‘ ಬ್ರಾ’ ದಲ್ಲಿ ಅಕ್ರಮ ಚಿನ್ನ ಸಾಗಾಟ!!!

ದಿನಂಪ್ರತಿ ಕಳ್ಳತನ, ಸುಲಿಗೆ ದರೋಡೆ ಪ್ರಕರಣಗಳು ನಡೆಯುತ್ತಲೆ ಇರುತ್ತವೆ. ಆದರೆ, ಅಪರಾಧ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿದ್ದು, ಪೋಲಿಸ್, ಕಾನೂನು ಎಲ್ಲವೂ ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ವಿಧಿಸಿದರು ಕೂಡ ಇಲ್ಲಿನ ಚಾಲಾಕಿ ಕಳ್ಳರು ಕ್ಯಾರೇ ಎನ್ನದೆ ಎಗ್ಗಿಲ್ಲದೆ ಕಳ್ಳತನ ಮಾಡುತ್ತಲೇ ಇರುತ್ತಾರೆ.

ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಯಾಮಾರಿಸುವುದರಲ್ಲಿ ಆರೋಪಿಗಳು ಎತ್ತಿದ ಕೈ ಎಂದರೆ ತಪ್ಪಾಗದು. ಕಳ್ಳತನ ಮಾಡುವುದಕ್ಕಿಂತ ಹೆಚ್ಚಿನ ಸವಾಲಿನ ವಿಚಾರ ಕದ್ದ ಮಾಲನ್ನು ಅನುಮಾನ ಬರದಂತೆ ಸಾಗಾಟ ಮಾಡುವುದು ..

ಇಲ್ಲಿಯೂ ನಾನಾ ತಂತ್ರಗಳನ್ನು ತಮ್ಮ ಬತ್ತಳಿಕೆಯಿಂದ ಪ್ರಯೋಗಿಸಿ ಚಿನ್ನದ ಗಟ್ಟಿಯನ್ನು ತಿಂದು ಆಸ್ಪತ್ರೆ ಕದ ತಟ್ಟಿದ ಜೊತೆಗೆ ಶೂ, ಹ್ಯಾಟ್ ,ಬ್ಯಾಗ್,ಪೆನ್, ಮೊಬೈಲ್ ಹೀಗೆ ಹಲವು ವಸ್ತುಗಳಲ್ಲಿ ಇಟ್ಟು ಸಾಗಿಸುವಾಗ ಪೊಲೀಸರ ಬಲೆಗೆ ಬಿದ್ದ ಎಷ್ಟೋ ಪ್ರಕರಣಗಳಿವೆ.

ವಿದೇಶಗಳಿಂದ ಅಕ್ರಮವಾಗಿ ದೇಶದೊಳಕ್ಕೆ ಚಿನ್ನ, ಡ್ರಗ್ಸ ಸಾಗಿಸುವ ಕ್ರಿಮಿನಲ್‌ಗಳು ವಿಮಾನ ಪ್ರಯಾಣ ವೇಳೆ ಏನೇನೋ ಹರಸಾಹಸ ಪಡುತ್ತಾರೆ. ಇತ್ತೀಚೆಗೆ ನೂರಕ್ಕೂ ಹೆಚ್ಚು ಡ್ರಗ್ಸ್ ಕ್ಯಾಪ್ಸೋಲ್‌ಗಳನ್ನು ಹೊಟ್ಟೆಯಲ್ಲಿಟ್ಟುಕೊಂಡು ಬಂದಿದ್ದ ವಿದೇಶಿ ಪ್ರಜೆಯ ಪ್ರಕರಣದ ಬೆನ್ನಲ್ಲೇ ಮಳ್ಳಿ ಮಳ್ಳಿ ಮಿಂಚುಳ್ಳಿ.. ಎಂಬಂತೆ ಕಳ್ಳಿಯೊಬ್ಬಳು ಚಿನ್ನ ಸಾಗಿಸಲು ಇಂಥದ್ದೇ ವಿಫಲ ಯತ್ನ ಮಾಡಿ ಕಸ್ಟಮ್ಸ್ ಅಧಿಕಾರಿಗಳ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ.

ವಿದೇಶಗಳಿಂದ ಅಕ್ರಮವಾಗಿ ದೇಶದೊಳಕ್ಕೆ ಚಿನ್ನ, ಡ್ರಗ್ಸ್ ಸಾಗಿಸಲು ಸ್ಪೋರ್ಟ್ಸ್ ಬ್ರಾ, ಪ್ಯಾಡ್ ನಲ್ಲಿ ಮರೆಮಾಚಿ ಅಕ್ರಮವಾಗಿ ಚಿನ್ನ ಸಾಗಣಿಕೆ ಮಾಡುತ್ತಿದ್ದ ಮಹಿಳೆಯನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿರುವ ಘಟನೆ ನಡೆದಿದೆ.

ಈ ವೇಳೆ ಮಹಿಳೆಯಿಂದ 17 ಲಕ್ಷ ಮೌಲ್ಯದ 348 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ಅಕ್ಟೋಬರ್ 8 ರ ಬೆಳಗ್ಗೆ ಎಮಿರೇಟ್ಸ್ ಏರ್ ಲೈನ್ಸ್ ನ EK564 ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಹಿಳೆ ಬಂದಿದ್ದು, ಆಕೆ ನಡೆದುಕೊಂಡು ಬರುತ್ತಿದ್ದ ಭಂಗಿ ಮತ್ತು ಆಕೆ ಧರಿಸಿದ ಒಳಉಡುಪು ಅಸಹಜವಾಗಿ ಕಂಡು ಬಂದ ಹಿನ್ನೆಲೆ ಕಸ್ಟಮ್ಸ್ ನ ಮಹಿಳಾ ಅಧಿಕಾರಿಗಳಲ್ಲಿ ಅನುಮಾನ ಹುಟ್ಟುಹಾಕಿದೆ.

ಹಾಗಾಗಿ, ಕಸ್ಟಮ್ಸ್ ನ ಮಹಿಳಾ ಅಧಿಕಾರಿಗಳು ಆಕೆಯನ್ನು ತಡೆದು ವಿಚಾರಣೆ ನಡೆಸಿದ್ದಾಗ ಸಂಶಯಾಸ್ಪದ ರೀತಿಯಲ್ಲಿ ಉತ್ತರ ನೀಡಿದ್ದಾಳೆ.

ಆಕೆಯನ್ನು ವಶಕ್ಕೆ ಪಡೆದ ಮಹಿಳಾ ಅಧಿಕಾರಿಗಳು ಆಕೆ ಧರಿಸಿಧ ಒಳ ಉಡುಪು ತೆಗೆಯುವಂತೆ ಹೇಳಿದ್ದು, ಸ್ಪೋರ್ಟ್ಸ್ ಬ್ರಾ ಒಳಗಡೆ ಇದ್ದ ಪ್ಯಾಡ್ ನಲ್ಲಿ ಚಿನ್ನವನ್ನ ಬಚ್ಚಿಟ್ಟಿರುವುದು ಬಹಿರಂಗವಾಗಿದೆ.

17,53,630 ಮೌಲ್ಯದ 348 ಗ್ರಾಂ ಚಿನ್ನವನ್ನ ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ. ಎಲ್ಲರನ್ನು ಯಾಮಾರಿಸಲೂ ಹೋದ ಮಹಿಳೆ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.

Leave A Reply

Your email address will not be published.