BIG NEWS | ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ ; 83 ರೂಪಾಯಿಗೆ ಇಳಿದು ಬಿಟ್ಟ ರೂಪಾಯಿ ಮೌಲ್ಯ !
ವಿಶ್ವ ಒಪ್ಪಿಕೊಂಡ ವಹಿವಾಟಿನ ಕರೆನ್ಸಿಯಾದ ಡಾಲರ್ ಎದುರು ಭಾರತದ ರೂಪಾಯಿ ಐತಿಹಾಸಿಕ ಕುಸಿತ ಕಂಡಿದೆ. ಕಳೆದ ತಿಂಗಳು 79 ಮತ್ತು 80 ರ ಮಧ್ಯೆ ಓಲಾಡುತ್ತಿದ್ದ ರೂಪಾಯಿ ಬೆಲೆ ಇದೀಗ 83 ರೂಪಾಯಿಯವರೆಗೆ ತಲುಪಿದೆ.
ವಿದೇಶಿ ಬಂಡವಾಳದ ವಹಿವಾಟಿನಲ್ಲಿ ಉಂಟಾದ ನಿರಂತರ ಹೆಚ್ಚಳ ಮತ್ತು ಸಾಗರೋತ್ತರ ಮಾರುಕಟ್ಟೆಯಲ್ಲಿ ಅಮೇರಿಕಾ ಡಾಲರ್ ಬಲಗೊಂಡ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಐತಿಹಾಸಿಕವಾಗಿ ಕುಸಿತಕ್ಕೊಳಗಾಗಿ ದಾಖಲೆ ನಿರ್ಮಿಸಿದೆ.
ಬುಧವಾರ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯೇರಿಕೆಯಿಂದಾಗಿ ಮತ್ತು ಹಣದುಬ್ಬರದ ಹೆಚ್ಚಳದಿಂದಾಗಿ ಕೇಂದ್ರೀಯ ಬ್ಯಾಂಕಿಂಗ್ ದರವು ಪ್ರತಿ ಡಾಲರ್’ಗೆ ದಾಖಲೆಯ 83.02 ರೂಪಾಯಿಗೆ ಕುಸಿದಿತ್ತು ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಬುಧವಾರ ದಿನದ ಅಂತ್ಯಕ್ಕೆ ಸುಮಾರು 60 ಪೈಸೆ ಕುಸಿದು ಪ್ರತಿ ಡಾಲರ್’ಗೆ ಜೀವಮಾನದ ಕನಿಷ್ಠ ದರ 83.02 ತಲುಪಿತ್ತು.
ರೂಪಾಯಿ ಮೌಲ್ಯ ಕುಸಿಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, “ಜಾಗತಿಕವಾಗಿ ರೂಪಾಯಿ ಮೌಲ್ಯವು ಕುಸಿಯುತ್ತಿಲ್ಲ, ಬದಲಾಗಿ ಡಾಲರ್ ಬಲಗೊಳ್ಳುತ್ತಿದೆ” ಎಂಬ ಹೇಳಿಕೆಯನ್ನು ನೀಡಿದ್ದರು. ಉಕ್ರೇನ್ ಯುದ್ದ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಆಗುತ್ತಿರುವ ವ್ಯಾಪಾರೀ ಬದಲಾವಣೆಗಳಿಂದ ರೂಪಾಯಿಯ ಮೇಲೆ ಈ ಹೊಡೆತ ಬೀಳುತ್ತಿದೆ ಎನ್ನಲಾಗಿದೆ.