೆ ನಡೆದದ್ದೆಲ್ಲಾ ದುರಂತ

ಕೇರಳದ ಕಣ್ಣೂರು ಜಿಲ್ಲೆಯ ಪನೋರ್ ಪಟ್ಟಣದಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿರುವ ಘಟನೆಯೊಂದು ನಡೆದಿದೆ. ನಿನ್ನೆ ( ಅ.22) ರಂದು ಈ ಘಟನೆ ನಡೆದಿದ್ದು, ಯುವತಿಯ ಮೃತದೇಹ ಆಕೆಯ ಮನೆಯ ಬೆಡ್‌ರೂಮ್‌ನಲ್ಲಿ ಪತ್ತೆಯಾಗಿತ್ತು. ಆರೋಪಿ ಶ್ಯಾಮಜಿತ್ ಎಂಬಾತ ಪೊಲೀಸರಿಗೆ ಶರಣಾದ ಬಳಿಕ ಇದೊಂದು ಬರ್ಬರ ಹತ್ಯೆ ಪ್ರಕರಣ ಎಂಬುದು ತಿಳಿದು ಬಂದಿದೆ. ಕೂತುಪರಂಬುವಿನ ಮನಾಂಥೇರಿ ಮೂಲದ ಶ್ಯಾಮಜಿತ್ ಪೊಲೀಸರಿಗೆ ಶರಣಾಗಿದ್ದು, ಪ್ರೇಮ ವೈಫಲ್ಯವೇ ಕೊಲೆಗೆ ಕಾರಣ ಎಂಬುದು ಆರೋಪಿಯ ಹೇಳಿಕೆಯಿಂದ ಬಯಲಾಗಿದೆ. ಸದ್ಯ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

 

ಕೊಲೆಯಾದ ಯುವತಿಯ ಹೆಸರು ವಿಷ್ಣು ಪ್ರಿಯಾ.

ನಿನ್ನೆ ವಿಷ್ಣುಪ್ರಿಯಾ, ಸ್ನೇಹಿತೆಗೆ ವಿಡಿಯೋ ಕರೆ ಮಾಡಿ ಮಾತನಾಡುತ್ತಿರುವ ಸಂದರ್ಭದಲ್ಲಿ ಆರೋಪಿ ಶ್ಯಾಮಜಿತ್ ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದಾನೆ. ಕೂಡಲೇ ಗಾಬರಿಗೊಂಡ ಆಕೆ ಫೋನ್ ಮೂಲಕ ತನ್ನ ಸ್ನೇಹಿತೆಗೆ ಅವನ ಹೆಸರನ್ನೂ ಹೇಳಿದ್ದಾಳೆ. ಇದಾದ ಮರುಕ್ಷಣವೇ ಫೋನ್ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿದುಬಂದಿದೆ.

ಸುತ್ತಿಗೆ ಮತ್ತು ಚಾಕು ಹಿಡಿದುಕೊಂಡು ವಿಷ್ಣುಪ್ರಿಯಾ ಮನೆ ಪ್ರವೇಶಿಸಿದ ಆರೋಪಿ ಶ್ಯಾಮಜಿತ್, ಆಕೆಯ ಕತ್ತು ಸೀಳುವ ಮುನ್ನ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದಾನೆ. ಇದಕ್ಕೂ ಮೊದಲು ಆಕೆಯನ್ನು ಹುಡುಕಿಕೊಂಡು ಮೊದಲು ಅಡುಗೆ ಮನೆಗೆ ಹೋಗಿದ್ದಾನೆ. ಅಲ್ಲಿ ಕಾಣದಿದ್ದಾಗ, ಆಕೆಯ ರೂಮಿಗೆ ಹೋಗಿದ್ದಾನೆ. ಈ ವೇಳೆ ಆಕೆ ತನ್ನ ಸ್ನೇಹಿತೆ ಜೊತೆ ವಾಟ್ಸಪ್ ವೀಡಿಯೋ ಕಾಲ್‌ನಲ್ಲಿ ಇರುವುದನ್ನು ಗಮನಿಸಿದ್ದಾನೆ. ದಿಢೀರನೇ ಶ್ಯಾಮ್‌ಜಿತ್‌ನನ್ನು ನೋಡಿದ ವಿಷ್ಣು ಪ್ರಿಯಾ ಗಾಬರಿಯಿಂದಲೇ ಆತನ ಹೆಸರನ್ನು ಕೂಗಿಕೊಂಡಿದ್ದಾಳೆ. ಈ ವೇಳೆ ಆಕೆಯ ತಲೆಗೆ ಆತ ಸುತ್ತಿಗೆಯಿಂದ ಬಲವಾಗಿ ಹೊಡೆದಿದ್ದಾನೆ. ಇದಾದ ಬಳಿಕ ತಾನು ತಂದಿದ್ದ ಚಾಕುವಿನಿಂದ ಆಕೆಯ ಕುತ್ತಿಗೆಯನ್ನು ಸೀಳಿ, ಕೈಗಳನ್ನು ಕತ್ತರಿಸಿದ್ದಾನೆ.

ವಿಷ್ಣುಪ್ರಿಯಾಳ ದೇಹದಲ್ಲಿ 18 ಬಾರಿ ಕತ್ತರಿಸಿದ ಗುರುತುಗಳಿವೆ. ಆರೋಪಿ ಕೂತುಪರಂಬು ಅಂಗಡಿಯಿಂದ ಸುತ್ತಿಗೆಯನ್ನು ಖರೀದಿಸಿದ್ದನು. ಆರೋಪಿಯು ದಿನಗಟ್ಟಲೆ ವಿಷ್ಣುಪ್ರಿಯಾಳನ್ನು ಹಿಂಬಾಲಿಸಿ, ಆಕೆಯ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಿದ್ದ. ಈ ಸಮಯದಲ್ಲಿ ಆಕೆಯ ಚಿಕ್ಕಮ್ಮ ನಿಧನರಾದರು. ಆಕೆಯ ಒಬ್ಬಂಟಿಯಾಗಿರುವ ಸ್ಥಳವನ್ನು ಹುಡುಕಲು ಶ್ಯಾಮಜಿತ್ ಪ್ರಯತ್ನಿಸುತ್ತಿದ್ದನು. ಚಿಕ್ಕಮ್ಮನ ಅಂತ್ಯಕ್ರಿಯೆಯ ನಂತರ ವಿಷ್ಣುಪ್ರಿಯಾ ತನ್ನ ಮನೆಗೆ ಒಬ್ಬಳೇ ಹೋಗುವುದನ್ನು ಕಂಡ ಶ್ಯಾಮಜಿತ್, ಆಕೆಯ ಮೇಲೆ ದಾಳಿ ಮಾಡಲು ನಿರ್ಧರಿಸಿದ್ದಾನೆ. ಅವಳು ಸತ್ತಿದ್ದಾಳೆ ಎಂದು ಖಚಿತಪಡಿಸಿಕೊಂಡ ನಂತರ ಆರೋಪಿ ಅಲ್ಲಿಂದ ಓಡಿದ್ದಾನೆ.

ಶ್ಯಾಮಜಿತ್ ಮತ್ತು ವಿಷ್ಣುಪ್ರಿಯಾ ಈ ಹಿಂದೆ ಪ್ರೀತಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಇತ್ತೀಚೆಗಷ್ಟೇ ಇಬ್ಬರು ಬೇರೆಯಾದರು ಮತ್ತು ಸಂಬಂಧವನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ವಿಷ್ಣುಪ್ರಿಯಾ ಸ್ಪಷ್ಟಪಡಿಸಿದ್ದಳು. ಆದರೆ, ಇದು ಶ್ಯಾಮಜಿತ್ ಇಷ್ಟವಾಗಲಿಲ್ಲ. ಹೀಗಾಗಿ ಆಕೆಯ ಮೇಲೆ ಕೆಂಡಕಾರುತ್ತಿದ್ದ ಶ್ಯಾಮಜಿತ್ ಈ ಕೃತ್ಯ ಮಾಡಿದ್ದಾನೆ.

Leave A Reply

Your email address will not be published.